ಈ ಹಿಂದೆ ಪಿಎಫ್ ಮತ್ತು ಇಎಸ್ಐ ತುಂಬದ ಏಜೆನ್ಸಿ ಯವರಿಗೆ ಟೆಂಡರ್ ನೀಡಬಾರದು | ಜಿಲ್ಲಾ ಸಹಕಾರ ಸಂಘ ಜಾರಿಗೊಳಿಸಲು ಮನವಿ
ಯಾದಗಿರಿ: ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಸರ್ಕಾರಿ ಹಾಸ್ಟೆಲ್, ಆಶ್ರಮ ಶಾಲೆ, ವಸತಿ ಶಾಲೆ ಹಾಗೂ ಕಾಲೇಜ್ ಗಳಲ್ಲಿ ‘ ಡಿ ‘ ಗ್ರೂಪ್ ಕಾರ್ಮಿಕರಾಗಿ ಹೊರಗುತ್ತಿಗೆ ಮೇಲೆ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ 2010 ರಿಂದ 2020 ರ ವರೆಗೆ ಪಿಎಫ್ & ಇಎಸ್ಐ ಬಾಕಿ ಉಳಿಸಿಕೊಂಡಿರುವ ಹೊರಸಂಪನ್ಮೂಲ ಏಜೆನ್ಸಿಯವರಿಗೆ ಟೆಂಡರ್ ನೀಡಬಾರದು.
ಬಾಕಿ ಮೊತ್ತವನ್ನು ವಸೂಲಿ ಮಾಡಿ ಸಂಬಂಧಿಸಿದ ಕಾರ್ಮಿಕರಿಗೆ ಪಾವತಿ ಮಾಡಬೇಕು, ಟೆಂಡರ್ ಷರತ್ತು ಉಲ್ಲಂಘಿಸಿರುವ ಏಜೆನ್ಸಿ ಯವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಕೂಡಲೇ ಜಿಲ್ಲಾ ಸಹಕಾರ ಸಂಘ ಜಾರಿಗೆ ತರಬೇಕು ಎಂದು ಕೋರಿ ಎ.ಐ.ಯು.ಟಿ.ಯು.ಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ(ರಿ) ದಿಂದ ಮನವಿ ಪತ್ರ ಸಲ್ಲಿಸಲಾಯಿತು.
ನಿಯಮಾನುಸಾರ ಕಾರ್ಮಿಕರ ವೇತನದಲ್ಲಿ ಕಟಾವು ಮಾಡಿದ ಪಿಎಫ್ & ಇಎಸ್ಐ ಮೊತ್ತವನ್ನು ಕಾರ್ಮಿಕರ ಪಿಎಫ್ & ಇಎಸ್ಐ ಖಾತೆಗಳಿಗೆ ಜಮಾ ಮಾಡಬೇಕು. ಆದರೆ 2010 ರಿಂದ ಟೆಂಡರ್ ನೀಡಲಾದ ಏಜೆನ್ಸಿ ಯಾರು ಕಟಾವು ಮಾಡಿದ ಹಣವನ್ನು ಕಾರ್ಮಿಕ ಖಾತೆಗಳಿಗೆ ಜಮಾ ಮಾಡದೇ ಟೆಂಡರ್ ನಿಯಮವನ್ನು ಉಲ್ಲಂಘಿಸಿದ್ದಾರೆ.
ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮಕ್ಕೆ ತರಲಾಗಿದೆ. ಸಭೆಗಳಲ್ಲಿ ಸಹ ಪ್ರಸ್ತಾಪಿಸಲಾಗಿದೆ. ಆದರೆ ಕಾರ್ಮಿಕರಿಗೂ ಇನ್ನೂ ಪಾವತಿ ಮಾಡದೆ ಇರುವದು ಇಲಾಖೆಯ ವೈಫಲ್ಯವೇ ಆಗಿದೆ. ಆದ್ದರಿಂದ ಬರಬೇಕಾದ ಪಿಎಫ್ & ಇಎಸ್ಐ ಹಣವನ್ನು ಸಂಬಂಧಿಸಿದ ಏಜೆನ್ಸಿ ಯವರಿಂದ ವಸೂಲಿ ಮಾಡಿ, ಟೆಂಡರ್ ನಿಯಮ ಉಲ್ಲಂಘಿಸಿದ ಏಜೆನ್ಸಿ ಯವರಿಗೆ ಕಪ್ಪು ಪಟ್ಟಿಗೆ ಸೇರಿಸಿ ಮತ್ತು ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಏಜೆನ್ಸಿ ಯವರಿಗೆ ಮತ್ತೇ ಟೆಂಡರ್ ನೀಡಬಾರದು ಎಂದು ಮನವಿ ಮಾಡಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಆದೇಶದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ” ಜಿಲ್ಲಾ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘ” ಜಾರಿಗೆ ತಂದು ಆ ಮೂಲಕ ಕಾರ್ಮಿಕರ ವೇತನ ಪಾವತಿ, ಪಿಎಫ್ & ಇಎಸ್ಐ ನಿರ್ವಹಣೆ ಮಾಡಬೇಕು ಅಲ್ಲಿಯವರೆಗೂ ಸದ್ಯ ಚಾಲ್ತಿಯಲ್ಲಿರುವ ಏಜೆನ್ಸಿ ಯರನ್ನು ಟೆಂಡರ್ ನಿಯಮಾನುಸಾರ ಹಾಗೂ ಕಾರ್ಮಿಕ ಕಾನೂನು / ನಿಯಮಾನುಸಾರ ಮುಂದುವರೆಸಬೇಕು ಎಂದು ಮನವಿ ಸಲ್ಲಿಸಲಾಗಿದೆ.
ಮನವಿ ಪತ್ರ ಸ್ವಿಕರಿಸಿದ ಜಿಲ್ಲಾಧಿಕಾರಿಗಳು, ನಿಯಮಾನುಸಾರ ಕ್ರಮ ಕೈಗೊಳ್ಳುವುದು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, 15 ದಿನದಲ್ಲಿ ಸೂಕ್ತ ತನಿಖೆ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗುರುಮಠಕಲ್ ಶಾಸಕರಾದ ಶರಣಗೌಡ ಕಂದಕೂರು ರವರು, ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ಪತ್ರದ ಮೂಲಕ ತಿಳಿಸುವುದಾಗಿ ಹೇಳಿದರು. ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸಹ ಮನವಿ ಪತ್ರ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷರಾದ ಶರಣಪ್ಪ ಜಿ ತೆಳಿಗೇರಿಕರ್, ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್, ಜಿಲ್ಲಾ ಉಪಾಧ್ಯಕ್ಷರಾದ ತಾಜುದ್ದೀನ್ ಚೌಕಿ, ಸಹ ಕಾರ್ಯದರ್ಶಿ ಭೀಮಾಶಂಕರ ನಾಯ್ಕಲ್, ಶ್ರೀಕಾಂತ್ ಚಿಕ್ಕಮೇಟಿ, ಜಿಲ್ಲಾ ಸಮಿತಿ ಸದಸ್ಯರಾದ ಗಜಾನಂದ ನಾಟೇಕರ್, ಶ್ಯಾಮಪ್ಪ, ಹಣಮಂತ ಮೈಲಾಪುರ, ಮೋನಮ್ಮ ಇದ್ದರು.
