ತಕ್ಷಣ ಪರಿಹಾರ ನೀಡಿ | ಸಿಎಂ ಭೇಟಿ ಕೊಡಲಿ | ಗಂಜಿ ಕೇಂದ್ರ ಆರಂಭಿಸಿ ಸೌಲಭ್ಯಕ್ಕೆ ಭೀಮು ನಾಯಕ ಆಗ್ರಹ
ಯಾದಗಿರಿ: ಸತತ ಮಳೆಯಿಂದಾಗಿ ಉಂಟಾಗಿರುವ ನೆರೆ ಹಾವಳಿಯಿಂದ ರೈತರು ಬೆಳೆದ ಎಲ್ಲಾ ಬೆಳೆಗಳು ನಷ್ಟವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ತಕ್ಷಣದ ಪರಿಹಾರ ಒದಗಿಸಬೇಕು ರೈತರೊಂದಿಗೆ ಸರ್ಕಾರ ಇದೆ ಎಂದು ಆತ್ಮಸ್ಥೈರ್ಯ ತುಂಬಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಟಿಎನ್ ಭೀಮುನಾಯಕ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಸತತ ಮಳೆಯಿಂದ ಬೆಳೆದ ಬಹುತೇಕ ಎಲ್ಲಾ ಬೆಳೆಗಳು ನಷ್ಟವಾಗಿದ್ದು ರೈತರು ನೆರೆಯಿಂದ ತತ್ತರಿಸಿದ್ದಾರೆ. ಕೂಡಲೇ ಪರಿಹಾರವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿ ನಂತರ ಬೆಳೆ ಹಾನಿ ಅಂದಾಜು ಸಮೀಕ್ಷೆ ಆಮೇಲೆ ಬಾಕಿ ಮೊತ್ತ ಜಮಾ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ಸತತ ಮಳೆಯ ಕಾರಣ ಪ್ರತಿ ಗ್ರಾಮ ಪಟ್ಟಣಗಳಲ್ಲಿನ ಬಡವರ ಮನೆಗಳು ಕುಸಿದಿವೆ ನೀರು ಗ್ರಾಮಗಳಲ್ಲಿ ನುಗ್ಗಿದ ಪರಿಣಾಮ ವಡಗೇರಾ ತಾಲ್ಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ಮನೆಗಳು ಜಲಾವೃತ್ತವಾಗಿವೆ. ಮನೆಯಲ್ಲಿನ ದವಸ ಧಾನ್ಯ ನೀರುಪಾಲಾಗಿವೆ ಕಾರಣ ಇಂತಹ ಗ್ರಾಮಗಳಲ್ಲಿ ಗಂಜಿ ಕೇಂದ್ರಗಳು ತೆರೆಯಬೇಕು. ಸಮಸ್ಯಾತ್ಮಕ ಗ್ರಾಮಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ಈ ಕೂಡಲೇ ಮುಖ್ಯಮಂತ್ರಿಗಳು ನೆರೆ ಹಸಿಬರ ಪೀಡಿತ ಯಾದಗಿರಿ, ಕಲಬುರಗಿ ಜಿಲ್ಲೆಗಳಿಗೆ ಭೇಟಿ ಕೊಟ್ಟು ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಹಾಗೂ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಕ್ತ ಸಲಹೆ ಸೂಚನೆ ನೀಡಬೇಕು ಮತ್ತು ಬ್ರಿಡ್ಜ್ ಕಮ್ ಬಾರೆಜ್ ಮೇಲೆ ಹೆಚ್ಚು ಜನ ಸೇರದಂತೆ ತಡೆಯಲು ಹಾಗೇ ಸೆಲ್ಫಿ ತೆಗೆಯದಂತೆ ತಡೆಯಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಕೋರಲಾಗಿದೆ.
ಈ ಸಂಧರ್ಭದಲ್ಲಿ ಮಲ್ಲು ಮಾಳಿಕೇರಿ, ಸಿದ್ದುನಾಯಕ ಹತ್ತಿಕುಣಿ, ಅಂಬ್ರೇಶ ಹತ್ತಿಮನಿ, ಪ್ರಕಾಶ ಪಾಟೀಲ್ ಜೈಗ್ರಾಮ್, ಯಮನಯ್ಯ ಗುತ್ತೇದಾರ, ವಿಶ್ವರಾಜ ಪಾಟೀಲ್, ಅಬ್ದುಲ್ ಚಿಗಾನೂರ್, ಶರಣಬಸಪ್ಪ ಯಲ್ಹೇರಿ, ಸೇರಿದ್ದರು.
