ಯಾದಗಿರಿ: ಜಿಲ್ಲೆಯಲ್ಲಿ ಸುರಿದ ಹೆಚ್ಚುವರಿ ಮಳೆಯಿಂದಾಗಿ ಪ್ಯಾಡಿ ಹೊರತು ಪಡಿಸಿ ಸುಮಾರು 25 ಸಾವಿರ ಹೆಕ್ಟರ್ ವಿವಿಧ ಬೆಳೆಗಳು ಹಾನಿಯಾಗಿರುವ ಅಂದಾಜು ಇದೆ ಎಂದು ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಕೃಷಿ, ಕಂದಾಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ಕೊಟ್ಟ ನಂತರ ಪರಿಹಾರ ನೀಡಲಾಗುವುದೆಂದು ಇತ್ತೀಚೆಗೆ ಬೆಳೆ ಹಾನಿ ಬಗ್ಗೆ ಜಿಲ್ಲೆಯ ಶಾಸಕರ ಜೊತೆ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.
ಕಳೆದ ಏಪ್ರಿಲ್ ತಿಂಗಳಿಂದ ಇಲ್ಲಿಯವರೆಗೂ ಸುಮಾರು 187 ಮನೆಗಳು ಕುಸಿದಿವೆ,ಇದರ ವರದಿ ತರಿಸಿ ಪರಿಹಾರ ನೀಡುವ ಕೆಲಸ ಜಾರಿಯಲ್ಲಿದೆ. ಜಿಲ್ಲೆಯಲ್ಲಿ ಮೂವರು ಜನರು ಪ್ರಾಣ ಕಳೆದುಕೊಂಡಿದ್ದು, ಇದರಲ್ಲಿ ಓರ್ವನು ಮರ ಬಿದ್ದು, ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಅವರಿಗೆಲ್ಲ ಪರಿಹಾರ ವಿತರಿಸಲಾಗಿದೆ ಎಂದು ಸಚಿವರು ಹೇಳಿದರು.
ಕೊಳ್ಳುರು ಸೇತುವೆ ಎತ್ತರಿಸುವ ಪ್ರಸ್ತಾವನೆ ಇದೆ. ಇದು 400- 500 ಕೋಟಿ ರೂ. ಕೆಲಸವಿದೆ. ಪ್ರಯತ್ನ ನಡೆದಿದೆ. ಮಾಡುತ್ತೆವೆ ಎಂದು ಸಚಿವರು ಹೇಳಿದರು. ಜಿಲ್ಲೆಯಲ್ಲಿ ಹಾಳಾದ ರಸ್ತೆಗಳ ಪಟ್ಟಿ ಮಾಡಲಾಗುತ್ತಿದ್ದು, ಕೂಡಲೆ ದುರಸ್ತಿ ಕೆಲಸ ಮಾಡಲಾಗುವುದೆಂದರು.
ಶಾಸಕ ಚನ್ನಾರಡ್ಡಿ ಪಾಟೀಲ್, ಡಿಸಿ ಹರ್ಷಲ್ ಭೋಯರ್, ಜಿಪಂ ಸಿಇಒ ಲವೀಶ್ ಓರ್ಡಿಯಾ,ಎಸ್ ಪಿ ಪ್ರಥ್ವಿಕ್ ಶಂಕರ್, ಹೆಚ್ಚುವರಿ ಡಿಸಿ ರಮೇಶ ಕೋಲಾರ ಇದ್ದರು.
