ಗುರುಮಠಕಲ್ ನಲ್ಲಿ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ : ಭವ್ಯ ಶೋಭಾಯಾತ್ರೆ, ಸಾಧಕರಿಗೆ ಸನ್ಮಾನ
ಸರ್ಕಾರ ಮಹಾರಾಜರ ಜಯಂತಿ ಆಚರಿಸಲು ಒತ್ತಾಯ
ಗುರುಮಠಕಲ್(ಯಾದಗಿರಿ) :ಇಂದಿನ ಆಧುನಿಕ ಯುಗದಲ್ಲಿ ಪಾಶ್ಚಾತ್ಯ ಸಂಸ್ಕೃತಿಗಳಿಂದ ಯುವ ಪೀಳಿಗೆಯನ್ನು ಹೊರ ತರಲು ಪಾಲಕರ ಶ್ರಮಿಸಬೇಕು. ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನಂದಕಿಶೋರ್ ಕೆ. ಚೌದರಿ ಕರೆ ನೀಡಿದರು.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಸೋಮವಂಶ ಕ್ಷತ್ರಿಯ ಸಮಾಜದಿಂದ ಆಯೋಜಿಸಿದ ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಆಧ್ಯಾತ್ಮ ಜ್ಞಾನ, ಸತ್ಸಂಗ, ಸಂಸ್ಕಾರದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಪ್ರಸ್ತುತ ಸಮಾಜ ಗಟ್ಟಿಯಾಗಲು ರಾಜಕೀಯ ಬಲವು ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಭೆಗಳು ಪಾಲಾಯನವಾಗುತ್ತಿವೆ, ಮಕ್ಕಳು ವಿದೇಶಗಳಲ್ಲಿ ಇದ್ದರೆ ತಂದೆ ತಾಯಿ ವೃದ್ಧಾಶ್ರಮದಲ್ಲಿ ಸೇರುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಸ್ತಾವಿಕವಾಗಿ ಸಮಾಜದ ಮುಖಂಡ ಬುಡ್ಡಪ್ಪ ಜನಾರ್ಧನ ಮಾತನಾಡಿ, ಹೆಸರಿನಿಂದಲೇ ತಿಳಿಯುತ್ತದೆ ರಾಜರಿಗೆ ರಾಜರಾಗಿದ್ದ ಸಹಸ್ರಾರ್ಜುನ ಮಹಾರಾಜರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಮಹಾರಾಜರ ಜೀವನ ಚರಿತ್ರೆಯನ್ನು ವಿವರಿಸಿದ ಅವರು, ಸಾವಿರ ಅಶ್ವಮೇಧ ಮಹಾ ಯಜ್ಞಗಳನ್ನು ಮಾಡಿದ ಮಹಾರಾಜರು ಪರಾಕ್ರಮಿಯಾಗಿದ್ದರು, ಗುರುದೇವ ದತ್ತರಿಂದ ಸಹಸ್ರ ಬಾಹು, ಸಂಪೂರ್ಣ ಭೂ ಮಂಡಲ ಸಾಮ್ರಾಜ್ಯ ಸ್ಥಾಪನೆ, ಪ್ರಜೆಗಳ ಹಿತಕ್ಕಾಗಿ ಸಾಮ್ರಾಜ್ಯದ ಆಳ್ವಿಕೆ, ಯುದ್ಧ ಭೂಮಿಯಲ್ಲಿ ತನಗಿಂತ ಶಕ್ತಿಶಾಲಿ ರಾಜನೇ ಸೋಲಿಸಬೇಕು ಎಂಬ ನಾಲ್ಕು ವರಗಳನ್ನು ಪಡೆದಿದ್ದರು ಎಂದು ವಿವರಿಸಿದರು.
ಸಮಾಜದ ಮುಖಂಡ ಹನುಮಂತರಾವ್ ಗೊಂಗ್ಲೆ ಮಾತನಾಡಿ, ಸಮಾಜ ಒಗ್ಗಟ್ಟಿನಿಂದ ಇರಬೇಕಿದೆ. ಸಂಘಟಿತರಾಗಿ ಹೋರಾಟ ಮಾಡುವುದು ನಮ್ಮ ರಕ್ತದಲ್ಲೇ ಇದೆ. ಸಮಾಜ ಕಟ್ಟಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಪಾಲಕರು ಮಕ್ಕಳಿಗೆ ಮೊಬೈಲ್ ಗೀಳಿನಿಂದ ಹೊರ ತರಲು ಗಮನ ನೀಡಬೇಕು ಎಂದು ಹೇಳಿದರು. ಮಕ್ಕಳಿಗೆ ಸಂಸ್ಕಾರ, ವಿಚಾರಗಳನ್ನು ತಿಳಿಸಿ ಉತ್ತಮ ಮಾರ್ಗದಲ್ಲಿ ಸಾಗಿಸಲು ಪಾಲಕರು ಜವಾಬ್ದಾರಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಮಹಿಳಾ ಮಂಡಲದ ಅಧ್ಯಕ್ಷೆ ಶೋಭಾ ಬಾಯಿ ಮಾತನಾಡಿ, ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿರುವುದು ಶ್ಲಾಘಿಸಿದರು.
ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು ಸಮಯ ವ್ಯರ್ಥ ಮಾಡದೆ ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜದ ಅಧ್ಯಕ್ಷ ಚಂದು ಲಾಲ್ ಚೌದರಿ ಮಾತನಾಡಿ, ಶಿಕ್ಷಣದ ಜೊತೆ ಜೊತೆಗೆ ಮಕ್ಕಳಿಗೆ ಸಂಸ್ಕಾರ ನೀಡುವುದು ಅಗತ್ಯವಾಗಿದೆ ಪ್ರತಿಯೊಬ್ಬರು ಒಳ್ಳೆಯ ಮಾರ್ಗದಲ್ಲಿ ಸಾಗಲು ಪಾಲಕರು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಎಸ್ಎಸ್ಎಲ್ ಸಿ, ಪಿಯುಸಿ ಮತ್ತು ಪದವಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಅರ್ಚಕ ಅನಿಲ್ ಜೋಶಿ, ರಾಮಕಿಶನ ರಾವ್ ತಗಡಘರ್, ಮೋಹನ್ ಬುರಬುರೆ, ವೆಂಕಟರಾವ್ ಫುಲಝಾಡ, ವಿಠ್ಠಲ್ ರಾವ್ ಮಿಸ್ಕಿನ್ ರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸಮಾಜದ ಗೌರವಾಧ್ಯಕ್ಷ ರಾಮಕೃಷ್ಣನ ರಾವ್ ಗೊಂಗ್ಲೆ, ಉಪಾಧ್ಯಕ್ಷ ಡಾ. ನರಸಿಂಗರಾವ ಕಾಸಿಗಾವ್, ಅಂಬಾದಾಸ ಜೀತ್ರಿ, ಯಶವಂತರಾವ ಚೌದರಿ, ಯುವ ಅಧ್ಯಕ್ಷ ವಿನಾಯಕ ರಾವ ಜನಾರ್ಧನ್, ಲಕ್ಷ್ಮಣ್ ರಾವ್ ಕಮಲಾಪುರ್, ಜವಾಹಾರ ಲಾಲ್ ಮೇಂಗಜಿ, ಲಕ್ಷ್ಮಣ್ ರಾವ್ ಚೌದರಿ, ಮಹಿಳಾ ಮಂಡಲ ಗೌರವಾಧ್ಯಕ್ಷೆ ಶಾಂತ ಬಾಯಿ ಕಾಶಿಗಾವ್, ಸುಷ್ಮಾ ವೈ.ಚೌದರಿ ಇದ್ದರು.
ಭವ್ಯ ಶೋಭಾಯಾತ್ರೆ: ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಅಂಕಮ್ಮ ದೇವಿ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಹಸ್ತ್ರಾರ್ಜುನ ಮಹಾರಾಜರ ಭವ್ಯ ಮೆರವಣಿಗೆ ನೆರವೇರಿತು, ಸಮಾಜದ ನೂರಾರು ಯುವಕರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.
ನಾಗರತ್ನ ಮೇಂಗಜಿ ಪ್ರಾರ್ಥನ ಗೀತೆ ಹಾಡಿದರು. ಮಾಣಿಕ ಪ್ರಭು ಚೌದರಿ ನಿರೂಪಿಸಿ, ಧನ್ಯವಾದ ಅರ್ಪಿಸಿದರು.
ಸಾವಿರಾರು ವರ್ಷಗಳ ಇತಿಹಾಸವಿರುವ ಸನಾತನ ಪರಂಪರೆ ಪರಾಕ್ರಮಿ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಸರ್ಕಾರದಿಂದ ಆಚರಿಸಲು ಬಿಜೆಪಿ ಮುಖಂಡ ಜಗದೀಶ್ಚಂದ್ರ ಮೇಂಗಜಿ ಒತ್ತಾಯಿಸಿದರು. ಈ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಾದರೂ ಸರ್ಕಾರ ಸಮಾಜವನ್ನು ಗುರುತಿಸುವ ಕಾರ್ಯ ಮಾಡಲಿ ಎಂದರು.