ಶಾಸಕ ಅವಿನಾಶ ಜಾಧವ್ ಅಭಿಮತ | ಎಸ್.ಎಸ್.ವಿದ್ಯಾಪೀಠದ ವಾರ್ಷಿಕೋತ್ಸವ | ಜ್ಞಾನಕ್ಕೆ ಧಾರ್ಮಿಕತೆಯ ಸಿಂಚನ ಅಗತ್ಯ

ಯಾದಗಿರಿ: ಮನುಷ್ಯ ತನ್ನಲ್ಲಿನ‌ ಜ್ಞಾನ ವೃದ್ಧಿಸಿಕೊಳ್ಳಲು ಶಿಕ್ಷಣ ಪಡೆದುಕೊಳ್ಳುತ್ತಾನೆ. ನಾಲ್ಕು ಅಕ್ಷರ ಕಲಿತಾಗ ಮಾತ್ರ ನಮಗೆ ಜ್ಞಾನ ಸಿಗುವುದಿಲ್ಲ. ‌ಅದಕ್ಕೆ ಧಾರ್ಮಿಕತೆ ಸಿಂಚನ ಅಗತ್ಯವಾಗಿದೆ ಚಿಂಚೋಳಿ ಶಾಸಕ ಡಾ.‌ಅವಿನಾಶ ಜಾಧವ್ ಅಭಿಪ್ರಾಯಪಟ್ಟರು.

ಶನಿವಾರ ಸಂಜೆ ತಾಲೂಕಿನ ಹೆಡಗಿಮದ್ರಾ ಗ್ರಾಮದ ಶ್ರೀ ಶಾಂತ ಶಿವಯೋಗಿಗಳ ಮಠದಲ್ಲಿನ ಎಸ್.ಎಸ್.ವಿದ್ಯಾಪೀಠದ 7ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾನನದಲ್ಲಿ ಬಿದ್ದ ಯಾವುದೋ ಒಂದು ಕಲ್ಲು ಶಿಲೆಯಾಗಿ ಮಾರ್ಪಟ್ಟು ದೈವಿಕ ಕಳೆ ಪಡೆದುಕೊಳ್ಳುತ್ತದೆ. ಇದರಲ್ಲಿ ಶಿಲ್ಪಿಯ ಕಲಾ ನೈಪುಣ್ಯದ ಜತೆಗೆ ಧರ್ಮದ ಲೇಪನವೂ ಇರುತ್ತದೆ ಎಂದು ಹೇಳಿದರು. ಅದರಂತೆ ಮಠ ಪರಂಪರೆಯುಳ್ಳ ಇಂಥ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಶಿಕ್ಷಕರ ಜ್ಞಾನಾರ್ಜನೆ ಜತೆಗೆ ಗುರುಗಳ ಕರುಣೆ ಸದಾ ಅವರ ಮೇಲಿರುತ್ತದೆ.‌ ಶ್ರೀಮಠದ ಪೀಠಾಧಿಪತಿಗಳು ಉತ್ತಮ‌ ವಾಗ್ಮಿಗಳಾಗಿದ್ದಾರೆ. ಸದಾ ಶಿಕ್ಷಣದ ಬಗ್ಗೆ ಹಾತೊರುವ ಮನೋಭಾವ ಹೊಂದಿದ್ದಾರೆ ಎಂದರು.

ಗುರುಮಠಕಲ್ ಖಾಸಾಮಠದ‌ ಶ್ರೀ ಶಾಂತವೀರ ಗುರು ಮುರಘಾರಾಜೇಂದ್ರ ಸ್ವಾಮಿಗಳು ಮಾತನಾಡಿ, ಇಂದಿನ‌‌ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಅತ್ಯಂತ ಅಗತ್ಯವಾಗಿದೆ.‌ ಮೊಬೈಲ್ ಹಾವಳಿಯಿಂದ ಯುವ ಪೀಳಿಗೆ ಹಾಳಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು, ಪ್ರಮುಖರಾದ ರಾಚನಗೌಡ ಮುದ್ನಾಳ್, ಮಹೇಶರಡ್ಡಿ ಮುದ್ನಾಳ್, ಲಯನ್ಸ್ ಕ್ಲಬ್ ಅಧ್ಯಕ್ಷ ಭೀಮನಗೌಡ ಕ್ಯಾತನಾಳ, ಮಲ್ಲನಗೌಡ ಹಳಿಮನಿ ಕೌಳೂರು,ಪಿಎಸ್ಐ ಹಣಮಂತ ಬಂಕಲಗಿ,ಠಾಣಗುಂದಿ ಪಿಡಿಒ ಶಿವುಕುಮಾರ, ವೆಂಕಟರೆಡ್ಡಿ ಮಾಲಿ ಪಾಟೀಲ್ ಅಬ್ಬೆತೂಮಕುರ,ಮಹಾಂತಯ್ಯಾ ಸ್ವಾಮಿ ಹಿರೇಮಠ,ಪಿಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷ ನಾಗರಡ್ಡಿ ಅಣಿಬಿ,ಗಿರೀಶ ಮಾಲೀ ಪಾಟೀಲ್,ಭಿಮರಡ್ಡಿ ಸಾವು, ಶಿವಾನಂದ ಪಿರಿಪುರ,ಶೇಕೀಲ್ ಖಾನ್, ಶಾಲೆಯ ವಿದ್ಯಾರ್ಥಿಗಳ ಪೋಷಕರು ಮತ್ತು ಸುತ್ತಮುತ್ತಲು ಊರಿನ ಜನರು ಉಪಸ್ಥಿತರಿದ್ದರು ಇದ್ದರು.

ಗಮನ ಸೆಳೆದ ನಾಟಕ ಪ್ರದರ್ಶನ : ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಜೂಜಾಟದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಹಾಭಾರತದ ಕಥಾ ವಸ್ತುವನ್ನು ಆಧರಿಸಿ, ಪ್ರಸ್ತುತ ಘಟನಾವಳಿಗಳನ್ನು ಉದಾಹರಿಸಿ ಪ್ರಸ್ತುತ ಪಡಿಸಿದ ದ್ರೌಪದಿ ವಸ್ತ್ರಾಪಹರಣ ನಾಟಕ ಜನಮನ‌ ಸೆಳೆಯಿತು. ವೇದಿಕೆ ಹಿಂಭಾಗದಲ್ಲಿ ಥೇಟ್ ಮಹಾಭಾರತದ ಸೆಟ್ ಹಾಕಿ ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದು ಪ್ರೇಕ್ಷಕರನ್ನು ಕೆಲಕಾಲ ಬೇರೆ ಲೋಕಕ್ಕೆ ಕೊಂಡೊಯ್ಯಿತು. ಸತತ ಒಂದು ತಿಂಗಳು ಕಾಲ‌ ಮುದ್ದು ಮಕ್ಕಳು ನಾಟಕ‌ ರಿಹರ್ಸಲ್ ಮಾಡಿದ್ದರು. ‌ಸಾಣೆಹಳ್ಳಿ ಶಿವ ಸಂಚಾರ ನಾಟಕ‌ ತಂಡ‌ ನಿರ್ದೇಶನ ಮಾಡಿತ್ತು.
ಇಂದು ರಥೋತ್ಸವ : ಹೆಡಗಿಮದ್ರಾ ಗ್ರಾಮದಲ್ಲಿ ಫೆ.09 ರಂದು ಸಂಜೆ 6.30ಕ್ಕೆ ಶ್ರೀ ಶಾಂತ ಶಿವಯೋಗಿಗಳ ಭವ್ಯ ರಥೋತ್ಸವ ಜರುಗಲಿದೆ. ಬೆಳಗ್ಗೆ ಶಿವಯೋಗಿಗಳ ಕತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ನಡೆಯಲಿದೆ. ಭಾನುವಾರ ರಾತ್ರಿ ಗ್ರಾಮದಲ್ಲಿ‌ ತನಾರತಿ ಕಾರ್ಯಕ್ರಮ ನಡೆಯಿತು.

Spread the love

Leave a Reply

Your email address will not be published. Required fields are marked *

error: Content is protected !!