ಯಾದಗಿರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪೂರರಿಂದ ಧ್ವಜಾರೋಹಣ
ಯಾದಗಿರಿ : ನವೆಂಬರ್ 01, ಕರ್ನಾಟಕದ ನೆಲ,ಜಲ,ನಾಡು,ನುಡಿಯ ರಕ್ಷಣೆಗೆ ನಾವೆಲ್ಲರೂ ಬದ್ದರಾಗೋಣ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ವಿವಿಧ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು,ಕನ್ನಡ ನಾಡಿನ ಏಕೀಕರಣ ಸಂದರ್ಭ ಹೋರಾಡಿದ, ಸುಭದ್ರ ನಾಡು ಕಟ್ಟಿದ ಮಹಾನ್ ಹೋರಾಟಗಾರರು, ನಾಯಕರನ್ನು ಸ್ಮರಿಸಿದ ಅವರು, ಹಲವರ ತ್ಯಾಗ ಬಲಿದಾನದ ಫಲವಾಗಿ ದೊರೆತ ಈ ನೆಲ, ಜಲ, ನಾಡು ,ನುಡಿಯ ರಕ್ಷಣೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಬದ್ದರಾಗೋಣ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದಲ್ಲಿ ಹಾಗೂ ವಿಶೇಷವಾಗಿ ಯಾದಗಿರಿ ಜಿಲ್ಲೆಗೆ ಸರ್ಕಾರ ನೀರಾವರಿ, ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಕಲ್ಪಿಸಿ ನೆರವಾಗಿದೆ.ನೂತನ ವೈದ್ಯಕೀಯ ಕಾಲೇಜ್, ಆಡಳಿತ ಕಚೇರಿ,ಶಾಲೆ ಕಾಲೇಜುಗಳನ್ನು ಸ್ಥಾಪಿಸಿದೆ. ನೂತನ ನರ್ಸಿಂಗ್ ಕಾಲೇಜಿಗೂ ಸಹ ಮಂಜೂರಾತಿ ನೀಡಿದೆ ಎಂದರು.
ರಾಜ್ಯ ಸರ್ಕಾರ ಪಂಚಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಬಡ ಜನರಿಗೆ ಆರ್ಥಿಕ ಬಲ ತುಂಬಿದೆ. ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದೆ ಎಂದು ಹೇಳಿದರು.
ಕರ್ನಾಟಕದ ಏಕೀಕರಣ ಹೋರಾಟ, ಬುದ್ಧ ಬಸವಾದಿ ಶರಣರು, ಮಹಾತ್ಮ ಗಾಂಧೀಜಿ, ಡಾ .ಬಾಬಾಸಾಹೇಬ್ಭ ಅಂಬೇಡ್ಕರ, ಜವಾಹರಲಾಲ್ ನೆಹರು, ಸೇರಿದಂತೆ ಕರ್ನಾಟಕದ ಭವ್ಯ ಇತಿಹಾಸ ಸ್ಮರಿಸಿದ ಅವರು ಈ ನಾಡಿನ ಕನ್ನಡ ಭಾಷೆಯ ಅಭ್ಯುದಯಕ್ಕೆ ಹಾಗೂ ಇತರ ಭಾಷೆಗಳಿಗೂ ಗೌರವ ನೀಡಿ,ಜಾತಿ, ಮತ,ಪಂಥ ಬದಿಗೊತ್ತಿ ನಾಡಿನ ಸೇವೆ ಮಾಡೋಣ ಹಾಗೂ ಕೀರ್ತಿ ಬೆಳಗಿಸೋಣ ಎಂದು ಹೇಳಿದರು.
ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣಕ್ಕೆ ಹೆಚ್ಚಿನ ಪ್ರಯತ್ನವನ್ನು ಮಾಡಿದ್ದಾರೆ. ಕರ್ನಾಟಕ ಏಕೀಕರಣವು ದೀರ್ಘವಾದ ವಿಶಿಷ್ಟ ಹೋರಾಟ. ಇದು ಭಾಷೆ ಮತ್ತು ಸಾಂಸ್ಕೃತಿಕ ಗಟ್ಟಿ ನೆಲೆಯ ಮೇಲೆ ರೂಪುಗೊಂಡಿದೆ. ನಮ್ಮ ಕರ್ನಾಟಕವು ತುಂಬಾ ವೈವಿಧ್ಯತೆಯನ್ನು ಹೊಂದಿರುವಂತಹ ನಾಡಾಗಿದೆ. ಇಂದು ನಾವು ಒಗ್ಗಟ್ಟಾಗಿರಲು, ನಮ್ಮ ನಾಡನ್ನು ಅಖಂಡ ಕರ್ನಾಟಕವನ್ನು ಮಾಡಲು ಹಲವಾರು ಹೋರಾಟಗಾರರು ಹೋರಾಡಿದ್ದಾರೆ. ಹರಿದು ಹೋಗಿದ್ದ ಪ್ರಾಂತ್ಯಗಳನ್ನು ಒಗ್ಗೂಡಿಸಲು ಹಲವಾರು ಹೋರಾಟಗಾರರು ಶ್ರಮಿಸಿದ್ದಾರೆ ಎಂದು ಹೇಳಿದರು.
ಮೈಸೂರು ಸಂಸ್ಥಾನವನ್ನು ಹೊರತುಪಡಿಸಿ ಉಳಿದ ಕನ್ನಡದ ಪ್ರದೇಶಗಳೆಲ್ಲ ಮುಂಬೈ, ಮದ್ರಾಸ್, ಕೊಡಗು ಇತರ ಸಂಸ್ಥಾನಗಳಾಗಿ ಹರಿದು ಹಂಚಿ ಹೋಗಿದ್ದವು. ಆಗ ಬ್ರಿಟಿಷರ ಆಡಳಿತವಿತ್ತು. ಕನ್ನಡಿಗರು ಪರಕೀಯರಂತೆ ಜೀವನ ನಡೆಸುವ ಅಸಹನೀಯ ಪರಿಸ್ಥಿತಿ ಎದುರಾಗಿತ್ತು. ಅಂದು ಕನ್ನಡಿಗರಿದ್ದರೂ, ಕನ್ನಡ ಸಂಸ್ಕೃತಿ ಇದ್ದರೂ ಕರ್ನಾಟಕವಿರಲಿಲ್ಲ. ಹೀಗಾಗಿ ಕರ್ನಾಟಕವನ್ನು ಒಂದುಗೂಡಿಸಲು ಹೋರಾಟ ಅನಿವಾರ್ಯ ವಾಯಿತು. ಸಮಗ್ರ ಕನ್ನಡ, ಕರ್ನಾಟಕಕ್ಕಾಗಿ ಹಲವಾರು ಮಹನೀಯರು ಹೋರಾಟ ನಡೆಸಿದರು. ಅಂತಹ ಮಹನೀಯ ರೆಂದರೆ, ರಾ.ಹ ದೇಶಪಾಂಡೆ, ದೊಡ್ಡ ಶ್ರೀನಿವಾಸರಾವ್, ಆಲೂರು ವೆಂಕಟರಾಯರು, ಡೆಪ್ಯೂಟಿ ಚನ್ನಬಸಪ್ಪ ಮೊದಲಾದ ಅಗ್ರಗಣ್ಯರು ಶ್ರಮಿಸಿದ್ದಾರೆ ಎಂದು ಹೇಳಿದರು.
ಸ್ವಾತಂತ್ರ್ಯ ನಂತರದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಹಲವಾರು ಸಮಿತಿಗಳನ್ನು ರಚಿಸಲಾಯಿತು.ಕೆಲವು ಪ್ರಮುಖ ಘಟನೆಗಳು ನಡೆದವು ಅವುಗಳೆಂದರೆ ಧಾರರ್ ಸಮಿತಿ, ಜೆ.ವಿ.ಪಿ ಕಮಿಟಿ, ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್, ಆಂದ್ರಪ್ರದೇಶ ರಚನೆ, ನಾನರ್ ಕಾಂಗ್ರೆಸ್, ಫಜಲ್ ಅಲಿ ಕಮಿಟಿ, ಫಜಲ್ ಅಲಿ ಕಮಿಟಿಯ ವರದಿಯಂತೆ ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳನ್ನು ಮೈಸೂರಿನೊಂದಿಗೆ ವಿಲಿನಗೊಂಡವು. ಹೊಸ ರಾಜ್ಯಕ್ಕೆ ಮೈಸೂರು ರಾಜ್ಯ ಎಂದು ಹೆಸರಿಡಲಾಯಿತು.
ನವೆಂಬರ್ 01, 1956 ರಂದು ಏಕೀಕೃತ ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. ಹೊಸ ರಾಜ್ಯವನ್ನು ಅಂದಿನ ರಾಷ್ಟçಪತಿ ರಾಜೇಂದ್ರ ಪ್ರಸಾದರು ಉದ್ಘಾಟಿಸಿದರು. ಜಯಚಾಮರಾಜ್ ಒಡೆಯರ್ ಅವರು ರಾಜ್ಯಪಾಲರಾದರು ಮುಖ್ಯ ಮಂತ್ರಿಯಾಗಿ ಎಸ್.ನಿಜಲಿಂಗಪ್ಪನವರು ಆಯ್ಕೆಯಾದರು ಬೆಂಗಳೂರು ರಾಜಧಾನಿಯಾಯಿತು.
ಮೈಸೂರಿಗೆ ಕರ್ನಾಟಕ ಎಂದು ನಾಮಕರಣ ಏಕೀಕೃತ ಮೈಸೂರು ಎಂದು ಹೆಸರಿಸಿದ್ದರು. ಕನ್ನಡಿಗರು ಹೋರಾಟ ಮುಂದುವರೆಸಿದರು. ಅದರ ರಾಜಕೀಯ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆಗಳನ್ನು ಆಧರಿಸಿ ಮೈಸೂರಿಗೆ ಕರ್ನಾಟಕ ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಲಾಯಿತು.
ಕೊನೆಗೆ ದೇವರಾಜ್ ಅರಸರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನವೆಂಬರ್ 01, 1973 ರಂದು ನಾಮಕರಣ ಮಾಡಲಾಯಿತು ಎಂದು ತಿಳಿಸಿದರು.
ಕನ್ನಡ ಭಾಷೆಗೆ 2000 ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆ ಇದೆ. ಬುದ್ಧ ಬಸವಾದಿ ಶರಣರು, ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್, ಜವಾಹರಲಾಲ್ ನೆಹರು ಸೇರಿದಂತೆ ಹಲವು ನಾಯಕರು ತೋರಿದ ದಾರಿಯಲ್ಲಿ ಸಾಗಿ ಬಂದ ಕರ್ನಾಟಕ ದೇಶದ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆ ನೀಡಿದೆ.
ಕನ್ನಡ ಭಾಷೆ ಶಾಸ್ತ್ರೀಯ ಭಾಷೆಯಾಗಿ ಜನಮಾನಸದಲ್ಲಿ ಉಳಿದಿದೆ. ರಾಷ್ಟ್ರಕೂಟರು, ಬಾದಾಮಿ ಚಾಲುಕ್ಯರು, ಕಲ್ಯಾಣ ಚಾಲುಕ್ಯರು, ಶಾತವಾಹನರು, ಮೌರ್ಯರು, ಕದಂಬರು, ಗಂಗರು, ಹೊಯ್ಸಳರು, ವಿಜಯನಗರ ಅರಸರು, ಬಹಮನಿ ಆದಿಲ್‌ಶಾಹಿ ಸುಲ್ತಾನರು, ಮೈಸೂರು ಒಡೆಯರ್‌ರು, ಹೈದರ್ ಅಲಿ, ಟಿಪ್ಪು ಸುಲ್ತಾನ್, ಬ್ರಿಟೀಷರ ಆಳ್ವಿಕೆಯನ್ನು ಕನ್ನಡ ನಾಡು ಕಂಡಿದೆ. ಬಹುಧರ್ಮ, ಬಹುಜಾತಿ, ಬಹುಭಾಷೆ, ಬಹುಸಂಸ್ಕೃತಿಯನ್ನು ಹೊಂದಿರುವ ನಾಡಾಗಿದೆ ಎಂದು ಹೇಳಿದರು.
ಪ್ರಸ್ತುತ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಈ ನಾಡಿನ ಬಡಜನರಿಗೆ ಸಾಮಾಜಿಕ ನ್ಯಾಯ ಒದಗಿಸಿ ಈ ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.
ಕನ್ನಡ ನಾಡಿನ ನೆಲ, ಜಲ, ಭಾಷೆಯ ಸಂರಕ್ಷಣೆ ಹಾಗೂ ಅಭ್ಯುದಯಕ್ಕಾಗಿ ಶ್ರಮಿಸುತ್ತಿದೆ. ರಾಜ್ಯ ಸರ್ಕಾರ ನಮ್ಮ ನಾಡಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ ಎಂಬುದನ್ನು ತಿಳಿಸಲು ನಾನು ಹರ್ಷಪಡುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಧನೆಗೈದವರಿಗೆ ಸನ್ಮಾನಿಸಲಾಯಿತು. ವಿವಿಧ ಇಲಾಖೆ ಗಳ ಅಭಿವೃದ್ಧಿ ಕಾರ್ಯಕ್ರಮಗಳ ಸ್ತಬ್ಧ ಚಿತ್ರ ,ಮಕ್ಕಳ ಸಾಂಸ್ಕೃತಿಕ,ಕವಾಯತು ಕಾರ್ಯಕ್ರಮಗಳು ಗಮನ ಸೆಳೆದವು.
ಸಾಧಕರಿಗೆ ಸನ್ಮಾನ: ಸಂಗೀತ ಕ್ಷೇತ್ರದಲ್ಲಿ ಸೇವೆಸಲ್ಲಿಸಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಗ್ರಾಮದ ಶರಣಕುಮಾರ, ಕಲೆ ಕ್ಷೇತ್ರದಲ್ಲಿ ಸೇವೆಸಲ್ಲಿಸಿರುವ ಶಹಾಪೂರ ತಾಲೂಕಿನ ಮಡ್ನಾಳ ಗ್ರಾಮದ ಶರಣಪ್ಪ, ಸಾಹಿತ್ಯ ಕ್ಷೇತ್ರ ಸೇವೆಸಲ್ಲಿಸಿರುವ ಯಾದಗಿರಿ ನಗರ ಶಿವನಗರ ಮಡಿವಾಳಪ್ಪ ಸಜ್ಜನ, ಸಮಾಜ ಸೇವೆಸಲ್ಲಿಸಿರುವ ಯಾದಗಿರಿ ನಗರದ ಹೊಸಹಳ್ಳಿ ಕ್ರಾಸ್ ಜಯಲಕ್ಷ್ಮಿ ಆರ್, ಪ್ರತಿಕ್ಯೋದ್ಯಮ ಕ್ಷೇತ್ರದಲ್ಲಿ ಸೇವೆಸಲ್ಲಿಸಿರುವ ಸುರಪುರ ತಾಲೂಕಿನ ಕೆಂಭಾವಿ ಬಸವಂತ ರಾಯಗೌಡ ಪಾಟೀಲ್, ಕ್ರೀಡಾ ಕ್ಷೇತ್ರದ ದೇವರಗೋನಾಲ ಗ್ರಾಮದ ಕು.ಮುತ್ತಮ್ಮ ಬಿ.ಸಾ, ಶಾಂತಿ ಸೌಹಾರ್ದತೆ ಕ್ಷೇತ್ರದಲ್ಲಿ ಸೇವೆಸಲ್ಲಿಸಿರುವ ಸುರಪುರ ನಗರ ವೆಂಕಟೇಶ್ವರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು: ಯಾದಗಿರಿಯ ಖಂಡೇವಾಲ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಸಪ್ತಗಿರಿ ಪ್ರೌಢ ಶಾಲೆ, ಚಿರಂಜೀವಿ ಪ್ರೌಢ ಶಾಲೆ, ಶ್ರೀ ಮೈಲಾರಲಿಂಗೇಶ್ವರ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಟ್ರಸ್ಟ್, ನ್ಯೂ ಕ್ರೀಯೇಷನ್ ಡ್ಯಾನ್ಸ್ ಅಕಾಡೆಮಿ ಮಕ್ಕಳಿಂದ ನೃತ್ಯ, ಎ.ಬಿ.ಸಿ.ಡಿ ಡ್ಯಾನ್ಸ್ ಸ್ಕೂಲ್ ಅವರಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಜಿ.ಸಂಗೀತಾ, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ವಿನಾಯಕ ಪಾಟೀಲ್, ನಗರಸಭೆ ಅಧ್ಯಕ್ಷ ಲಲಿತಾ ಅನಪೂರ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಹೊಟ್ಟಿ , ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತರು ಡಾ.ಹಂಪಣ್ಣ ಸಜ್ಜನ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಧರಣೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ ಮಠಪತಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಗುರುಮಠಕಲ್ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಜ್ಯೋತಿಲತಾ ತಡಬಿಡಿ ವಂದನಾರ್ಪಣೆ ನೆರವೇರಿಸಿದರು, ಯಾದಗಿರಿ ಸರಕಾರಿ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಕಾರ್ಯಕ್ರಮ ನಿರೂಪಿಸಿದರು.