ಹೆತ್ತವರ ಮತ್ತು ಹಿರಿಯ ಪುಣ್ಯಸ್ಮರಣೆ ನಿಮಿತ್ಯ 109 ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ | ಯೆಲ್ಹೇರಿ ಶಿವರಾಯ , ಮುದ್ನಾಳ ಕುಟುಂಬದಿಂದ ನಡೆದ ಕಾರ್ಯಕ್ರಮದಲ್ಲಿ ಕನ್ನಡಕ ವಿತರಣೆ
ಯಾದಗಿರಿ: ಹೆತ್ತವರನ್ನೂ ಕಣ್ಣೆತ್ತಿ ಸಹ ನೋಡದ ಒಂದು ವರ್ಗವಿರುವ ಈ ಕಾಲದಲ್ಲಿ ತಮ್ಮ ತಂದೆ, ತಾಯಿ ಸವಿನೆನಪಿಗಾಗಿ ಸುಮಾರು 109 ಜನರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿ ಇಂದಿನ ಪುಣ್ಯಸ್ಮರಣೆ ದಿನದಂದು ಅವರೆಲ್ಲರಿಗೂ ಉಚಿತ ಕನ್ನಡ ವಿತರಿಸಿದ ಯಲ್ಹೆರಿ ಶಿವರಾಯ ಕುಟುಂಬ ಹಾಗೂ ಮುದ್ನಾಳ್ ಕುಟುಂಬದ ಈ ಸಾಮಾಜಿಕ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೆಡಗಿಮದ್ರಾದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬಣ್ಣಿಸಿದರು.
ತಾಲೂಕಿನ ಮುದ್ನಾಳ್ ದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಲಿಂ.ಸೋಮನಾಥರಡ್ಡಿಗೌಡ ಶಿವರಾಯ ಯಲ್ಹೇರಿ, ಲಿಂ.ಶಂಕರಲಿಂಮ್ಮ ಶಿವರಾಯ ಯಲ್ಹೇರಿ, ಲಿಂ.ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ ಮತ್ತು ಲಿಂ.ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣಾ, ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಮತ್ತು ಕನ್ನಡ ವಿತರಣಾ ಶಿಬಿರದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮನೆಯಲ್ಲಿ ಯಾರಿಗಾದರೂ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಬೇಕಾದಾಗ ಆರ್ಥಿಕವಾಗಿ ವಿಚಾರ ಮಾಡುವ ಕಾಲವಿದು. ಇಂತಹ ವೇಳೆ ಮುದ್ನಾಳ್ ಯಲ್ಹೆರಿ ಸೇರಿದಂತೆಯೇ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸುಮಾರು 109 ಜನರಿಗೆ ಕಣ್ಣು ಕೊಡುವ ಕೆಲಸ ಮಾಡಿದ್ದು ಬಹುದೊಡ್ಡ ಕೆಲಸ, ಇದು ಆರ್ಥಿಕ ಸಬಲರಾಗಿದ್ದವರಿಗೆ ಮಾದರಿಯಾಗಬೇಕೆಂದರು.
ಹಕವಾರು ದಶಕಗಳಿಂದಲ್ಲೂ ದಿ.ವಿಶ್ವನಾಥರಡ್ಡಿ ಮುದ್ನಾಳ್, ಅತ್ತ ಯಲ್ಹೆರಿ ಸೋಮನಾಥರಡ್ಡಿಗೌಡ ಶಿವರಾಯ ಕುಟುಂಬ ಈ ಭಾಗದವರಿಗೆ ಎಲ್ಲ ರೀತಿಯಿಂದಲ್ಲೂ ಸಹಾಯ, ಸಹಕಾರ ಮಾಡುವ ಮೂಲಕ ಸಮಾಜದ ಎರಡು ಕಣ್ಣುಗಳಾಗಿದ್ದರು. ಅದನ್ನೇ ಆ ಕುಟುಂಬದವರು ಮುಂದುವರೆಸಿಕೊಂಡು ಬಂದಿದ್ದಾರೆಂದು ಶ್ರೀಗಳು ನುಡಿದರು.
ಪ್ರಾಸ್ತಾವಿಕ ಮಾತನಾಡಿದ ರಾಜ್ಯ ಬಿಜೆಪಿ ಮಾಜಿ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಮಾತನಾಡಿ, ನಮ್ಮ ತಂದೆ ತಾಯಿಯವರ ಪುಣ್ಯಸ್ಮರಣೆ ಪ್ರತಿ ವರ್ಷವೂ ಯಲ್ಹೆರಿಯಲಿಯೇ ಮಾಡುತ್ತಿದ್ದು, ಈ ವರ್ಷ ಇಲ್ಲಿ ಆಯೋಜಿಸಿದ್ದಕ್ಕೆ ಮುಖ್ಯ ಕಾರಣ ನಮ್ಮ ತಾಯಿಯವರ ತವರೂರು ಮುದ್ನಾಳ್ ಮತ್ತು ಆ ಕುಟುಂಬದ ದೊಡ್ಡ ಆಸ್ತಿಯಾಗಿದ್ದ ಮಾಜಿ ಶಾಸಕರಾದ ದಿವಂಗತರಾದ ಡಾ.ವೀರಬಸವಂತರಡ್ಡಿ ಹಾಗೂ ವೆಂಕಟರಡ್ಡಿ ಮುದ್ನಾಳ್ ಅವರ ಸವಿನೆನಪಿಗಾಗಿ ಇಲ್ಲಿ ಆಯೋಜನೆ ಮಾಡುವ ಮೂಲಕ ಈ ಎರಡು ಕುಟುಂಬಗಳು 109 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸುವ ಒಂದು ಸಣ್ಣ ಪರೋಪಕಾರದ ಕೆಲಸ ಮಾಡಲಾಗಿದೆ ಎಂದರು.ಇದಕ್ಕೆ ಈ ಎರಡು ಕುಟುಂಬಗಳ ಸಹಕಾರ ನೀಡಿದ್ದನ್ನು ಸ್ಮರಿಸಿದರು.
ಶಸ್ತ್ರ ಚಿಕಿತ್ಸೆ ಮಾಡಿರುವ ವೈದ್ಯ ಡಾ.ಪ್ರದೀಪ್ ರಡ್ಡಿ ಮಾತನಾಡಿ, ಈ 109 ಜನರಿಗೆ ಇವರು ಮನಸ್ಸು ಮಾಡಿದರೇ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ಶಸ್ತ್ರ ಚಿಕಿತ್ಸೆ ಮಾಡಿಸಬಹುದಿತ್ತು, ಆದರೇ ಹಣ ಎಷ್ಟೇ ಖರ್ಚಾಗಲಿ ಗುಣಮಟ್ಟದಿಂದ ಈ ಕಾಯಕವಾಗಲಿ ಎಂಬ ಸ್ವಚ್ಛ ಮನಸ್ಸಿನಿಂದ ಸುಮಾರು 15 ಲಕ್ಷ ರೂ. ಖರ್ಚು ಮಾಡಿಸಿ ಈ ದೊಡ್ಡ ಕೆಲಸ ಮಾಡಿಸಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಹಣಮಂತರಡ್ಡಿಗೌಡ ಮುದ್ನಾಳ,ಚನ್ನಬಸವರಡ್ಡಿ ಮುದ್ನಾಳ, ರಮೇಶ್ ಬಾಬು ಮುದ್ನಾಳ, ಶರಣುಗೌಡ ಮುದ್ನಾಳ, ಮುದ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುದಾ ಅರಳಿ,ಡಾ.ಜಯಲಕ್ಷ್ಮಿ ಆರ್ ಮುದ್ನಾಳ,ಡಾ.ವಿವೇಕಾನಂದರಡ್ಡಿ ಯಲ್ಹೇರಿ,ಶರಣಗೌಡ ಯಲ್ಹೇರಿ,ರಾಮಣ್ಣಗೌಡ ಮುದ್ನಾಳ,ಡಾ.ಸುರೇಖ ಪಾಟೀಲ್,ಡಾ.ರಮೇಶ,ಟಿಎಚ್ಓ ಡಾ.ಹಣಮಂತರಡ್ಡಿ, ಮಮತಾ ರಡ್ಡಿ, ಮಂಜುಳಾ ರಡ್ಡಿ,ಆಸ್ಪತ್ರೆ ಸಿಬ್ಬಂದಿ ನವೀನ್ ಗೌಡ ಪಾಟೀಲ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ, ಮುದ್ನಾಳ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
