ಧರಂಪುರ- ಚಿನ್ನಾಕಾರ ಮಧ್ಯೆ ಜಿಪ್ ಪಲ್ಟಿ: ಯುವತಿ ಸಾವು, ಹಲವರಿಗೆ ಗಂಭೀರ ಗಾಯ
ಗುರುಮಠಕಲ್: ಇಲ್ಲಿಗೆ ಸಮೀಪದ ಧರಂಪುರ- ಚಿನ್ನಾಕಾರ ಮಧ್ಯೆ ಹತ್ತಿ ಕೀಳಲು ಕೂಲಿ ಕೆಲಸಕ್ಕೆ ಮಹಿಳೆಯರನ್ನು ಸಾಗಿಸುತ್ತಿದ್ದ ಜೀಪ್ ಸೋಮವಾರ ಬೆಳಗ್ಗೆ 10:15ರ ಸುಮಾರಿಗೆ ಪಲ್ಟಿಯಾಗಿ ಇಟಕಾಲ್ ಗ್ರಾಮದ ಅಂದಾಜು 20 ವರ್ಷ ಯುವತಿ ಬುಜ್ಜಮ್ಮ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಘಟನೆಯಲ್ಲಿ ಚಾಲಕ ಸೇರಿದಂತೆ 5 ಕ್ಕು ಹೆಚ್ಚು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನು ಹಲವರಿಗೆ ಗಾಯಗಳಾಗಿವೆ. ಗುರುಮಠಕಲ್ ಸಮುದಾಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸೇಡಂ ತಾಲೂಕಿನ ಇಟಕಾಲ್ ಗ್ರಾಮದ ಮಹಿಳೆಯರು ಕೂಲಿಗೆ ಎಂದು ನಂದೇಪಲ್ಲಿ ಹತ್ತಿರದ ಹೋಲದಲ್ಲಿ ಹತ್ತಿ ಕೀಳಲು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.
ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರನ ರಕ್ಷಿಸಲು ಹೋಗಿ ಜೀಪ್ 3 ಪಲ್ಟಿ ಹೊಡೆದು ತೆಗ್ಗು ಪ್ರದೇಶಕ್ಕೆ ಇಳಿದಿದೆ ಎಂದು ಜೀಪ್ ನಲ್ಲಿ ಪ್ರಯಾಣಿಸುತ್ತಿದ್ದವರು ತಿಳಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
5 ಜನರಿಗೆ ಹೆಚ್ಚಿನ ಚಿಕಿತ್ಸೆಗೆ ರಾಯಚೂರಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ವೈದ್ಯಾಧಿಕಾರಿ ಡಾ. ಶಿವಪ್ರಸಾದ ಮೈತ್ರಿ ಮಾಹಿತಿ ನೀಡಿದ್ದಾರೆ.
ಕೂಲಿಗೆ ಒಲ್ಲೆ, ಒಲ್ಲೆ ಎಂದಿದ್ದ ಬುಜ್ಜಮ್ಮ: ಕೂಲಿ ಕೆಲಸಕ್ಕೆ ಒಲ್ಲೆ ಎಂದಿದ್ದ ಬುಜ್ಜಮ್ಮ ಒಲ್ಲದ ಮನಸ್ಸಿನಿಂದಲೇ ತೆರಳಿದ್ದಳು ಎಂದು ಮೃತಳ ತಾಯಿ ಮತ್ತು ಕುಟುಂಬಸ್ಥರು ಹೇಳಿ ರೋಧಿಸುತ್ತಿದ್ದು ಮಗಳನ್ನು ಕಳೆದುಕೊಂಡ ಆಕ್ರಂದನ ಮುಗಿಲು ಮುಟ್ಟಿತ್ತು.