ತರಗತಿ ಬಹಿಷ್ಕರಿಸಿ ಡಿಡಿಪಿಐ ಕಚೇರಿ ಎದುರು ಪ್ರತಿಭಟಿಸಿದ ಮಕ್ಕಳು…!

ಯಾದಗಿರಿಕನ್ನಡ, ಗಣಿತ, ಸಮಾಜ ಶಿಕ್ಷಕರು ಇಲ್ಲ, ನಾವು ಅಭ್ಯಾಸ ಮಾಡುವುದು ಹೇಗೆ…. ನನಗೆ ಲೆಕ್ಕ ಕಷ್ಟ, ಬಿಡಿಸಿ ಹೇಳುವವರಿಲ್ಲ.. ಹೀಗೆ ತಮ್ಮ ಅಳಲು ತೋಡಿಕೊಳ್ಳುತ್ತಿರುವ ಪ್ರತಿಭಟನಾ ನಿರತ ಮಕ್ಕಳು ತರಗತಿಗಳು ಬಹಿಷ್ಕರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಚೇರಿ ಎದುರು ಘೋಷಣೆಗಳು ಕೂಗುತ್ತಿದ್ದರು…! ಇದೆಂತಾ ವಿಪರ್ಯಾಸ ನೋಡಿ ಕನ್ನಡ ಶಾಲೆಯಲ್ಲಿ ‘ಕನ್ನಡ’ ಬೋಧನೆ ಮಾಡುವ ಖಾಯಂ ಶಿಕ್ಷಕರಿಲ್ಲ….

ಯಾದಗಿರಿ ನಗರದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಕಛೇರಿಯ ಎದುರು ತರಗತಿಗಳನ್ನು ಬಹಿಷ್ಕರಿಸಿ ಹೆಡಗಿಮದ್ರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸಬೇಕೆಂದು ಆಗ್ರಹಿಸಿ AIDSO ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಯಾದಗಿರಿ ನಗರದ ಪ್ರವಾಸಿ ಮಂದಿರದಿಂದ ಡಿಡಿಪಿಐ ಕಛೇರಿಯ ವರೆಗೆ ಹೆಡಗಿಮದ್ರಾ ಹಿರಿಯ ಪ್ರಾಥಮಿಕ ಶಾಲೆಗೆ ಕನ್ನಡ, ಗಣಿತ, ಸಮಾಜ, ಇಂಗ್ಲಿಷ್ ವಿಷಯಗಳ ಶಿಕ್ಷಕರನ್ನು ಕೊಡಿ! ಶಾಲೆಯಲ್ಲಿರಬೇಕಾದ ಮಕ್ಕಳನ್ನು ಬೀದಿಗೆ ಬರುವಂತೆ ಮಾಡಿದ ಶಿಕ್ಷಣ ಇಲಾಖೆಗೆ ಧಿಕ್ಕಾರ! ಗುಣಮಟ್ಟದ ಶಿಕ್ಷಣ ನಮ್ಮ ಹಕ್ಕು!ಎಂದು ಘೋಷಣೆಗಳನ್ನು ಕೂಗುತ್ತಾ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆರವಣಿಗೆಯ ಮೂಲಕ ಹೋರಾಟದಲ್ಲಿ ಪಾಲ್ಗೊಂಡರು.

ಹೆಡಗಿಮದ್ರಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶೈಕ್ಷಕರೊಬ್ಬರನ್ನು ಬಿಟ್ಟರೆ ಯಾವ ಖಾಯಂ ಶಿಕ್ಷಕರು ಇಲ್ಲ. ಸುತ್ತಮುತ್ತಲಿನ 4 – 5 ಹಳ್ಳಿಗಳಿಂದ 400 ಕ್ಕೂ ಅಧಿಕ ಮಕ್ಕಳು ಈ ಶಾಲೆಗೆ ಓದಲು ಬರುತ್ತಾರೆ. 12 ಖಾಯಂ ಶಿಕ್ಷಕರನ್ನು ಹೊಂದಿರಬೇಕಿದ್ದ ಶಾಲೆ, ಕೇವಲ ಇಬ್ಬರು ಶಿಕ್ಷಕರನ್ನು ಹೊಂದಿದೆ. ಕಳೆದ ವರ್ಷ ಇಂಗ್ಲೀಷ್ ವಿಷಯದ ಶಿಕ್ಷಕರು ವರ್ಗಾವಣೆಯಾಗಿದ್ದರು. ಈ ವರ್ಷ ಗಣಿತ, ಸಮಾಜ, ಕನ್ನಡ ಹಾಗೂ ನಲಿ – ಕಲಿ ಈ 4 ವಿಷಯಗಳ ಶಿಕ್ಷಕರು ವರ್ಗಾವಣೆಯಾಗಿದ್ದಾರೆ. ವರ್ಗಾವಣೆಯಾದ ಜಾಗದಲ್ಲಿ ಯಾರೊಬ್ಬ ಖಾಯಂ ಶಿಕ್ಷಕರನ್ನು ನೇಮಕ ಮಾಡದೇ ಕೇವಲ ಅತಿಥಿ ಶಿಕ್ಷಕರ ಮೂಲಕ ಶಾಲೆ ನಡೆಸುತ್ತಿದ್ದಾರೆ.

ಇತ್ತೀಚಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ಶಾಲೆಗೆ ಭೇಟಿ ನೀಡಿದ್ದರು. ಈ ವಿಷಯ ಅವರ ಗಮನದಲ್ಲಿದ್ದರೂ ಏನು ಕ್ರಮ ಕೈಗೊಂಡಿಲ್ಲ. ಪೋಷಕರು ನೀಡಿದ ಅನೇಕ ಪತ್ರಗಳಿಗೂ ಇಲಾಖೆ ಏನು ಉತ್ತರ ಕೊಡದೆ ಮೌನ ವಹಿಸಿರುವುದನ್ನು ವಿರೋಧಿಸಿ ಇಂದು ತರಗತಿ ಬಹಿಷ್ಕರಿಸಿ ತಮ್ಮ ಪಾಲಕಾರೊಂದಿಗೆ ಪ್ರತಿಭಟನೆಗೆ ಬಂದಿದ್ದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ AIDSO ನ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ ಕೆ ಮಾತನಾಡಿ, ಯಾದಗಿರಿ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿದ್ದು ಅದನ್ನು ಮೇಲೆತ್ತಿ ಸರಿಪಡಿಸಲು ಶಿಕ್ಷಣ ಇಲಾಖೆ ಹೆಚ್ಚು ಮುತುವರ್ಜಿವಹಿಸಬೇಕು. ಬದಲಿಗೆ ಇಡೀ ರಾಜ್ಯದಲ್ಲಿಯೇ ಹೆಚ್ಚು ಏಕೋಪಾಧ್ಯಾಯ ಶಾಲೆಗಳು ಯಾದಗಿರಿ ಜಿಲ್ಲೆಯಲ್ಲಿಯೇ ಇರುವುದು ದುರಂತ! ಮಕ್ಕಳ ಸಮಗ್ರ ಬೆಳವಣಿಗೆಗೆ ಬುನಾದಿ ಹಾಕಬೇಕಾದ ಪ್ರಾಥಮಿಕ ಶಾಲೆಗಳಲ್ಲಿ ಈ ಶಿಕ್ಷಕರ ಕೊರತೆ ಮಕ್ಕಳ ಬೆಳವಣಿಗೆಯ ಮೇಲೆ ಬಹಳ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ.

ಹೀಗೆ ಸಮರ್ಪಕವಾಗಿ ಶಿಕ್ಷಕರಿಲ್ಲದೇ ಹೆಡಗಿಮದ್ರಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂರಾರು ಮಕ್ಕಳ ಭವಿಷ್ಯದ ಕಮರಿ ಹೋಗುತ್ತಿದ್ದು, ಈ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಅಗತ್ಯಕ್ಕೆ ತಕ್ಕಂತೆ ಕನ್ನಡ, ಇಂಗ್ಲೀಷ್, ಸಮಾಜ, ಗಣಿತ ಹಾಗೂ ನಲಿ-ಕಲಿ ಸೇರಿದಂತೆ ಎಲ್ಲಾ ವಿಷಯಗಳ ಖಾಯಂ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು. ವಿದ್ಯಾರ್ಥಿಗಳ ಪೋಷಕರಲ್ಲೊಬ್ಬರಾದ ಜಮಾಲ್ ಸಾಬ್, ವಿದ್ಯಾರ್ಥಿಗಳಾದ ಅನಿಲ್ ಮತ್ತು ಇಂದುಲೇಖ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ನಂತರ ಉಪನಿರ್ದೇಶಕರ ಪರವಾಗಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕ ಬಸವರಾಜ ಮನವಿ ಪತ್ರ ಸ್ವೀಕರಿಸಿದರು.

ಹೋರಾಟದಲ್ಲಿ ಪಾಲಕರಾದ ಬಂಗಾರಪ್ಪ, ಮೆಹಬೂಬ್, ಶಿವರಾಜ್, ರಾಮರೆಡ್ಡಿ ಗೌಡ, ವಿದ್ಯಾರ್ಥಿಗಳಾದ ಅನಿಲ, ಮಹೇಶ, ಜೋಹಾನ್, ಇಂದುಲೇಖ, ಶಿವಮ್ಮ, ನಿಂಗಮ್ಮ, ಕಾವೇರಿ ಸೇರಿದಂತೆ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!