ಗಡಿ ಭಾಗದ ಅಭಿವೃದ್ಧಿಗೆ ದೊರೆಯಲಿ ಆದ್ಯತೆ | ಸಮಗ್ರ ಬೆಳವಣಿಗೆಗೆ ಬೇಕು ಕಾರ್ಯ ಯೋಜನೆ
ಯಾದಗಿರಿ: ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡಿರುವುದಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ನರಸಾರೆಡ್ಡಿ ಪೊಲೀಸ ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಕಾಳಜಿ ತೋರಬೇಕು ಎಂದು ಮನವಿ ಮಾಡಿದ್ದಾರೆ.
ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಣ ತಜ್ಞರ ತಂಡ ರಚಿಸಿ, ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವೇನು ಎನ್ನುವುದನ್ನು ಪತ್ತೆ ಹಚ್ಚಿ, ಬೇಕಿರುವ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮನವಿ ಮಾಡಿದ್ದಾರೆ.
ಈಗಾಗಲೇ ಕೆ.ಕೆ.ಆರ್ ಡಿಬಿ ವತಿಯಿಂದ ಅಕ್ಷರ ಆವಿಷ್ಕಾರ ಯೋಜನೆ ರೂಪಿಸಿ ಕೆಲವು ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎನ್ನುವುದು ಕೊಂಚ ಸಮಾಧಾನದ ಸಂಗತಿ.
ಕಲ್ಯಾಣ ಕರ್ನಾಟಕದ ಕೃಷಿ, ಉದ್ಯೋಗ, ಮೂಲಸೌಕರ್ಯ ಸೇರಿದಂತೆ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಹೆಚ್ಚಿನ ಅನುದಾನ ಮೀಸಲಿಡಬೇಕು.
ಗುರುಮಠಕಲ್ ಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪನೆಗೆ ಉತ್ತೇಜನೆ ನೀಡುವ ಮೂಲಕ ಸ್ಥಳೀಯರಿಗೆ ಉದ್ಯೋಗ ದೊರೆಯಲು ಕ್ರಮ ವಹಿಸಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕ್ಷೇತ್ರದಲ್ಲಿ ಅತೀ ಹೆಚ್ಚು ಕೆರೆಗಳಿವೆ, ಆದರೂ ರೈತರು ಮಳೆ ಆಧಾರಿತ ಬೆಳೆಗಳ ಮೇಲೆಯೇ ಅವಲಂಬಿತ ವಾಗಿದ್ದಾರೆ.
ಮಳೆಗಾಲದಲ್ಲಿ ಹಳ್ಳ ಕೊಳ್ಳ ತುಂಬಿ ಲಕ್ಷಾಂತರ ಕ್ಯೂಸೆಕ್ಸ್ ನೀರು ಪೋಲಾಗುತ್ತಿದೆ. ಸಮರ್ಪಕವಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವ ಮೂಲಕ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂರಕ್ಷಿಸಿ ಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.
ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿ ರೈತರು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಅಗತ್ಯ ತರಬೇತಿ ಶಿಬಿರಗಳು ನಡೆಸಿ ನೀರಾವರಿ ಕುರಿತು ಜಾಗೃತಿ ಮೂಡಿಸಬೇಕು ಎಂದಿದ್ದಾರೆ.