ಯಾದಗಿರಿ ಜಿಲ್ಲೆಯನ್ನು ಹಸಿಬರ ಪೀಡಿತ ಜಿಲ್ಲೆಯೆಂದು ಘೋಷಿಸಿ | ಬೆಳೆ ಪರಿಹಾರ ಎಕರೆಗೆ ಕನಿಷ್ಠ 25 ಸಾವಿರಕ್ಕೆ ಹೆಚ್ಚಿಸಲು ಆಗ್ರಹ

ಯಾದಗಿರಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಅಲ್ಲದೇ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಹಾಗೂ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) (ಎಸ್.ಯು.ಸಿ.ಐ-ಸಿ) ಯಾದಗಿರಿ ಜಿಲ್ಲಾ ಸಮಿತಿಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದವು.

ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಸ್.ಯು.ಸಿ.ಐ(ಸಿ) ರಾಜ್ಯ ವಿಸ್ತೃತ ಸಮಿತಿ ಸದಸ್ಯ ಕೆ ಸೋಮಶೇಖರ್ ಮಾತನಾಡಿ, ಈ ವರ್ಷದ ಮುಂಗಾರು ಪ್ರಾರಂಭವಾದಾಗ, ಉತ್ತಮ ಮಳೆ ಆರಂಭಗೊಂಡಾಗ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಇದ್ದರು, ಆದರೆ ಕಳೆದ ಮೂರು ತಿಂಗಳಿಂದ ಸುರಿದ ಮಳೆ ರೈತರ ಆಸೆಗೆ ತಣ್ಣೀರು ಎರಚಿದಂತಾಗಿದೆ.

ಕೆಲ ದಿನಗಳ ಹಿಂದೆ ಬಿಟ್ಟು ಬಿಡದೆ ಸುರಿದ ಮಳೆ ಹಾಗೂ ಭೀಮಾ ನದಿ ಪ್ರವಾಹದಿಂದ ಬೆಳೆದು ನಿಂತಿದ್ದ ಬೆಳೆಗಳು ಎಲ್ಲವೂ ಜಲಾವೃತಗೊಂಡ ಪರಿಣಾಮ ರೈತರ ಬದುಕೇ ನೀರಲ್ಲಿ ಕೊಚ್ಚಿಕೊಂಡು ಹೋದಂತೆ ಆಗಿದೆ. ಆದರೆ ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ರೈತರು ಮತ್ತು ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಬೇಕಿದ್ದ ಜನ ಪ್ರತಿನಿಧಿಗಳು, ಸರ್ಕಾರಗಳು ತಮ್ಮ ರಾಜಕೀಯ ಬೆಳೆ ಬೇಸಿಕೊಳ್ಳುವುದ ಕ್ಕೆ ಪ್ರವಾಹವನ್ನು ಬಳಸಿಕೊಳ್ಳುತ್ತಿರುವುದು ಅಂತ್ಯಂತ ದುರಂತದ ಸಂಗತಿ ಎಂದು ಕಿಡಿ ಕಾರಿದರು.

ಮಳೆನೀರಿನಿಂದ ಹಾನಿಯಾದ ಅಪಾರ ಪ್ರಮಾಣದ ಬೆಳೆಗಳು, ಜೀವ ಹನಿಗಳ ನಷ್ಟ ತುಂಬಿಸಲು ಕೇಂದ್ರ ಸರ್ಕಾರ ಈ ವರೆಗೂ ಮಾತಾಡದೇ ಇರುವುದು ಖಂಡನೀಯ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಲ್ಲಿ ಪರಿಹಾರ ಸಹ ಘೋಷಣೆ ಮಾಡಿಲ್ಲ. ಇತ್ತ ರಾಜ್ಯ ಸರ್ಕಾರ ಕೂಡ ಪ್ರವಾಹ ನಿಯಂತ್ರಣ ಹಾಗೂ ಸೂಕ್ತ ಬೆಳೆ ಪರಿಹಾರ ಘೋಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ರೈತರು ಕೃಷಿಗೆ ಮಾಡಿರುವ ಖರ್ಚಿಗೆ ತಕ್ಕಂತೆ ಪರಿಹಾರ ಘೋಷಣೆ ಮಾಡಿಲ್ಲ. ವೈಜ್ಞಾನಿಕ ಬೆಳೆ ಪರಿಹಾರ ಘೋಷಣೆ ಮಾಡುವುದು ಸಹ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಎಚ್ಚರಿಸಿದರು.

ಇನ್ನೋರ್ವ ಮುಖಂಡ ಶರಣಗೌಡ ಗೂಗಲ್ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ, ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ಖರೀದಿಸಬೇಕಿದ್ದ ಸರ್ಕಾರಗಳು, ರೈತರ ಬಗೆಗಿನ ತೀವ್ರ ನಿರ್ಲಕ್ಷದಿಂದ ಬಹುತೇಕ ರೈತ ತನ್ನ ಬೆಳೆಗಳನ್ನು ಮಾರಾಟ ಮಾಡಿದ ನಂತರ ನೇಪಥ್ಯಕ್ಕೆ ಖರೀದಿ ಕೇಂದ್ರ ತೆರೆಯುವ ಕ್ರಮ ಅತ್ಯಂತ ರೈತ ವಿರೋಧಿಯಾಗಿದೆ ಎಂದು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

17 ವಿವಿಧ ಬೇಡಿಕೆಗಳ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಪರವಾಗಿ ಪ್ರತಿಭಟನಾ ಸ್ಥಳದಲ್ಲಿ ಆಗಮಿಸಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಸ್ವೀಕರಿಸಿ, ಇಂದೇ ಮನವಿ ಪತ್ರವನ್ನು ರವಾನಿಸುವುದಾಗಿ ಹೇಳಿದರು. ಜಿಲ್ಲೆಯಲ್ಲಿ ಬೆಳೆಹಾನಿ ಸಮೀಕ್ಷೆ ಶೇಕಡಾ 70% ರಷ್ಟು ಆಗಿದ್ದು, ಪೂರ್ಣ ಪ್ರಮಾಣದ ಸಮೀಕ್ಷೆ ಮುಗಿದ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಮತ್ತು ಜಿಲ್ಲೆಯಲ್ಲಿ ಬಾಧಿತ ಜನರಿಗೆ ಪರಿಹಾರದ ಮೊತ್ತ ತಲುಪುವಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಡಿ.ಉಮಾದೇವಿ, ಜಮಾಲ್ ಸಾಬ್, ರಾಮಲಿಂಗಪ್ಪ ಬಿ.ಎನ್, ಭೀಮರೆಡ್ಡಿ ಹಿರೇಬಾನರ್, ಶಿಲ್ಪಾ ಬಿ.ಕೆ, ಸುಭಾಷ್ ಚಂದ್ರ ಬಾವನೋರ, ಸಿದ್ದಣ್ಣ ಗೂಗಲ್, ಮರೆಪ್ಪ, ರಾಜು, ರಮೇಶ್, ಅಮರೇಶ್ ದಣಿ, ರಾಮರೆಡ್ಡಿ, ಭೀಮರಾಯ, ಮಲ್ಲಮ್ಮ, ಶಿವಬಸಮ್ಮ, ಸುಮಂಗಲ ಸೇರಿದಂತೆ ಹಲವು ಗ್ರಾಮಗಳಿಂದ ಆಗಮಿಸಿದ್ದ ನೂರಾರು ರೈತರು ಪಾಲ್ಗೊಂಡಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!