ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಿ, ಮುಖ್ಯವಾಹಿನಿಗೆ ತನ್ನಿ | ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ  ಶಶಿಧರ್ ಕೋಸಂಬೆ

ಯಾದಗಿರಿ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರು ವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶ್ರೀ ಶಶಿಧರ್ ಕೋಸಂಬೆ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು “ಶಾಲೆಯಲ್ಲಿದೆ ಶಿಕ್ಷಣದ ಜೊತೆಗೆ ರಕ್ಷಣೆ “ಶೀರ್ಷಿಕೆಯಡಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ “ಉಚಿತ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ- 2009 ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಗುರುತರ ಜವಾಬ್ದಾರಿ ಶಿಕ್ಷಣ ಇಲಾಖೆ ಅಧಿಕಾರಿಗಳ ಮೇಲಿದೆ. ಜಿಲ್ಲೆಯ ಸುಮಾರು 54,481 ಮಕ್ಕಳ ಆಧಾರ್ ಮೌಲ್ಯೀಕರಣ ಆಗಬೇಕಾಗಿದ್ದು, ಶಿಕ್ಷಣ ಇಲಾಖೆಯ ಆಯುಕ್ತರ ನಿರ್ದೇಶನದ ಮೇರೆಗೆ ಒಂದು ವಾರದಲ್ಲಿ ಇದನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ಇನ್ನೂವರೆಗೆ ಈ ಕಾರ್ಯ ಆಗದೇ ಇರುವ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಕುರಿತು ಆಯೋಗ ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದರು.

ಬಡ ಮಕ್ಕಳು ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಬಾರದು. ಶಿಶ್ಯವೇತನ, ಶೈಕ್ಷಣಿಕ ಸೌಲಭ್ಯಗಳು ಅವರಿಗೆ ಸಕಾಲಕ್ಕೆ ದೊರಕಿಸುವ ಸದುದ್ದೇಶವನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೊಂದಿದೆ. ಈ ಹಿನ್ನೆಲೆಯಲ್ಲಿ ಆಧಾರ ಪರಿಶೀಲಿಸಿ ಸರಿಪಡಿಸುವ ಕಾರ್ಯ ತುರ್ತಾಗಿ ಕೈಗೊಳ್ಳಬೇಕು. ಸ್ಯಾಟ್ಸ(SATS) ಅಪಾರ(APAAR) ತಂತ್ರಾಂಶಗಳ ಬಗ್ಗೆ ಈಗಾಗಲೇ ಗೂಗಲ್ ಮತ್ತು ಭೌತಿಕ ತರಬೇತಿಗಳನ್ನು ಸಹ ನೀಡಲಾಗಿದೆ. ಕಾರಣ ಆಧಾರ್ ಸರಿಪಡಿಸುವ ಜೊತೆಗೆ ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿ ಮುಖ್ಯವಾಹಿನಿಗೆ ತರುವಂತೆ ಅವರು ಸೂಚಿಸಿದರು.

ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿ -2016ರ ಅನ್ವಯ ಸಕಲ ಕ್ರಮಗಳನ್ನು ಕೈಗೊಳ್ಳಬೇಕು. ಮಕ್ಕಳ ಸುರಕ್ಷಾ ಸಮಿತಿಗಳನ್ನು ರಚಿಸಬೇಕು. ಕಡ್ಡಾಯವಾಗಿ ಸಲಹಾ ಪೆಟ್ಟಿಗೆ ಇಡಬೇಕು. ಕಾಲಕಾಲಕ್ಕೆ ಬಿಸಿಊಟ ಸಮಸ್ಯೆಗಳನ್ನು ಬಗೆಹರಿಸಬೇಕು. ಮಕ್ಕಳಿಗೆ ಸಮರ್ಪಕ ಆಹಾರ ಪೂರೈಕೆ ಆಗದಿದ್ದಲ್ಲಿ, ಆಹಾರ ಭದ್ರತಾ ಕಾಯ್ದೆಯ ಉಲ್ಲಂಘನೆ ಎಂದು ಪರಿಗಣಿಸಿ, ಪದೇ ಪದೇ ಲೋಪ ಸಂದರ್ಭದಲ್ಲಿ ಸೊ-ಮೋಟೊ ಪ್ರಕರಣ ದಾಖಲೆಗೂ ಕ್ರಮಕೈಗೊಳ್ಳಲಾಗುವುದು.

ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಕಾಯ್ದೆ- 2009 ರನ್ವಯ ಕ್ರಮ ಸಹ ಕೈಗೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ಸಂಬಂಧ ಪಟ್ಟವರ ವಿರುದ್ಧ ಬೆಂಗಳೂರಿಗೆ ಕರೆದು ಆಯೋಗದ ಮುಂದೆ ವಿಚಾರಣೆಗೆ ಒಳಪಡಿಸಲಾಗುವುದು. ವಿಶೇಷ ಸಂದರ್ಭದಲ್ಲಿ ಅಮಾನತ್ತು ನಂತಹ ಮತ್ತು ಇನ್ಕ್ರಿಮೆಂಟ್ ತಡೆ ಹಿಡಿಯುವಂತಹ ಕ್ರಮದ ಬಗ್ಗೆಯೂ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ತಿಳಿಸಲಾಗು ವುದೆಂದು ಎಚ್ಚರಿಕೆ ನೀಡಿದರು.

ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಕಡ್ಡಾಯ ವಾಗಿ ಅಭ್ಯರ್ಥಿಗಳ ಪೊಲೀಸ್ ವೆರಿಫಿಕೇಶನ್ ಆಗಿರಬೇಕು. ಶಾಲೆಗಳಲ್ಲಿ ಕಡ್ಡಾಯವಾಗಿ ಬದ್ಧತಾ ಪ್ರಮಾಣ ಪತ್ರವನ್ನು ಪಡೆಯಲು ಸೂಚಿಸಿದ ಅವರು, ಜಿಲ್ಲಾ ಮಟ್ಟದಿಂದ ತಾಲೂಕ ಹಾಗೂ ಗ್ರಾಮ ಮಟ್ಟದ ವರೆಗಿನ ಅಧಿಕಾರಿಗಳು ಎಚ್ಚರಿಕೆ ಯಿಂದ ಕಾರ್ಯನಿರ್ವಹಿಸಬೇಕು.

ಮಕ್ಕಳ ಭವಿಷ್ಯವನ್ನು ರೂಪಿಸುವಂತಹ ಗುರುತರ ಜವಾಬ್ದಾರಿ ಹೊಂದಿದ ಇಲಾಖೆ ಇದಾಗಿರುವುದರಿಂದ, ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಬಿ .ಆರ್. ಪಿ ,ಸಿ ಆರ್ ಪಿ , ಶಿಕ್ಷಣ ಸಮನ್ವಯಾಧಿಕಾರಿಗಳು ಹಾಗೂ ಆಯಾ ಶಾಲೆಗಳ ಮುಖ್ಯೋಪಾಧ್ಯಾಯರು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಮಕ್ಕಳ ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಅವರು ಜಿಲ್ಲೆಯ ವಿವಿಧ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆ, ಮೂಲಸೌಕರ್ಯಗಳ ಕೊರತೆ, ಶೌಚಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಇನ್ನಿತರ ಕುಂದುಕೊರತೆಗಳ ಬಗ್ಗೆ ಅವಶ್ಯಕ ಮಾಹಿತಿಯನ್ನು ಪಡೆದರು.

ಇಲಾಖೆಯ ಉಪ ನಿರ್ದೇಶಕ ಚನ್ನಬಸಪ್ಪ ಮುಧೋಳ ಅವರು ಮಾತನಾಡಿ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗಕ್ಕೆ ಸಂಬಂಧ ಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳು ವಸ್ತುನಿಷ್ಠ ವರದಿಗಳನ್ನು ಸಲ್ಲಿಸಬೇಕು. ಯಾವುದೇ ರೀತಿಯ ಸಬೂಬು ಹೇಳದೆ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವಂತೆ ಸೂಚನೆ ನೀಡಿದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹುತಾತ್ಮರಾದ ದಿನ ಎರಡು ನಿಮಿಷ ಮೌನ ಆಚರಿಸಿ ಗೌರವ ಸಲ್ಲಿಸಲಾಯಿತು.

ಮಕ್ಕಳ ರಕ್ಷಣಾಧಿಕಾರಿ ಪ್ರೇಮಮೂರ್ತಿ, ಸಿಪಿಐ ವಿಜಯ ಕುಮಾ ರ  ಅವರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!