ಶ್ರೀ ಮಲ್ಲಿಕಾರ್ಜುನ ತಾತಾ ಆಶೀರ್ವಚನ : ತಾತಾಳಗೇರಿಯಲ್ಲಿ ಬಂಗಾರಗುಂಡು ಮಲ್ಲಯ್ಯನ ಜಾತ್ರೆ ಸಂಭ್ರಮ

ಯಾದಗಿರಿ: ಗುರಮಠಕಲ್ ತಾಲೂಕಿನ ತಾತಳಗೇರಾ ಗ್ರಾಮದಲ್ಲಿ ಗುರುವಾರ ಶ್ರೀ ಬಂಗಾರ ಗುಂಡು ಮಲ್ಲಯ್ಯ ತಾತನವರ 10ನೇ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು.

ಗ್ರಾಮದಲ್ಲಿನ ದೇವಸ್ಥಾನದಿಂದ ಮಧ್ಯಾಹ್ನ ಮಲ್ಲಯ್ಯನ ಕುದುರೆ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ತೆರಳಿ ಯಲ್ಲಮ್ಮನ ಭಾವಿಯಲ್ಲಿ ಅಭ್ಯಂಜನ ಮಾಡಿಸಲಾಯಿತು. ನಂತರ ದೇವರ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಈ ವೇಳೆ ಸಾವಿರಾರು ಭಕ್ತರು ಭಂಡಾರವನ್ನು ಪಲ್ಲಕ್ಕಿಯ ಮೇಲೆ ಎಸೆದು ಪುನೀತರಾದರು.

ನಂತರ ಜರುಗಿದ ಧರ್ಮಸಭೆ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ದೇವದುರ್ಗ ತಾಲೂಕಿನ ದೇವರ ಗುಂಡಗುರ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ತಾತಾ ( ಹೊನ್ನಯ್ಯ ತಾತ)ನವರು ಜಾತ್ರೆ, ಉತ್ಸವಗಳಿಂದ ಸಮಾಜದಲ್ಲಿ ಸಾಮರಸ್ಯ ವೃದ್ಧಿಯಾಗುತ್ತದೆ. ತಾತಾಳಗೇರಾ ಅತ್ಯಂತ ಚಿಕ್ಕ ಗ್ರಾಮವಾದರೂ ಇಲ್ಲಿ ಎಲ್ಲ ವರ್ಗದ ಜನತೆ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದಾರೆ ಎಂದರು.

ಕಳೆದೊಂದು ದಶಕದಿಂದ ಮಲ್ಲಯ್ಯನ ಜಾತ್ರೆ ನಡೆಸಲಾಗುತ್ತಿದ್ದು, ಭಗವಂತ ರೈತಾಪಿ ವರ್ಗದ ಬದುಕನ್ನು ಹಸನು ಮಾಡಲಿ ಎಂದು ನುಡಿದರು.

ಕೋಲಿ ಸಮಾಜದ ರಾಜ್ಯ ಸಂಘಟನಕಾ ಕಾರ್ಯದರ್ಶಿ ಉಮೇಶ ಮುದ್ನಾಳ್ ಮಾತನಾಡಿ, ಗ್ರಾಮೀಣ ಭಾಗದ ಜನತೆ ಅತ್ಯಂತ ಮುಗ್ಧರು. ಕೃಷಿಯನ್ನೇ ದೇವರು ಎಂದು ನಂಬಿಕೊಂಡು ಜೀವನ ಸಾಗಿಸುತ್ತಾರೆ. ಪಾಲಕರು ಎಷ್ಟೇ ಕಷ್ಟವಿದ್ದರೂ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದನ್ನು ಮರೆಯಕೂಡದರು. ಯುವಕರು ದುಶ್ಚಟಗಳಿಗೆ ದಾಸರಾಗದೆ, ತಂದೆ,ತಾಯಿಗಳ ಮಾತು ಕೇಳಿ ಜೀವನದಲ್ಲಿ ಮುಂದೆ ಬರುವಂತೆ ಸಲಹೆ ಮಾಡಿದರು. ಜಾತ್ರೆಯಲ್ಲಿ ಸುತ್ತಮುತ್ತಲಿನ ಸಾವಿರಾರು ಜನ ಪಾಲ್ಗೊಂಡಿದ್ದರು.

ಗಮನ ಸೆಳೆದ ಡೊಳ್ಳಿನ ಕುಣಿತ: ಉತ್ಸವದಲ್ಲಿ ಭಜನೆ ಹಾಗೂ ಡೊಳ್ಳಿನ ಕುಣಿತ ಗಮನ ಸೆಳೆಯಿತು. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರು ಸಹ ಡೊಳ‍್ಳಿನ ನಾದಕ್ಕೆ ಹೆಜ್ಜೆ ಹಾಕುವ ಮೂಲಕ ಮೆರವಣಿಗೆಗೆ ಜೋಶ್ ತಂದರು. ಅಲ್ಲದೆ, ಕೈ ಕುಸ್ತಿ ಸ್ಪರ್ಧೆ ನಡೆಯಿತು. ಬಂದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

Spread the love

Leave a Reply

Your email address will not be published. Required fields are marked *

error: Content is protected !!