ಅರ್ಹ ಪಡಿತರ ಚೀಟಿದಾರರು ಪಡಿತರ ಆಹಾರ ಧಾನ್ಯ ಪಡೆಯುವಲ್ಲಿ ವಂಚಿತರಾಗದಿರಲಿ | ಕೃಷಿ ಸಂಬಂಧಿತ ಅಂಗಡಿ ಮಾಲೀಕರು, ಡೀಲರ್ಸ್ ಹಾಗೂ ಸಂಘ ಸಂಸ್ಥೆಗಳಿಗೆ ಎಚ್ಚರಿಕೆ ನೋಟಿಸ್ ರವಾನಿಸಿ | ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚನೆ
ಯಾದಗಿರಿ: ಜಿಲ್ಲೆಯ ಅರ್ಹ ಪಡಿತರ ಚೀಟಿದಾರರು ಕಳೆದ ಆರು ತಿಂಗಳಿಂದ ಪಡಿತರ ಆಹಾರಧಾನ್ಯ ಪಡೆಯದೇ ಇರುವವರ ಬಗ್ಗೆ ಪರಿಶೀಲನೆ ನಡೆಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ,ಕಾನೂನು ಮಾಪನಾ ಶಾಸ್ತ್ರ,ಯೋಜನಾ ಕಾರ್ಯಕ್ರಮ ಮತ್ತು ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮನೋಜ್ ಜೈನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ,ಕಳೆದ ಆರು ತಿಂಗಳಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಪಡಿತರ ಚೀಟಿದಾರರು ಪಡಿತರ ಆಹಾರಧಾನ್ಯ ಪಡೆದಿಲ್ಲ. ವಲಸೆ ಕಾರಣ ಸೇರಿದಂತೆ ಈ ಕುರಿತು ಪರಿಶೀಲನೆ ನಡೆಸಿ ಆಯಾ ನ್ಯಾಯ ಬೆಲೆ ಅಂಗಡಿ, ಗ್ರಾಮ ಪಂಚಾಯತ್ ವಾರು ಸಂಬಂಧಿಸಿದ ವರ ಪಟ್ಟಿ ಪ್ರಚುರಪಡಿಸಿ, ಪಡಿತರ ಆಹಾರಧಾನ್ಯ ಪಡೆಯುವಂತೆ ಎಚ್ಚರಿಕೆ ನೀಡಬೇಕು.ಪಡಿತರ
ಪಡೆಯಲು ವಿಫಲವಾದಲ್ಲಿ ಅಂತಹವರ ರೇಷನ್ ಕಾರ್ಡ್ ಅಮಾನತ್ತು ಬಗ್ಗೆ ಹಾಗೂ ಅರ್ಹ ಪಡಿತರ ಚೀಟಿದಾರರು ಸಕಾಲಕ್ಕೆ ಆಹಾರಧಾನ್ಯ ಪಡೆಯುವ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಆಹಾರ ಇನ್ಸ್ಪೆಕ್ಟರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದ ಮಾರ್ಗಸೂಚಿಯನ್ವಯ ಅನರ್ಹರಿಗೆ ಬಿಪಿಎಲ್ ಕಾರ್ಡ್ ದೊರೆಯಬಾರದು. ಈ ಕುರಿತು ಆಹಾರ ನಿರೀಕ್ಷಕರು, ಆಹಾರ ಶಿರಸ್ತೆದಾರರು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ನಿಗಾ ಇಡುವ ಜೊತೆಗೆ ನಿರಂತರ ಪರಿಶೀಲನೆ ನಡೆಸಬೇಕೆಂದು ಸೂಚನೆ ನೀಡಿದರು.
ಅಂಗನವಾಡಿ ನಿವೇಶನ ಸಮಸ್ಯೆ ನಿವಾರಣೆಗೆ ಜಿಲ್ಲೆಯಲ್ಲಿ ತಾಲೂಕುವಾರು ವಕ್ಫ್ ಆಸ್ತಿ ವ್ಯಾಪ್ತಿಯಲ್ಲಿ ಜಾಗ ಕೊಡಿಸುವ ಕುರಿತಂತೆ ಪ್ರಸ್ತಾವನೆ ಸಲ್ಲಿಸಬೇಕು. ಈ ಭಾಗದಲ್ಲಿ ವಿದ್ಯಾರ್ಥಿಗಳು ಕಾಲೇಜು ಬಿಡುವ ಪ್ರಮಾಣ ಹೆಚ್ಚಾಗಿರುವುದನ್ನು ತಡೆಯಲು ಕರ್ನಾಟಕ ಓಪನ್ ಯುನಿವರ್ಸಿಟಿ ಪ್ರಾದೇಶಿಕ ಕೇಂದ್ರ ಮೂಲಕ ತರಬೇತಿ, ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲು ಡಿಡಿಪಿಯು ಹಾಗೂ ಪದವಿ ಕಾಲೇಜು ಪ್ರಾಂಶುಪಾಲರಿಗೆ ತಿಳಿಸಿದ ಅವರು ಪರಸ್ಪರ ಸಮನ್ವಯತೆ ಸಭೆಗಳು ಮೂಲಕ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕಳಪೆ ಗುಣಮಟ್ಟ ಬೀಜ, ರಸಗೊಬ್ಬರ ಮಾರಾಟವಾಗದಂತೆ ಮುನ್ನೆಚ್ಚರಿಕೆವಹಿಸಬೇಕು. ಈ ಕುರಿತು ದೂರು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದ ಅವರು ಕೃಷಿ ಸಂಬಂಧಿತ ಅಂಗಡಿ ಮಾಲೀಕರು, ಡೀಲರ್ಸ್ ಹಾಗೂ ಸಂಘ ಸಂಸ್ಥೆಗಳಿಗೆ ಈ ಕುರಿತು ಎಚ್ಚರಿಕೆ ನೋಟಿಸ್ ರವಾನಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳಡಿ ಗುರಿಗೆ ತಕ್ಕಂತೆ ಪ್ರಗತಿ ಸಾಧಿಸಬೇಕು. ನಿವೇಶನ ಇದ್ದವರಿಗೆ ಮನೆ ನಿರ್ಮಾಣಕ್ಕೆ ವಿವಿಧ ವಸತಿ ಯೋಜನೆಯಡಿ ನೀಡಲಾಗುವ ಅನುದಾನ ಫಲಾನುಭವಿಗಳು ಸದ್ಬಳಕೆ ಮಾಡಿಕೊಂಡಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಜಿಯೋ ಟ್ಯಾಗಿಂಗ್ ಕಡ್ಡಾಯವಾಗಿ ಸರಿಯಾಗಿ ಮಾಡುವಂತೆ ಸೂಚಿಸಿದ ಅವರು ಲೋಪ ಕಂಡು ಬಂದಲ್ಲಿ ಆಯಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಿಡಿಓ ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗಾಗಿ ಆಯಾ ಧರ್ಮಗಳ ಅರ್ಚಕರು ಹಾಗೂ ಮೌಲ್ವಿಗಳಿಗೂ ಜಾಗೃತಗೊಳಿಸಿ,ಆ ಮೂಲಕ ಸಾರ್ವಜನಿಕರಲ್ಲಿಯೂ ಅರಿವು ಮೂಡಿಸಬೇಕು.ಕಡಿಮೆ ಫಲಿತಾಂಶ ತಂದ ಹಾಗೂ ವಿವಿಧ ವಿಷಯಗಳಲ್ಲಿ ಹೆಚ್ಚು ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಶಾಲೆಗಳ ವ್ಯಾಪ್ತಿಯಲ್ಲಿ ನುರಿತವರಿಂದ ತರಬೇತು ಗೊಳಿಸಬೇಕು ಎಂದು ಸೂಚಿಸಿದರು.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಸುರಕ್ಷಾ ಯೋಜನೆಯಡಿ ಪ್ರತಿಯೊಬ್ಬ ವೇತನದಾರರು, ಕುಟುಂಬಸ್ಥರು ನೋಂದಾಯಿಸಿಕೊಳ್ಳಬೇಕು. ಮಾಶಾಸನ,ವೇತನ, ನಿವೃತ್ತಿ, ಆರೋಗ್ಯ ಸಂಬಂಧಿತ ಸವಲತ್ತುಗಳನ್ನು, ಫಲಾನುಭವಿಗಳಿಗೆ ತಲುಪಿಸುವ ವಿಷಯಗಳಲ್ಲಿ ವಿಳಂಬ ಧೋರಣೆ ಸಹಿಸಲಾಗುವುದಿಲ್ಲ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಮುಂಬರುವ ಪಕೃತಿ ವಿಕೋಪ, ಅತಿವೃಷ್ಟಿ,ನೆರೆ ಎದುರಿಸಲು ಹಾಗೂ ಕುಡಿಯುವ ನೀರು, ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮ ಗಳ ಬಗ್ಗೆ ವಿವರಿಸಿದರು. ಜಿ.ಪಂ.ಸಿಇಓ ಲವೀಶ್ ಒರಡಿಯಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
