ಆಸ್ತಿ ಇನ್ನೊಬ್ಬರ ಹೆಸರಿಗೆ ಮಾಡಿದ ಆರೋಪ| ತಪ್ಪಿತಸ್ಥರ ಅಮಾನತಿಗೆ ಒತ್ತಾಯ
ಗುರುಮಠಕಲ್ : ತಾಲೂಕಿನ ಗುಡ್ಲಗುಂಟಾ ಗ್ರಾಮದ ಜಮೀನು ಅನ್ಯ ಸಮುದಾಯದವರ ಹೆಸರಿಗೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಮಾದಿಗ ದಂಡೋರ ರಾಜ್ಯಾಧ್ಯಕ್ಷ ಬಿ.ನರಸಪ್ಪ ನೇತೃತ್ವದಲ್ಲಿ ತಹಶೀಲ್ದಾರ ಕಚೇರಿ ಮುತ್ತಿಗೆ ಹಾಕಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಿ.ನರಸಪ್ಪ ಅವರು, ಪರಿಶಿಷ್ಟರ ಮೇಲೆ ಆಗುತ್ತಿರುವ ಅನ್ಯಾಯಗಳನ್ನು ತೀವ್ರವಾಗಿ ಖಂಡಿಸಿದರು.
ಗುಡ್ಲಗುಂಟದ ತಾಯಪ್ಪ ಭೀಮಪ್ಪ ಅವರಿಗೆ ಸೇರಿದ 0.30 ಎಕರೆ ಜಮೀನು ಸಾಬಮ್ಮ ತಾಯಪ್ಪ ಎನ್ನುವವರ ಹೆಸರಿಗೆ ಮಾಡಲಾಗಿದೆ. ಕಳೆದ 8 ತಿಂಗಳಿಂದ ಕುಟುಂಬಸ್ಥರು ನ್ಯಾಯಕ್ಕಾಗಿ ಅಲೆದಾಡುತ್ತಿದ್ದು, ಭ್ರಷ್ಟ ಅಧಿಕಾರಿಗಳು ಒಬ್ಬರ ಜಮೀನು ಇನ್ನೊಬ್ಬರಿಗೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಸ್ತಿ ಬೇರೆ ಸಮುದಾಯದವರಿಗೆ ಹೇಗಾಯಿತು. ತಹಶೀಲ್ದಾರರು ಪರಿಶೀಲಿಸಬೇಕು, ಅವರೂ ಹೊಣೆಗಾರರು ಆಗಿದ್ದು ಅವರ ಮೇಲೆಯೂ ಕ್ರಮ ಆಗಬೇಕು. ಪೊಲೀಸ್ ಠಾಣೆಗೆ ದೂರು ದಾಖಲು ಮಾಡದಿದ್ದರೆ ಯಾದಗಿರಿ ಚಲೋ ಹಮ್ಮಿಕೊಳ್ಳಲಾಗು ವುದು ಎಂದು ಎಚ್ಚರಿಸಿ, ನಿರ್ಲಕ್ಷ್ಯದ ವಿರುದ್ಧ ಕಿಡಿ ಕಾರಿದರು.
ಮಾಜಿ ಪುರಸಭೆ ಅಧ್ಯಕ್ಷ ಭೀಮಶಪ್ಪ ಗೂಡ್ಸೆ ಮಾತನಾಡಿ, ವಿ.ಎ.ಗಳು ಸಾಕಷ್ಟು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಅಮಾಯಕರ ಆಸ್ತಿ ಇನ್ನೊಬ್ಬರಿಗೆ ಮಾಡುತ್ತಿದ್ದಾರೆ. ಹಣ ಕೊಟ್ಟರೆ ಏನು ಬೇಕಾದರೂ ಮಾಡುತ್ತಾರೆ. ವಾರಸತ್ವವೇ ಬದಲಾವಣೆ ಹೇಗಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಶಪ್ಪ ಚಿನ್ನಾಕಾರ ಮಾತನಾಡಿ, ಅಧಿಕಾರಿಗಳು ಮನಸ್ಸಿಗೆ ಬಂದಂತೆ ವರ್ತನೆ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ತಹಸೀಲ್ದಾರ್ ಗೆ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು: ಬೇಜವಾಬ್ದಾರಿ ಹೇಳಿಕೆ ನೀಡಿದರು ಎಂದು ತಹಶೀಲ್ದಾರರ ವಿರುದ್ಧ ಧಿಕ್ಕಾರ ಕೂಗಲು ಆರಂಭಿಸಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಸಾಹಸ ಪಟ್ಟರು. ಸಹಾಯಕ ಆಯುಕ್ತರು, ಇಲ್ಲ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸುವ ವರೆಗೆ ಇಲ್ಲಿಂದ ಕದಲಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸಂಜೆ 5 ಆದರೂ ತಹಸೀಲ್ದಾರ್ ಕಚೇರಿ ಎದುರು ಧರಣಿ ಮುಂದುವರಿದಿದೆ.