₹ 3.50 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ | ಸದುಪಯೋಗ ಕ್ಕೆ ಕರೆ
ಯಾದಗಿರಿ : ಗುರುಮಠಕಲ್ ಮತಕ್ಷೇತ್ರದ ಹತ್ತಿಕುಣಿಯಲ್ಲಿ ಸರ್ಕಾರ 3.50 ಕೋಟಿ ರೂ. ವೆಚ್ಚದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆ ಹಾಗೂ ಸಿಬ್ಬಂದಿಗಳಿಗೆ ವಸತಿ ಗೃಹ ನಿರ್ಮಾಣ ಮಾಡಿದೆ, ಕಾರಣ ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಸೇವೆ ಬಳಸಿಕೊಳ್ಳಬೇಕು ಎಂದು ಆಸ್ಪತ್ರೆಯ ವೈಧ್ಯಾಧಿಕಾರಿಗಳಾದ ಡಾ. ಬಿ.ಎಸ್ ಪಾಟೀಲ್ ಗಾಜರಕೋಟ್ ಹೇಳಿದರು.
ಹತ್ತಿಕುಣಿ ಗ್ರಾಮದ ನೂತನ ಆಸ್ಪತ್ರೆಯಲ್ಲಿ ಸುಭಾಶ್ಚಂದ್ರಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಗುರುಮಠಕಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ ಅವರು ಆಸ್ಪತ್ರೆಯನ್ನು ಉದ್ಘಾಟಿಸಿದ್ದಾರೆ, ಸಂಪ್ರದಾಯದಂತೆ ಪೂಜೆ ಮಾಡಿ, ರೋಗಿಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಇಲ್ಲಿಯೇ ಸಿಬ್ಬಂದಿಗಳಿಗೆ ರಾತ್ರಿ ತಂಗಲು ವಸತಿ ಗೃಹಗಳನ್ನು ನಿರ್ಮಾಣ ಮಾಡಿದಿರುವುದರಿಂದ ತುರ್ತು ಚಿಕಿತ್ಸೆ ನಿಮಿತ್ಯ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಗ್ರಾಮಗಳು, ತಾಂಡಾಗಳು ಬರುತ್ತವೆ, ರೋಗಿಗಳಿಗೆ ನಮ್ಮ ತಂಡ ಗುಣಮಟ್ಟದ ವೈಧ್ಯಕೀಯ ಸೇವೆ ನೀಡುತ್ತಿದೆ.
1 ತಿಂಗಳಲ್ಲಿ ಆಸ್ಪತ್ರೆಯಲ್ಲಿ ೨೫-೩೦ ಮಹಿಳೆಯರ ಹೆರಿಗೆ ಆಗುತ್ತಿವೆ, ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ಡಿಹೆಚ್‌ಓ ಅವರು ಇಲ್ಲಿನ ಚಟುವಟಿಕೆಗಳಿಗೆ ಗಮನಿಸಿ, ರೋಗಿಗಳಿಗೆ ಅನುಕೂಲವಾಗಲು ಸರ್ಕಾರದಿಂದ ಆಂಬ್ಯುಲೆನ್ಸ್ ವಾಹನ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಯಲ್ಲಿ ಹಾಗೂ ಆವರಣದಲ್ಲಿ ಪರಿಸರ ಸ್ವಚ್ಚತೆಗೆ ನಾವೂ ಮೊದಲು ಆದ್ಯತೆ ನೀಡುತ್ತೇವೆ, ಬರುವ ದಿನಗಳಲ್ಲಿ ಗಿಡ-ಮರಗಳನ್ನು ಬೆಳೆಸಿ, ಉತ್ತಮ ವಾತಾವರಣ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿಯ ವೈಧ್ಯಾಧಿಕಾರಿಗಳಾದ ಡಾ, ಮುಧಾಸೀರ್ ಅಹ್ಮದ್, ಸಿಬ್ಬಂದಿಗಳಾದ ಭೀಮರಾಯ, ದೇವಿಂದ್ರಪ್ಪ, ಪಾಲಪ್ಪ, ಶ್ವೇತಾ, ಪುಷ್ಪಾಂಜಲಿ, ಶಾಲಿನಿ, ವಿಮಲಾ, ಶ್ರೀದೇವಿ, ದಶರಥ ಎಲ್ಲಾ ಆಶಾ ಕಾರ್ಯಕರ್ತರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
