ದುಗುನೂರು ಕ್ಯಾಂಪ್ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ, ಗ್ರಾಮಸ್ಥರಿಂದ ಶಿಕ್ಷಕರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಯಾದಗಿರಿ: ಗ್ರಾಮೀಣ ಪ್ರದೇಶದಲ್ಲಿ ಇಲ್ಲಗಳ ಮಧ್ಯೆಯೇ ಶಿಕ್ಷಕ ಹನುಮಂತಪ್ಪ ಕೆ.ಕೆ. ಅವರ ಸೇವೆ ಅವಿಸ್ಮರಣೀಯ ಎಂದು ಶಿಕ್ಷಣ ಪ್ರೇಮಿ ತಾಯಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಹತ್ತಿಕುಣಿ ಪಂಚಾಯಿತಿಯ ದುಗುನೂರು ಕ್ಯಾಂಪ್ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕ ಹನುಮಂತಪ್ಪ ಕೆ.ಕೆ ದಂಪತಿಗಳಿಗೆ ಬೀಳ್ಕೊಡಲಾಯಿತು.
ಈ ವೇಳೆ ಮಾತನಾಡಿ, ಗ್ರಾಮದಲ್ಲಿ ಅಲ್ಲಲ್ಲಿ ಕೆಲವು ಗುಡಿಸಲುಗಳು ಮಾತ್ರ ಇದ್ದವು, ಆ ಸಮಯದಲ್ಲಿ ಶಾಲೆ ಇರಲಿ ಶಾಲೆ ನಿರ್ಮಿಸಲು ಸ್ಥಳವನ್ನು ಸಹ ಗುರುತಿಸಿರಲಿಲ್ಲ ಅಂತಹ ಸಂದಿಗ್ಧ ಸ್ಥಿತಿಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಮಳೆ ಬಿಸಿಲು ಎನ್ನದೆ ಇಂದಿನ ಕಾಲದಲ್ಲಿಯೂ ಸಹ ಮರದ ಕೆಳಗೆ ಕುಳಿತು ನಮ್ಮ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ ಎಂದು ಅವರ ಕರ್ತವ್ಯ ನಿಷ್ಠೆಯನ್ನು ಹೊಗಳಿದರು.
ನೂರಾರು ಮಕ್ಕಳಿಗೆ ಜ್ಞಾನಾರ್ಜನೆ ಮಾಡಿಸಿ, ಗ್ರಾಮದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿದ್ದಾರೆ. ಮಕ್ಕಳಿಗೆ ಶಿಕ್ಷಣದ ಜೊತೆ ಶಿಸ್ತು ಮತ್ತು ಜೀವನದ ಮೌಲ್ಯಗಳನ್ನು ಕಲಿಸಿದ್ದಾರೆ ಎಂದು ಹೇಳಿದರು.
ಹತ್ತಿಕುಣಿಯ ಶರಣು ಗಡೆದ್ ಮಾತನಾಡಿ, ಸರಳ ವ್ಯಕ್ತಿತ್ವದ ಅಪರೂಪದ ಶಿಕ್ಷಕರ ಸೇವೆ ಸದಾ ಸ್ಮರಣೀಯ. ಇಂತಹವರನ್ನು ಪಡೆದಿದ್ದು ನಮ್ಮ ಮಕ್ಕಳ ಪುಣ್ಯ ಎಂದರು.
ಗಡಿ ಭಾಗದಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಸೇವೆಯಲ್ಲಿ ವರ್ಗಾವಣೆ ಅನಿವಾರ್ಯ ನಮಗೆ ಕಳಿಸುವ ಮನಸ್ಸಿಲ್ಲ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯಗುರು ಶಮಸನ್ ರವರು ವಹಿಸಿದ್ದರು. ಹಳೆಯ ವಿದ್ಯಾರ್ಥಿನಿ ಕು. ತಾಯಮ್ಮ ನಿರೂಪಣೆ ಮಾಡಿದರು.
ಶಿಕ್ಷಕರಾದ ಸಿದ್ದಲಿಂಗಪ್ಪ ಕೋರಿ, ಶ್ರೀನಿವಾಸ, ಬನ್ನಪ್ಪ, ಮಂಜುನಾಥ, ಶರಣಪ್ಪ, ಈಶಪ್ಪ, ಶಂಕರ್, ಖಾಜಾಹುಸೇ ನ ಹತ್ತಿಕುಣಿ, ಗುರುಸಿದ್ದಯ್ಯ, ಜಗದೀಶ ಹಾಗೂ ಗ್ರಾಮದ ಹಿರಿಯರಾದ ಬಸಪ್ಪ ಇದ್ದಲಿ, ಭೀಮರಥ, ಹನುಮಂತ ದುಗುನೂರು, ಆಶಪ್ಪ, ದೊಡ್ಡ ಸಾಬಣ್ಣ, ಪೋಷಕರಾದ ಸಣ್ಣ ಮೀರಾ, ಶರಣಪ್ಪ, ಹಣಮಂತ, ಎಸ್.ಡಿ.ಎಂ.ಸಿ ಅದ್ಯಕ್ಷರು ಮತ್ತು ಪದಾಧಿಕಾರಿ, ಅಥಿತಿ ಶಿಕ್ಷಕರು ಮಕ್ಕಳು ಇದ್ದರು.