ಸರ್ಕಾರದ ಸ್ಥಳ ಬೇಕಾಬಿಟ್ಟಿ ಕಬ್ಜಾ ಕೇಳುವವರಿಲ್ಲ…!
ಗುರುಮಠಕಲ್: ಇಲ್ಲಿನ ಹೈದರಾಬಾದ್ – ವಿಜಯಪುರ ರಾಜ್ಯ ಹೆದ್ದಾರಿಯಲ್ಲಿರುವ ಕೈಮಗ್ಗ ಅಭಿವೃದ್ಧಿ ನಿಗಮದ ವಸತಿ ಗೃಹಗಳ ಪ್ರದೇಶದಲ್ಲಿ ಸರ್ಕಾರಿ ಸ್ಥಳವನ್ನು ಕಬ್ಜಾ ಮಾಡಲು ಪ್ರಭಾವಿಯೊಬ್ಬ ಪ್ರಚೋದನೆ ನೀಡುತ್ತಿದ್ದಾನೆ ಎನ್ನುವ ವಿಚಾರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಸತಿ ಗೃಹಗಳ ಪಕ್ಕದಲ್ಲಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ದೊಡ್ಡ ಸಂಗ್ರಹಕಾರ ಇದ್ದು ಸಾಕಷ್ಟು ವರ್ಷಗಳಿಂದ ಬೀಡು ಬಿದ್ದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಪ್ರಭಾವಿ ಒಬ್ಬರು ಸ್ಥಳ ಕಬ್ಜಾ ಮಾಡಲು ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಸರ್ಕಾರಿ ಸ್ಥಳದಲ್ಲಿ ಡಬ್ಬ ಅಂಗಡಿಗಳನ್ನು ಇಡುವುದಕ್ಕೆ ಅಲ್ಲಿನ ನಿವಾಸಿಗಳು ವಿರೋಧವು ಇದ್ದು, ಸಾರ್ವಜನಿಕರಿಂದ ಮಾಹಿತಿ ತಿಳಿದ ಕೈಮಗ್ಗ ನಿಗಮದ ಅರುಣ ಅವರು ಸ್ಥಳಕ್ಕೆ ಆಗಮಿಸಿ, ನಿಗಮದ ಸ್ಥಳ ಅತಿಕ್ರಮಿಸಿ ಈ ರೀತಿ ಅನಾಧಿಕೃ ಅಂಗಡಿಗಳನ್ನು ಇಡದಂತೆ ಹೇಳಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈಗಾಗಲೇ ಬಸ್ ನಿಲ್ದಾಣ ಮಾರ್ಗದಲ್ಲಿ ಕೈಮಗ್ಗ ವಸತಿ ಗೃಹಗಳಿಗೆ ಜನರಿಗೆ ಮೀಸಲಿದ್ದ ಸ್ಥಳವನ್ನು ಬಿಟ್ಟು ಅದರ ಅಕ್ಕಪಕ್ಕದ ಸ್ಥಳವನ್ನು ಕೂಡ ಅತಿಕ್ರಮಿಸಿ ರಸ್ತೆಯಲ್ಲೇ ಮಾಂಸದ ಅಂಗಡಿಗಳನ್ನು ಹಾಕಿ ಇತರರಿಗೆ ಬಾಡಿಗೆಗೆ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಸ್ ನಿಲ್ದಾಣ ಮಾರ್ಗದಲ್ಲಿ ಚಿಕನ್, ಮಟನ್ ಅಂಗಡಿಗಳಿರುವುದು ಸಸ್ಯಹಾರಿಗಳು ಆ ಮಾರ್ಗದಲ್ಲಿ ನಡೆಯಬೇಕಾದರೆ ಮೂಗು ಮುಚ್ಚಿಕೊಂಡು ನಡೆಯುವ ಪರಿಸ್ಥಿತಿ ಇದ್ದು, ಸಂಬಂಧ ಪಟ್ಟ ಅಧಿಕಾರಿಗಳು, ಪುರಸಭೆ ಅವರು ಇವುಗಳನ್ನು ತೆರವುಗೊಳಿಸಬೇಕು ಎನ್ನುವ ಒತ್ತಾಯವು ಕೇಳಿ ಬಂದಿದೆ.
ರಸ್ತೆ ಪಕ್ಕವೇ ಚಿಕನ್, ಮಟನ್ ಮಾರಾಟ ಜನರಿಗೆ ಹಿಂಸೆ : ಕೆ ಹೆಚ್ ಡಿಸಿ ಕಾಲೋನಿಯ ಬಸ್ ನಿಲ್ದಾಣ ಮಾರ್ಗದಲ್ಲಿ ರಸ್ತೆ ಉದ್ದಕ್ಕೂ ಚಿಕನ್, ಮಟನ್ ಮಾರಾಟ ಅಂಗಡಿ ತಲೆ ಎತ್ತಿರುವುದು ಸಾರ್ವಜನಿಕರು ಹಿಂಸೆ ಅನುಭವಿಸುವಂತಾಗಿದೆ. ಈ ಬಗ್ಗೆ ಕೆಲ ವರ್ಷಗಳ ಹಿಂದೆಯೇ ಪುರಸಭೆಗೆ ದೂರು ನೀಡಿದರೂ ಕ್ರಮಕ್ಕೆ ಮುಂದಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಈಗಲಾದರೂ ಅಧಿಕಾರಿಗಳು ಮಾಂಸ ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.