ಗುರುಮಠಕಲ್ ಪಟ್ಟಣದ ಎಸ್.ಎಲ್.ಟಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಗಳಿಗಾಗಿ ಯಶಸ್ಸಿನ ಗುಟ್ಟು ಉಚಿತ ಕಾರ್ಯಾಗಾರ| ಪ್ರೊ. ಚನ್ನಾರೆಡ್ಡಿ ಪಾಟೀಲ್ ಮಾತು
ಗುರುಮಠಕಲ್: ಪ್ರೌಢ ಶಾಲೆಯಲ್ಲಿನ ವಿದ್ಯಾರ್ಥಿ ಜೀವನವು ನಿಮ್ಮ ಗುರಿಯನ್ನು ಸಾಧಿಸಲು ಬೇಕಾದ ತಯಾರಿಗೆ ಫಲವತ್ತಾದ ಅವಧಿಯಾಗಿದ್ದು, ನೀವೆಲ್ಲಾ ಉತ್ತಮ ಅಂಕಗಳನ್ನು ಪಡೆಯುವಲ್ಲಿ ಅನುಮಾನವಿಲ್ಲ, ಅದರ ಜತೆಗೆ ಉತ್ತಮ ಸಂಸ್ಕಾರವನ್ನೂ ಗಳಿಸಿಕೊಳ್ಳಿ ಎಂದು ಜಸ್ಟಿಸ್ ಶೀವರಾಜ ವಿ.ಪಾಟೀಲ ಫೌಂಡೇಶನ್ ಅಧ್ಯಕ್ಷ ಪ್ರೊ.ಚನ್ನಾರೆಡ್ಡಿ ಪಾಟೀಲ ಸಲಹೆ ನೀಡಿದರು.
ಪಟ್ಟಣದ ಎಸ್.ಎಲ್.ಟಿ. ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಜಸ್ಟಿಸ್ ಶಿವರಾಜ ವಿ.ಪಾಟೀಲ ಫೌಂಡೇಶನ್ ಸಹಯೋಗದಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ‘ಸೀಕ್ರೆಡ್ ಟು ಸಕ್ಸಸ್’ (ಯಶಸ್ಸಿನ ಗುಟ್ಟು) ಉಚಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿಯು ನಮ್ಮಿಡಿ ಬದುಕಿಗೆ ದಿಕ್ಸೂಚಿಯಾಗುವ ಅಮೃತ ಘಟ್ಟವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ವಿಜಯ ಮತ್ತು ಅಶೋಕ ಅವರು ಇಂಗ್ಲಿಷ್ ಮತ್ತು ಗಣಿತ ವಿಷಯಗಳಲ್ಲಿ ಅತ್ಯುತ್ತಮ ಅಂಕ ಸಾಧನೆಗೆ ಮಾರ್ಗದರ್ಶನ ನೀಡಿ, ಇಂಗ್ಲಿಷ್ ವ್ಯಾಕರಣವು ಉಳಿದೆಲ್ಲಾ ವಿಷಯಗಳಿಗಿಂತ ತುಂಬಾ ಸರಳವಾಗಿದೆ. ಆಸಕ್ತಿ, ಗಮನಿಸುವುದು ಮತ್ತು ಏಕಾಗ್ರತೆಯಿಂದ ಯಶಸ್ಸು ಸಾಧಿಸಬಹುದು. ಗಣಿತದ ಅರ್ಥವಾದರೆ ಶೇ.100 ಅಂಕ ಸಾಧಿಸಬಹುದಾದ ಏಕೈಕ ವಿಷಯವಾಗಿದೆ. ಭಯದಿಂದ ನಮಗೆ ಕಠಿಣವೆನ್ನಿಸುತ್ತವಷ್ಟೆ ಎಂದರು.
ಡಯಟ್ ಹಿರಿಯ ಉಪನ್ಯಾಸಕ ಜಿ.ಚಂದ್ರಕಾಂತರೆಡ್ಡಿ ಮಾತನಾಡಿ, ನಮ್ಮ ವಿದ್ಯಾಭ್ಯಾಸವೂ ಒಂದು ಆಟವೆಂದು ಆಸಕ್ತರಾಗಿ. ಪರೀಕ್ಷೆಯಲ್ಲಿ ನಮ್ಮ ಪುಸ್ತಕಗಳಲ್ಲಿದ್ದ ವಿಷಯಗಳ ಪ್ರಶ್ನೆಗಳೇ ಬರುತ್ತವೆ. ಆದ್ದರಿಂದ ಪರೀಕ್ಷೆಯ ಭಯವೇ ಬೇಡ. ವಿಷಯವನ್ನು ಸಂಪೂರ್ಣ ಅರ್ಥೈಸಿಕೊಂಡರೆ ಸಾಕು ಎಲ್ಲರೂ ಶೇ.100 ಅಂಕ ಪಡೆಯುವ ಸಾಮರ್ಥ್ಯ ಹೊಂದುವಿರಿ ಎಂದು ಹೇಳಿದರು.
ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು, ಶಿಕ್ಷಣ ಸಂಯೋಜನ ರವೀಂದ್ರ ಚವಾಣ, ಬಾಲಪ್ಪ ಸಿರಿಗೆಂ, ಎಸ್.ಎಲ್.ಟಿ. ನಿರ್ದೇಶಕ ನದೀಮ್ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.