ಗುರುಮಠಕಲ್ ನಲ್ಲಿ ಲಿಂಗೈಕ್ಯ ಸಂಗಮೇಶ್ವರ ಸ್ವಾಮಿಜಿ 25 ನೇ ಪುಣ್ಯಸ್ಮರಣೆ
ಗುರುಮಠಕಲ್ : ನಮ್ಮ ಮಠದ ಪೂರ್ವ ಪೀಠಾಧಿಪತಿಗಳು ಮತ್ತು ನಮ್ಮ ಗುರುಗಳಾದ ಲಿಂಗೈಕ್ಯ ಸಂಗಮೇಶ್ವರ ಸ್ವಾಮಿಜಿ ಅವರು ನಮಗೆ ಸರ್ವಕಾಳಲಿಕ ಆದರ್ಶ ಮತ್ತು ಅನುಕರಣೀಯರಾಗಿದ್ದಾರೆ ಎಂದು ಖಾಸಾಮಠದ ಪೀಠಾಧಿಪತಿ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಜಿ ಹೇಳಿದರು.
ಪಟ್ಟಣದ ಖಾಸಾಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಖಾಸಾಮಠದ ಒಂಬತ್ತನೇ ಪೀಠಾಧಿಪತಿ ಲಿಂ.ಸಂಗಮೇಶ್ವರ ಸ್ವಾಮೀಜಿ ಅವರ ೨೫ ನೇ ಪುಣ್ಯಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗಮೇಶ್ವರ ಸ್ವಾಮಿಯವರು ಅಂದಿನ ಕಾಲದಲಿ ಭಕ್ತರಿಗಾಗಿ ಹಳ್ಳವನ್ನು ಈಜಿಕೊಂಡು ಬಾಗೋಡಿ ಮಠಕ್ಕೆ ತೆರಳುತ್ತಿದ್ದರು ಎಂದು ತಿಳಿಸಿದರು.
1999 ರಲ್ಲಿ ಈ ಭಾಗದಲ್ಲಿ ಕನ್ನಡ ಭಾಷೆಯನ್ನು ಮತ್ತು ಬಡ ವಿದ್ಯಾರ್ಥಿಗಳಿಗಾಗಿ ಕನ್ನಡ ಶಾಲೆಯನ್ನು ಆರಂಬಿಸಿದರು. ಬಸವ ತತ್ವ ಪ್ರಚಾರಕ್ಕೆ ಬಸವ ಕೇಂದ್ರವನ್ನು ಸ್ಥಾಪಿಸಿದರು. ಮಠದ ಭಕ್ತರಿಗಾಗಿ ದಿನವಿಡೀ ಅನ್ನಪಾನಗಳೂ ಇಲ್ಲದೆ ಉಪವಾಸವಿದ್ದ ಘಟನೆಗಳು ಇವೆ. ಅವರು ಹಾಕಿದ ಮಾರ್ಗವನ್ನು ಮಠವು ಇಂದೂ ಮುಂದುವರೆಸುತ್ತಿದೆ ಎಂದು ಹೇಳಿದರು.
ಮರುಳಸಿದ್ದ ಶಂಕರ ಗುರುಪೀಠ ಚಿಗರಳ್ಳಿ ಮಠದ ಸಿದ್ದಬಸವ ಕಬೀರಾನಂದ ಸ್ವಾಮಿಜಿ ಮಾತನಾಡಿ, ನಾಲವಾರದ ಸ್ವಾಮಿಗಳೊಡನೆ ನಾವು ಈ ಮಠಕ್ಕೆ ಬರುತ್ತಿದ್ದೆವು. ಆಗ ಸಂಗಮೇಶ್ವವರ ಸ್ವಾಮಿಜಿ ಅವರ ದರ್ಶನ ನಮಗೆ ಸಿಗುತ್ತಿತ್ತು. ಸ್ವತಹಾ ಸಂಗಮೇಶ್ವವರ ಸ್ವಾಮಿಯವರೇ ಮಠಕ್ಕೆ ಬರುವವರಿಗೆ ವ್ಯವಸ್ಥೆ ಮಾಡಲು ಓಡಾಡುವುದು ಕಂಡ ನನಗೆ ಆಶ್ಚರ್ಯವಾಗುತ್ತಿತ್ತು. ಈಗಿನ ಸ್ವಾಮಿಗಳೂ ಸಹ ಅವರಂತೆ ಮಠವನ್ನು ನಡೆಸುತ್ತಿದ್ದಾರೆ ಎಂದರು.
ಸದ್ಯ ರಾಜ್ಯದ್ಯಂತ ಬಸವತತ್ವದ ವಿಷಯ ಬಂದಾಗ ಉತ್ತರ ಕರ್ನಾಕದ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮಿಜಿ ಹೆಸರು ಮುಂಚುಣಿಯಲ್ಲಿದೆ. ಸ್ವಾಮಿಜಿಯವರು ಭಕ್ತರಿಗಾಗಿ, ಸಮಾಜಕ್ಕಾಗಿ ಮಾಡುತ್ತಿರುವ ಕೆಲಸಗಳು ನಮಗೆ ಆದರ್ಶಮಯ ಎಂದು ಹೇಳಿದರು.
ಈ ವೇಳೆ ನರಸರೆಡ್ಡಿ ಪಾಟೀಲ ಗಡ್ಡೆಸೂಗೂರು, ಬಿ.ಬಿ.ಸ್ವಾಮಿ, ಗಿರಿಧರರೆಡ್ಡಿ ಉಟ್ಕೂರು, ಮಲ್ಲೇಶಪ್ಪ ಬೇಲಿ, ವೀರಣ್ಣ ಬೇಲಿ, ವಿಜಯಶಾಸ್ತ್ರಿ, ಖಾಸಾಮಠದ ವ್ಯವಸ್ಥಾಪಕ ಮಲ್ಲಿಕಾರ್ಜುನ ಸ್ವಾಮಿ, ವೆಂಕಟಪ್ಪ ಅವಂಗಪುರ, ಧನರಾಜ ವಾರದ, ಸಂತೋಷ ನೀರೆಟಿ, ನಾರಾಯಣರೆಡ್ಡಿ ಪೊಲೀಸ ಪಾಟೀಲ್, ಗೋಪಾಲಕೃಷ್ಣ ಮೇದಾ, ನರಸಿಂಹಲು ಗಂಗನೋಳ ಸೇರಿದಂತೆ ಖಾಸಾಮಠ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಸಿಬ್ಬಂದಿ ಮತ್ತು ಮಠದ ಭಕ್ತರು ಉಪಸ್ಥಿತರಿದ್ದರು.