ಜಿಲ್ಲಾ ಕರವೇ ಕಾರ್ಯಾಲಯದಲ್ಲಿ ರಾಷ್ಟ್ರ ಕವಿ ಕುವೆಂಪುರವರ 120ನೇ ಜಯಂತೋತ್ಸವ ಆಚರಣೆ | ಕೊಡುಗೆ ಸ್ಮರಣೆ
ಯಾದಗಿರಿ: ವಿಶ್ವ ಮಾನವ ಸಂದೇಶ ಸಾರಿದ ಕನ್ನಡದ ಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಕುವೆಂಪು ಅವರ ಸಾಹಿತ್ಯಕ್ಕೆ ಕೊಡುಗೆ ಅಪಾರ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಟಿ.ಎನ್. ಭೀಮುನಾಯಕ ಅಬಿಪ್ರಾಯಪಟ್ಟರು.
ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ ಕುವೆಂಪು ಅವರ 120 ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ರಾಷ್ಟ್ರ ಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ಅತ್ಯಂತ ಮೌಲಿಕವಾಗಿದೆ ಎಂದು ಹೇಳಿದರು.
ಆದರೆ ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದರು. ನಂತರ ಉಪ ಕುಲಪತಿಗಳಾದರು. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು.
ವಿಶ್ವವಿದ್ಯಾನಿಲಯವನ್ನು ಅಧ್ಯಯನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು. ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು ಎಂದು ನುಡಿದರು.
ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿದ್ದರೂ ಕನ್ನಡದ ಮೇಲೆ ವಿಶೇಷ ಒಲವು ಹೊಂದಿ ಕನ್ನಡದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದವರು ಕುವೆಂಪು ಅವರು ಎಂದು ಅವರು ಸ್ಮರಿಸಿಕೊಂ ಡರು.
ಈ ಸಂದರ್ಭದಲ್ಲಿ ಕರವೇ ವಿಜಯಕುಮಾರ ರಾಠೋಡ, ಸಾಬುನಾಯಕ ನೀಲಹಳ್ಳಿ, ಬಸವರಾಜ ಕಡ್ಡಿ, ಮಹೇಶ ಠಾಣಗುಂದಿ, ಅನೀಲ ದಾಸನಕೇರಿ, ಲಕ್ಕನ್ ರಾಠೋಡ, ಸಂತೋಷ ರಾಠೋಡ, ನಾಗು ಭಂಡಾರಿ, ರಮೇಶ.ಡಿ.ನಾಯಕ, ಇರ್ಫಾನ್ ಪಟೇಲ್, ಸೇರಿದಂತೆ ಅನೇಕರು ಪಾಲ್ಗೊಂಡರು.