ಜಿಲ್ಲಾ ಮಟ್ಟದ ವಾಲಿಬಾಲ್ ನಲ್ಲಿ ಸಾಧನೆ | ಬೀದರ್ ನಲ್ಲಿ ನಡೆಯಲಿರುವ ವಿಭಾಗೀಯ ಮಟ್ಟದಲ್ಲಿ ಪ್ರದರ್ಶನ ತೋರಲಿರುವ ಪಟುಗಳು
ಯಾದಗಿರಿ: ಗುರುಮಠಕಲ್ ತಾಲೂಕಿನ ಕೋಟಗೇರಾ ಸರ್ಕಾರಿ ಮಾದರೀಯ ಪ್ರಾಥಮಿಕ ಶಾಲೆಯ ಮಕ್ಕಳು 14 ವರ್ಷದೊಳಗಿನ ಮಕ್ಕಳ ವಾಲಿಬಾಲ್ ಕ್ರೀಡೆಯಲ್ಲಿ ಭಾಗವಹಿಸಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಬೀದರ್ ನಲ್ಲಿ ನಡೆಯಲಿರುವ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮಕ್ಕಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ ಮುಖ್ಯಗುರು ಹನುಮಾ ನಾಯಕ್ ಅವರು ಮಾತನಾಡಿ, ಮಕ್ಕಳು ದಸರಾ ರಜೆ ಇದ್ದರೂ ಸಹ ನಿರಂತರವಾಗಿ ಶಾಲೆಗೆ ಅಭ್ಯಾಸದಲ್ಲಿ ತೊಡಗಿ ಉತ್ತಮ ಕ್ರೀಡಾಕೌಶಲಗಳನ್ನು ಬೆಳೆಸಿಕೊಂಡು ಜಿಲ್ಲಾಮಟ್ಟದ ಫೈನಲ್ ಪಂದ್ಯದಲ್ಲಿ ಶಹಾಪುರ ತಂಡವನ್ನು ಸುಲಭವಾಗಿ ಸೋಲಿಸಿ ಪ್ರಥಮ ಸ್ಥಾನವನ್ನು ಪಡೆದು ಬಾಲಕಿಯರ ತಂಡವು ಮೊದಲ ಬಾರಿಗೆ ವಿಭಾಗಮಟ್ಟಕ್ಕೆ ಆಯ್ಕೆಯಾಗಿ ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಈ ವಿಜಯಕ್ಕಾಗಿ ನಿರಂತರವಾಗಿ ಶ್ರಮಿಸಿದ ಎಲ್ಲಾ ಸಿಬ್ಬಂದಿ, ತಂಡದ ಗೆಲುವಿಗೆ ಕಾರಣೀಭೂತ ಶೂಟರ್ ಗಳಾದ ವೆನ್ನೆಲಾ ಹಾಗೂ ಭವಾನಿ ಮತ್ತು ಡಿಪೆನ್ಸ್ ನಲ್ಲಿ ಉತ್ತಮ ಆಟವಾಡಿದ ಭಾಗ್ಯಮ್ಮ, ಮಲ್ಲಮ್ಮ, ರೇಖಾ, ರಾಧಿಕಾ, ಭಾಗ್ಯಶ್ರೀ ಹಾಗೂ ಮಮಿತಾ ಈ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬೀದರ್ ನಲ್ಲಿ ನಡೆಯುವ ವಿಭಾಗ ಮಟ್ಟದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಲೆಂದು ಶುಭ ಹಾರೈಸಿದರು. ಈ ಬಾಲಕಿಯರ ಸಾಧನೆಗೆ ಗಣ್ಯರು, ಹಾಗೂ ಶಾಲೆಯ ಎಲ್ಲಾ ಹಳೆಯ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
