ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ, 10 ಜನರಿಗೆ ಸನ್ಮಾನ | ಪತ್ರಕರ್ತರು ಧ್ವನಿ ಇಲ್ಲದವರ ಪರ ನಿಲ್ಲಲಿ – ಲಲಿತಾ ಅನಪೂರ

ಯಾದಗಿರಿ: ಪತ್ರಿಕೋದ್ಯಮ ಸಮಾಜದ 4ನೇ ಅಂಗವಾಗಿದೆ. ಸಮಾಜಮುಖಿ ಕಾರ್ಯಗಳಲ್ಲಿ ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಧ್ವನಿಯಿಲ್ಲದವರ ಪರವಾಗಿ ಪತ್ರಕರ್ತರು ನಿಲ್ಲಬೇಕು ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜನರ ಸಮಸ್ಯೆಗಳ ಕುರಿತು ವರದಿ ಮಾಡುವ ಮೂಲಕ ಪತ್ರಕರ್ತರು ಸಮಾಜದ ಬೆನ್ನೆಲುಬಾಗಿದ್ದಾರೆ. ವೈಯಕ್ತಿಕ ಜೀವನ ಬದಿಗಿಟ್ಟು ನಿತ್ಯ ಕೆಲಸ ಮಾಡುತ್ತಾರೆ. ಅವರ ಸೇವೆ ಅನನ್ಯವಾಗಿದೆ ಎಂದು ತಿಳಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಮಾತನಾಡಿ, ಸಮಾಜದ ತಪ್ಪುಗಳನ್ನು ಪತ್ರಿಕಾರಂಗ ತಿದ್ದುವ ಕೆಲಸ ಹಾಗೂ ಧ್ವನಿ ಇಲ್ಲದವರ ಪರವಾಗಿ ಪತ್ರಿಕಾರಂಗ ಕೆಲಸ ಮಾಡಬೇಕು. ಆದರೆ, ಪತ್ರಿಕೋದ್ಯಮ ಜಾತಿಯ ಆಧಾರದ ಮೇಲೆ ಧರ್ಮದ ಆಧಾರದ ಮೇಲೆ ಕಾರ್ಯನಿರ್ವಹಿಸು ತ್ತಿರುವುದು ಸರಿಯಲ್ಲ ಎಂದರು. ತನಿಖಾ ಪತ್ರಿಕೋದ್ಯಮ ವ್ಯಾಪಕವಾಗಿಲ್ಲ. ನೈಜ ವರದಿಗಳನ್ನು ಬಿತ್ತರಿಸುವಂತಹ ಕೆಲಸ ಪತ್ರಕರ್ತರ ಮಾಡುವುದು ಇದೀಗ ತುಂಬ ಅಗತ್ಯವಿದೆ ಎಂದು ಹೇಳಿದರು.

ಡಿಡಿಯು ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ. ಭೀಮಣ್ಣ ಮೇಟಿ ಮಾತನಾಡಿ, ಪತ್ರಕರ್ತರು ಯಾವಾಗಲೂ ಸತ್ಯದ ಪರವಾಗಿ ಇರಬೇಕಿದೆ. ಇದರಿಂದಾಗಿ ಸಮಾಜ ದಲ್ಲಿ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಖ್ಯಾತ ಹಾಸ್ಯ ಕಲಾವಿದ ಬಸವರಾಜ ಮಾಮನಿ ಮಾತನಾಡಿ, ಪತ್ರಕರ್ತರು ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿವಂತಹ ವರದಿ ಮಾಡಿದಾಗ ನನಗೆ ಆ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.

ಸಂಘದ ಅಧ್ಯಕ್ಷತೆ ವಹಿಸಿದ್ದ ಮಲ್ಲಪ್ಪ ಸಂಕೀನ್ ಮಾತನಾಡಿ, ಶೀಘ್ರದಲ್ಲಿಯೇ ಜಿಲ್ಲಾ ಕೇಂದ್ರದ 36 ಜನ ಪತ್ರಕರ್ತರಿಗೆ ನಗರಸಭೆ ವತಿಯಿಂದ ನಿವೇಶನ ಮಂಜೂರಾಗಿ ಆಗಲಿವೆ. ಬಹುದಿನಗಳ ಬೇಡಿಕೆ ಈಡೇರಲಿದೆ ಎಂದರು.

ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಭವಾನಿಸಿಂಗ್ ಠಾಕೂರು ಮಾತನಾಡಿದರು. ಸಂಘದ ರಾಜ್ಯ ಪರಿಷತ್ತಿನ ಸದಸ್ಯ ರಾಘವೇಂದ್ರ ಕಾಮನಟಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ವಾರ್ತಾ ಇಲಾಖೆಯಲ್ಲಿ ವಾಹನ ಚಾಲಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ ಗುರುನಾಥ ಅವರಿಗೆ ಸಂಘದಿಂದ ಸನ್ಮಾನಿಸಲಾಯಿತು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಅಳ್ಳಳ್ಳಿ, ಜೆಡಿಎಸ್ ಯುವ ಮುಖಂಡ ಬಂದಪ್ಪ ಅರಳಿ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಕಲಾಲ ಇದ್ದರು. ನರಸಪ್ಪ ನಾರಾಯಣನೋರ್ ಸ್ವಾಗತಿಸಿದರು. ವಿಶಾಲ್ ದೋರನಹಳ್ಳಿ ವಂದಿಸಿದರು.

ಪ್ರಶಸ್ತಿ ಜೊತೆಗೆ ನಗದು ಪುರಸ್ಕಾರ : ಪತ್ರಕರ್ತರಾದ ಬಾಲಪ್ಪ ಕುಪ್ಪಿಗೆ ದಿ. ನಿಂಗಯ್ಯ ಕರೇಗಾರ ಸ್ಮರಣಾರ್ಥ, ದಯಾನಂದ ಹಿರೇಮಠ ಅವರಿಗೆ ದಿ. ಗೌತಮ ಚಿಕಣಿ ಸ್ಮರಣಾರ್ಥ, ಮಹೇಶ್ ಗಣೇರ್ ಅವರಿಗೆ ದಿ. ರಾಧಾಬಾಯಿ ಮತ್ತು ಶ್ಯಾಮರಾವ್ ಜಹಗೀರದಾರ, ಮಲ್ಲಿಕಾರ್ಜುನ ಆಶನಾಳ ಅವರಿಗೆ ದಿ. ಚಂದ್ರಭಟ್ಟ ಜೋಶಿ ಯಾಳಗಿ, ಮಲ್ಲಿಕಾರ್ಜುನ ಕಾಡಂನೋರ್ ದಿ. ವಾಮಾನಾಚಾರ್ಯ ಪುರೋಹಿತ ಸ್ಮರಣಾರ್ಥ, ಮಂಜುನಾಥ ಎಸ್ ಬಿರಾದಾರ ಅವರಿಗೆ ದಿ. ಬಸಪ್ಪ ಅಂಗಡಿ ಹಾಗೂ ದಿ. ಕಮಲಮ್ಮ ಅಂಗಡಿ ಸ್ಮರಣಾರ್ಥ, ಆನಂದ ಗೊರ್ಕಲ್ ಅವರಿಗೆ ದಿ. ಪದ್ಮಾವತಿ ಮತ್ತು ದಿ. ಗುರುಸ್ವಾಮಿ ಪೋಲಂಪಲ್ಲಿ ದೋರನಹಳ್ಳಿ ಸ್ಮರಣಾರ್ಥ, ಬಸವರಾಜ ಕರೇಗಾರ ಅವರಿಗೆ ದಿ. ನಾಗಪ್ಪ ಮಾಸ್ಟರ್ ಸೇಡಂ ಸ್ಮರಣಾರ್ಥ ಜಿಲ್ಲಾ ಮಟ್ಟದ ಪ್ರಶಸ್ತಿ ಜೊತೆಗೆ ತಲಾ 2 ಸಾವಿರ ರೂಪಾಯಿ ನಗದು ನೀಡಿ ಸನ್ಮಾನಿಸಲಾಯಿತು.

ಪತ್ರಕರ್ತ ಹನುಮಂತು ಪಿ. ಅವರಿಗೆ ದಿ. ಸಾಹು ಮುರಾರಿರಾವ್ ಭೀ. ಶಿಂಧೆ ಸ್ಮರಣಾರ್ಥ ಮತ್ತು ಪತ್ರಿಕಾ ವಿತರಕ ಸಾಹೇಬಗೌಡ ಕಲಾಲ್ ಅವರಿಗೆ ದಿ. ಭೀಮರಾಯ ಕಲಾಲ್ ಸ್ಮರಣಾರ್ಥ ಪ್ರಶಸ್ತಿ ಜೊತೆಗೆ ಉಭಯರಿಗೆ 5 ಸಾವಿರ ರೂ. ನಗದು ನೀಡಿ ಗೌರವಿಸಲಾಯಿತು.

Spread the love

Leave a Reply

Your email address will not be published. Required fields are marked *

error: Content is protected !!