ಗುರುಮಠಕಲ್ ತಾಲ್ಲೂಕಿಗೆ ಮೂಲ ಸೌಕರ್ಯ ಒದಗಿಸಿ|ನ್ಯಾಯಾಲಯ, ಸಬ್ ರಿಜಿಸ್ಟ್ರಾರ್, ಬಿಇಓ ಕಚೇರಿ, ಅಗ್ನಿಶಾಮಕ ಠಾಣೆ ಸ್ಥಾಪಿಸಿ
ಗುರುಮಠಕಲ್: ತಾಲ್ಲೂಕಿನ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅದ್ಯಕ್ಷ ನಾಗೇಶ ಗದ್ದಿಗಿ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ತಾಲ್ಲೂಕು ಘೋಷಣೆಯಾಗಿ ವರ್ಷಗಳೇ ಕಳೆಯುತ್ತಿದ್ದರೂ ಇದುವರೆಗೆ ಕನಿಷ್ಟ ಮೂಲ ಸೌಕರ್ಯಗಳು ಒದಗಿಸಲು ಸರ್ಕಾರ ಇನ್ನು ಕ್ರಮ ಕೈಗೊಂಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗುರುಮಠಕಲ್ ನಲ್ಲಿ ಇದುವರೆಗೆ ನ್ಯಾಯಾಲಯ, ನೋಂದಣಿ ಕಚೇರಿ, ಅಗ್ನಿ ಶಾಮಕ ಠಾಣೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅತಿ ಅವಶ್ಯವಾಗಿದೆ. ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆ ಎಂದು ಘೋಷಣೆ ಮಾಡಿದ್ದು ಬಿಟ್ಟರೆ ಇದುವರೆಗೆ ಸೌಲತ್ತು ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಶಿಬಿರಗಳು ಮಾಡದೇ ಎಷ್ಟೋ ವರ್ಷಗಳೇ ಆಗಿವೆ ಎಂದು ಅವರು ದೂರಿದರು.
ತಾಲ್ಲೂಕಿನಲ್ಲಿ ತಹಸೀಲ ಕಚೇರಿ ಸೇರಿದಂತೆ ಬೆರಳೆಣೆಕೆಯ ಕಚೇರಿಗಳು ಇದ್ದು ಇನ್ನುಳಿದ ಕಚೇರಿಗಳ ಆರಂಭಕ್ಕೆ ಮುಹೂರ್ತವೇ ಕೂಡಿಬಂದಿಲ್ಲ. ಸಬ್ ರಿಜಿಸ್ಟಾರ್ ಕಚೇರಿ, ಅಗ್ನಿ ಶಾಮಕ ದಳದ ಕಚೇರಿ ಆರಂಭಕ್ಕೆ ಒತ್ತಾಯಿಸಿ ನಮ್ಮ ಸಂಘಟನೆ ವತಿಯಿಂದ ಹಲವು ಬಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಈ ಎಲ್ಲ ಸಮಸ್ಯೆಗಳ ಪರಿಹರಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಅವರು ಶಾಸಕ ಶರಣಗೌಡ ಕಂದಕೂರು ಅವರಿಗೆ ಒತ್ತಾಯಿಸಿದ್ದಾರೆ.