ಯಾದಗಿರಿ ಜಿಲ್ಲೆಯ ಗಡಿ ತಾಲೂಕಿನ ಪುಟಪಾಕ್ ಯುವಕನಿಂದ ವೃದ್ಧನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕ್ರೌರ್ಯ | ತೆಲಂಗಾಣದ ನಾರಾಯಣ ಪೇಟ ಆಸ್ಪತ್ರೆಗೆ ದಾಖಲು | ದಲಿತ ಮುಖಂಡರಿಂದ ಖಂಡನೆ | ಆರೋಪಿ ವಶಕ್ಕೆ ಪಡೆದ ಪೊಲೀಸರು
ಯಾದಗಿರಿ: ಈದ್ ಹಿನ್ನೆಲೆ ಗ್ರಾಮದ ವೃದ್ಧರೊಬ್ಬರು ಖುಷಿ ಕೇಳಿದ್ದಕ್ಕೆ ಯುವಕನೊಬ್ಬ ತನ್ನ ಬೈಕ್ ನಿಂದ ಪೆಟ್ರೋಲ್ ತೆಗೆದು ಬೆಂಕಿ ಹಚ್ಚಿ ಕ್ರೌರ್ಯ ಮೆರೆದ ದಾರುಣ ಘಟನೆ ಗಡಿ ತಾಲೂಕು ಗುರುಮಠಕಲ್ ನ ಪುಟಪಾಕನಲ್ಲಿ ನಡೆದಿದೆ.
ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ಖುಷಿ ಕೇಳುವುದು ವಾಡಿಕೆ. ಅದರಂತೆ ವೃದ್ಧ ನರಸಪ್ಪ ಊರಡಿ ಖುಷಿ ಕೇಳಿದ್ದಕ್ಕೆ ಏಕಾಏಕಿ ಸಿನಿಮೀಯ ರೀತಿಯಲ್ಲಿ ತನ್ನ ಬೈಕ್ ನಿಂದ ಪೆಟ್ರೋಲ್ ತೆಗೆದು ಆತನ ಮೈಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗುತ್ತಿದೆ.
ಈ ದಾಳಿಯ ಪರಿಣಾಮವಾಗಿ ನರಸಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರು ಜೀವನ ಮರಣದ ಹೋರಾಟ ನಡೆಸುತ್ತಿದ್ದಾರೆ. ಸ್ಥಳೀಯರು ತಕ್ಷಣವೇ ಅವರನ್ನು ನಾರಾಯಣಪೇಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಕೆ.ಬಿ. ವಾಸು ಅವರು ಸ್ಥಳಕ್ಕೆ ಭೇಟಿ ನೀಡಿ, ನರಸಪ್ಪ ಅವರ ಕುಟುಂಬವನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಅವರೊಂದಿಗೆ ಮಾತನಾಡಿದ ವಾಸು, ಆರೋಪಿಯನ್ನು ತಕ್ಷಣವೇ ಬಂಧಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರಾದ ವೆಂಕಟೇಶ್ ಇದ್ದರು.
ಈ ಘಟನೆಯು ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದು, ಸ್ಥಳೀಯರು ಆರೋಪಿಯ ಬಂಧನ ಹಾಗೂ ಈ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಮಠಕಲ್ ಪೊಲೀಸರು ಯುವಕನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ವೃದ್ಧ ನರಸಪ್ಪ ಹಬ್ಬದ ಖುಷಿ ಕೇಳಿದ್ದಾನೆ. ಇದ್ದರೆ ಕೊಡಬೇಕಿತ್ತು. ಇಲ್ಲದಿದ್ದರೆ ಇಲ್ಲ. ಅಷ್ಟಕ್ಕೇ ಗಾಡಿಯಿಂದ ಪೆಟ್ರೋಲ್ ತೆಗೆದು ಆತನ ಮೈಮೇಲೆ ಸುರಿದು ಬೆಂಕಿ ಹಚ್ಚಿದ್ದು ಇದೆಂತಾ ಕ್ರೌರ್ಯ, ಇದು ತೀವ್ರ ಖಂಡನೀಯ. ದಲಿತ ಸಮುದಾಯದ ವೃದ್ಧನಿಗೆ ನ್ಯಾಯ ದೊರಕಬೇಕು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು – ಕೆ.ಬಿ. ವಾಸು, ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ.
