ಶಶಿ ಚಾರಿಟೇಬಲ್ ಟ್ರಸ್ಟ್ ಹಾಗೂ ವಿಜಯ ವಿಠಲ ಸೇವಾ ಸಂಸ್ಥೆಯ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ
ಯಾದಗಿರಿ: ಮನುಕುಲದ ಒಳಿತಿಗಾಗಿ ಆಚರಿಸುವ ಹಬ್ಬ ಹರಿದಿನಗಳನ್ನು ವಾತಾವರಣಕ್ಕೆ ಮಾರಕವಾಗುವ ರೀತಿಯಲ್ಲಿ ಆಚರಿಸದೇ ಪರಿಸರಸ್ನೇಹಿಯಾಗಿ ಆಚರಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು.
ಯಾದಗಿರಿ ನಗರದ ಹಿಂದಿ ಪ್ರಚಾರಸಭಾ ಆವರಣದಲ್ಲಿ ವಿಜಯ ವಿಠಲ ಸೇವಾ ಸಂಸ್ಥೆ ಹಾಗೂ ಶಶಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ “ಮನೆಮನೆಗೂ ಮಣ್ಣಿನ ಗಣಪ ಉಚಿತ ವಿತರಣೆ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದ ಅವರು ನಮ್ಮ ಮನೆಯಲ್ಲಿ ಆಚರಿಸುವ ಧಾರ್ಮಿಕ ಆಚರಣೆಗಳ ಮೂಲಕ ಪರಿಸರ ರಕ್ಷಣೆಯ ಕಾರ್ಯಕ್ಕೆ ಮುಂದಡಿ ಇಡುವ ಮೂಲಕ ಬದಲಾವಣೆಯ ಪರ್ವಕ್ಕೆ ನಮ್ಮ ನಮ್ಮ ಮನೆಗಳಿಂದಲೇ ಶ್ರೀಕಾರ ಹಾಕೋಣ ಎಂದು ಹೇಳಿದರು.
ರಾಸಾಯನಿಕ ಬಣ್ಣಗಳಿಂದ ಮುಕ್ತವಾದ,ಮಣ್ಣಿನಲ್ಲಿ ಸರಳವಾಗಿ ಕರಗಬಲ್ಲ,ವಾತಾವರಣಕ್ಕೆ ಪೂರಕವಾದ ಗಣೇಶನನ್ನು ಮನೆಮನೆಗಳಲ್ಲಿ ಪ್ರತಿಷ್ಠಾಪಿಸುವ ಮೂಲಕ ನೆಲ-ಜಲ ಸಂಪನ್ಮೂಲವನ್ನು ಶುದ್ಧವಾಗಿಡುವ ಸಂಕಲ್ಪ ತೊಡೋಣ ಎಂದರು.
ಸಹಾಯಕ ಆಯುಕ್ತ ಶ್ರೀಧರ ಗೋಟೂರ ಮಾತನಾಡಿ, ಶಶಿ ಚಾರಿಟೇಬಲ್ ಟ್ರಸ್ಟ್ ಹಾಗೂ ವಿಜಯ ವಿಠಲ ಸೇವಾ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಯಾವ ಪ್ರತಿಫಲಾಪೇಕ್ಷೆಯಿಲ್ಲದೇ ಸಾವಿರಾರು ಸಂಖ್ಯೆಯ ಮಣ್ಣಿನ ಗಣಪತಿಗಳನ್ನು ಯಾದಗಿರಿ ನಗರದ ಜನರಿಗೆ ಉಚಿತವಾಗಿ ವಿತರಿಸುವ ಮೂಲಕ ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿವೆ ಎಂದರು.
ಪ್ರತಿವರ್ಷವೂ ಗಣೇಶ ಹಬ್ಬದ ಸಂದರ್ಭದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಪಿಒಪಿ,ಹಾಗೂ ರಾಸಾಯನಿಕ ಬಣ್ಣಗಳಿಂದ ಕೂಡಿದ ಗಣೇಶ ಮೂರ್ತಿಗಳು ನಮ್ಮ ಜಲಮೂಲಗಳಿಗೆ ಸೇರ್ಪಡೆಯಾಗುತ್ತಿವೆ.ಇದರಿಂದ ಜೀವಸಂಕುಲ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದ್ದು, ನಾವು ಎಚ್ಚೆತ್ತುಕೊಂಡು ಪರ್ಯಾಯ ಮಾರ್ಗ ಕಂಡುಕೊಳ್ಳಲೇಬೇಕಾಗಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಶ್ರೀ ಸಿದ್ಧಸಂಪದ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕ ಡಾ.ಸಿದ್ಧರಾಜರೆಡ್ಡಿ ಮಾತನಾಡಿ, ನಾವು ಆಚರಿಸುವ ಧಾರ್ಮಿಕ ಆಚರಣೆಗಳು ನಮಗಷ್ಟೇ ಅಲ್ಲ ಮುಂಬರುವ ಪೀಳಿಗೆಗೂ ಕೂಡ ಒಳಿತನ್ನು ಮಾಡುವಂತಾದರೆ ಮಾತ್ರ ಅರ್ಥಪೂರ್ಣ.ಆಡಂಬರ ಮತ್ತು ಅದ್ಧೂರಿತನಕ್ಕೆ ಮಾರುಹೋಗಿ ಶುದ್ಧಭಕ್ತಿಯನ್ನು ಮರೆತಿದ್ದೇವೆ ಎಂದರು.
ಭಾರತೀಯರು ದೇವರನ್ನು ಕೇವಲ ಮಂದಿರಗಳಲ್ಲಿ, ಮೂರ್ತಿಗಳಲ್ಲಿ ಮಾತ್ರ ಕಾಣದೇ ಅಣು-ಅಣುವಿನಲ್ಲೂ ದೇವರಿದ್ದಾನೆ ಎಂದು ಭಾವಿಸಿ ಆರಾಧಿಸುತ್ತಾ ಬಂದಿದ್ದೇವೆ. ಆದರೆ ಪ್ರಸಕ್ತ ದಿನಮಾನಗಳಲ್ಲಿ ಅದೇ ದೇವರ ಹೆಸರಿನಲ್ಲಿ ನಾವು ಸುತ್ತಲಿನ ಪರಿಸರದ ವಿನಾಶಕ್ಕೆ ಮುನ್ನುಡಿ ಬರೆಯುತ್ತಿದ್ದೇವೆ.
ಕಳೆದ ಒಂದು ದಶಕದಿಂದ ಶಶಿ ಚಾರಿಟೇಬಲ್ ಟ್ರಸ್ಟ್ ಹಾಗೂ ವಿಜಯ ವಿಠಲ ಸೇವಾ ಸಂಸ್ಥೆಗಳು ಯಾದಗಿರಿ ಜಿಲ್ಲೆಯನ್ನು ಸಸ್ಯಕಾಶಿಯನ್ನಾಗಿ,ಸ್ವಚ್ಛ ನಗರ ರೂಪಿಸುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ.
ಯುವ ಶಕ್ತಿಯ ಸದ್ಭಳಕೆಯಾದರೆ ಅದ್ಭುತಗಳು ಘಟಿಸುತ್ತವೆ ಎನ್ನುವುದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.ಸಮಾನ ಮನಸ್ಕರನ್ನು ಜೊತೆಗೂಡಿಸಿಕೊಂಡು ಮನುಕುಲದ ಒಳಿತಿಗಾಗಿ ತಮ್ಮದೇ ನೆಲೆಯಲ್ಲಿ ಶ್ರಮಿಸುತ್ತಿರುವ ಈ ಸಂಸ್ಥೆಗಳನ್ನು ಜನ ಮತ್ತು ಆಡಳಿತ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಜಿಲ್ಲಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಲವೀಶ ಒರಾಡಿಯಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಶಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಹಣಮಂತಪ್ಪ ಶಿರಗೋಳ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪತಂಜಲಿ ಯೋಗಪೀಠದ ಅನೀಲ ಗುರೂಜಿ,ವಿಜಯ ವಿಠಲ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ನಾಗೇಶ್ವರರಾವ ಕುಲಕರ್ಣಿ, ಮೀನುಗಾರಿಕೆ ಇಲಾಖೆ ನಿರ್ದೇಶಕ ಶರಣಬಸವ,ಶ್ರೀಹರಿ ಕಾಲೇಜಿನ ಪ್ರಾಂಶುಪಾಲರಾದ ಸುಭಾಶ್ಚಂದ್ರ ಮಾನೇಗಾರ ಆಗಮಿಸಿದ್ದರು.
ಉದ್ಯಮಿ ಹಾಗೂ ಸಮಾಜ ಸೇವಕ ಮಲ್ಲಿಕಾರ್ಜುನ ಶಿರಗೋಳ ಸ್ವಾಗತಿಸಿದರು. ಮಾಳಪ್ಪ ಯಾದವ ನಿರೂಪಿಸಿ ವಂದಿಸಿದರು. ಸಮಾರಂಭದಲ್ಲಿ ಸಾವಿರಾರು ಜನರಿಗೆ ಉಚಿತವಾಗಿ ಮಣ್ಣಿನಿಂದ ತಯಾರಿಸಿದ ವಿಶೇಷ ಗಣೇಶ ಮೂರ್ತಿಗಳನ್ನು ವಿತರಿಸಲಾಯಿತು.
