ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ  |  ಸಮೀಕ್ಷೆಯ ಲಿಂಕ್ ಸದುಪಯೋಗಪಡಿಸಿಕೊಳ್ಳಿ | ಜಿಲ್ಲಾಧಿಕಾರಿ ಡಾ. ಸುಶೀಲಾ.ಬಿ ಮಾಹಿತಿ

ಯಾದಗಿರಿ: ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಪ.ಜಾ ಜನಾಂಗದ ಸಮೀಕ್ಷೆ ಅವಧಿಯನ್ನು ಮೇ 29 ರವರೆಗೆ ವಿಸ್ತರಿಸಲಾಗಿದ್ದು, ಮನೆ ಮನೆ ಸಮೀಕ್ಷೆಯಿಂದ ಹೊರಗುಳಿದ ಪ.ಜಾ ಕುಟುಂಬಗಳು https://schedulecastesurvey.karnataka.gov.in/self declaration ಲಿಂಕ್ ಮೂಲಕ ಸ್ವಯಂ ಘೋಷಣೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ.ಜಾ. ಕುಟುಂಬಗಳ ಸಮೀಕ್ಷೆ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಮನೆ ಸಮೀಕ್ಷೆ ವೇಳೆಗೆ ಲಭ್ಯ ಇಲ್ಲದವರು ಹಾಗೂ ಜಿಲ್ಲೆಯಿಂದ ಬೆಂಗಳೂರು,ಗೋವಾ,ಪುಣೆ, ಹೈದರಾಬಾದ್ ಇತ್ಯಾದಿ ಸ್ಥಳಗಳಿಗೆ ತೆರಳಿರುವವರು ಈ ಆನ್ಲೈನ್ ಲಿಂಕ್ ನ್ನು ಬಳಸಿಕೊಳ್ಳುವ ಮೂಲಕ ಸ್ವಯಂ ಘೋಷಣೆ ಸಲ್ಲಿಸುವಂತೆ ಅವರು ತಿಳಿಸಿದ್ದಾರೆ.

ನ್ಯಾ.ಡಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿದ ಸರ್ಕಾರ, ಪರಿಶಿಷ್ಟ ಜಾತಿ ಕುಟುಂಬಗಳ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ( ಆರ್ಥಿಕ) ಸ್ಥಿತಿ ಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ ಒಳಮೀಸಲಾತಿ ವರ್ಗೀಕರಣ ಮಾಡಲು ದಿನಾಂಕ 5-5-25ರಿಂದ 17-5-25 ವರೆಗೆ ಮನೆ ಮನೆ ಸಮೀಕ್ಷೆಗೆ ಸೂಚಿಸಲಾಗಿತ್ತು.

ನಂತರ ಆಯೋಗದ ನಿರ್ದೇಶನದಂತೆ ಮನೆ ಮನೆ ಸಮೀಕ್ಷೆ ಅವಧಿಯನ್ನು ದಿ:29-5-25 ರವರೆಗೆ ವಿಸ್ತರಿಸಲಾಗಿದೆ. ಅದರಂತೆ ದಿ:19-5-25 ರಿಂದ 01-6-25 ರವರೆಗೆ ಆನ್ಲೈನ್ ಮೂಲಕ ಸ್ವಯಂ ಘೋಷಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು,ವಿಶೇಷ ಶಿಬಿರಗಳನ್ನು ಮೇ 30 ,ಮೇ31 ಹಾಗೂ ಜೂನ್1 ರಂದು ಏರ್ಪಡಿಸಲಾಗಿದೆ.ಆನ್ ಲೈನ್ ಮೂಲಕ ಸ್ವಯಂ ಘೋಷಣೆಯನ್ನು https://schedulecastesurvey.karnataka.gov.in/selfdeclaration/ ಪೋರ್ಟಲ್ ಮುಖಾಂತರ ಸಲ್ಲಿಸಬೇಕು.ಪಡಿತರ ಚೀಟಿ,ಆಧಾರ್ ಕಾರ್ಡ್,ಆಧಾರ್ ನೋಂದಣಿ ಸಂಖ್ಯೆ ಮುಖಾಂತರ, ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 2025ರಲ್ಲಿ ಅಂದಾಜು 3,28,428 ಪರಿಶಿಷ್ಟ ಜಾತಿ ಜನಸಂಖ್ಯೆ ಇದ್ದು,ಈ ಪೈಕಿ ಈವರೆಗೆ 2,79,230 ಜನಸಂಖ್ಯೆಯ ಸಮೀಕ್ಷೆ ನಡೆಸುವ ಮೂಲಕ ಶೇ 85 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಮೀಕ್ಷೆಯಲ್ಲಿ ಜಿಲ್ಲೆಯ ಪ್ರತಿಯೊಂದು ಮತಗಟ್ಟೆಯನ್ನು Enumeration Block ಎಂದು ಪರಿಗಣಿಸಲಾಗಿದೆ. EDCS ನಿರ್ದೇಶನಾಲಯದಿಂದ ಅಭಿವೃದ್ಧಿ ಪಡಿಸಲಾದ ಮೋಬೈಲ್ ಆಪ್ ಮೂಲಕ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು,ಜಿಲ್ಲೆಯ ಪ್ರತಿ ಮತಕ್ಷೇತ್ರಕ್ಕೆ ಸಹಾಯಕ ಆಯುಕ್ತರ ದರ್ಜೆಯ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.

ಯಾದಗಿರಿ ಮತಕ್ಷೇತ್ರಕ್ಕೆ ಯಾದಗಿರಿ ಸಹಾಯಕ ಆಯುಕ್ತರು, ಶಹಾಪುರ ಮತಕ್ಷೇತ್ರಕ್ಕೆ ಯಾದಗಿರಿ ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶ,ಸುರಪುರ ಕ್ಷೇತ್ರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಗುರುಮಠಕಲ್ ಮತಕ್ಷೇತ್ರಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.

ಜಿಲ್ಲೆಯ 1134 ಗಣತಿದಾರರು , ಮತಗಟ್ಟೆವಾರು ಸಮೀಕ್ಷೆ ನಡೆಸುವರು. ಪ್ರತಿ 1 ರಿಂದ 12 ಮತಗಟ್ಟೆ ಗಳಿಗೆ ಒಬ್ಬರನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ.ಪ್ರತಿ ಮತಗಟ್ಟೆ ವಾರು ಪ.ಜಾ ಕುಟುಂಬಗಳು ಹೆಚ್ಚಿರುವ ಗ್ರಾಮ/ನಗರಗಳಲ್ಲಿ 350 ಹೆಚ್ಚುವರಿ ಗಣತಿದಾರರನ್ನು ನೇಮಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಮಾಸ್ಟರ್ ಟ್ರೇನರ ಗಳನ್ನು ನೇಮಿಸಲಾಗಿದೆ.ಪ್ರತಿ ಹತ್ತು ಎನುಮರೇಶನ್ ಬ್ಲಾಕ್ ಉಸ್ತುವಾರಿ ನೋಡಿಕೊಳ್ಳಲು ಓರ್ವ ಸೂಪರ್ ವೈಜರ್ ನೇಮಿಸಲಾಗಿದೆ. ಇವರು ಗಣತಿದಾರರು ಮಾಡಿದ ಗಣತಿಯ ಎನ್ಯುಮರೇಶನ್ ಬ್ಲಾಕ್ ಪ್ರಕಾರ ಶೇ.10ರಷ್ಟು ಮರು ಪರಿಶೀಲನೆಯನ್ನು ಮೋಬೈಲ್ ಆಪ್ ಮೂಲಕ ಮರು ಪರಿಶೀಲನೆ ಮಾಡುವರು ಎಂದು ಹೇಳಿದರು.

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ,ಅಪರ್ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!