ಆರ್ಟಿಓ ಅಧಿಕಾರಿಗಳ ಮಿಂಚಿನ ಕಾರ್ಯಚರಣೆ | ನಾಲ್ಕು ಐಷಾರಾಮಿ ಕಾರುಗಳು ಜಪ್ತಿ | 2.50 ಲಕ್ಷ ರೂ. ತೆರಿಗೆ ವಸೂಲಿ
ಯಾದಗಿರಿ: ಅನ್ಯ ರಾಜ್ಯಗಳಿಂದ ಐಷಾರಾಮಿ ಕಾರು ಖರೀದಿಸಿ ಇಲ್ಲಿ ಆರಾಮವಾಗಿ ಓಡಾಡಿಸಿಕೊಂಡಿದ್ದ ನಾಲ್ಕು ಜನರಿಗೆ ಹಠಾತ್ ಶಾಕ್ ನೀಡಿರುವ ಆರ್ ಟಿಒ ಅಧಿಕಾರಿಗಳು, ನಾಲ್ಕು ವಾಹನಗಳನ್ನು ಶನಿವಾರ ಇಲ್ಲಿ ಜಪ್ತಿ ಮಾಡಿ, 2.50 ಲಕ್ಷ ರೂ.ತೆರಿಗೆ ವಸೂಲಿ ಮಾಡಿದ್ದಾರೆ.
ಪಾಂಡಿಚೇರಿ ರಾಜ್ಯದ ಪಿವೈ ನೊಂದಣಿ ಇರುವ ನಾಲ್ಕು ಅತ್ಯಧಿಕ ಬೆಲೆಯುಳ್ಳ ಐಷಾರಾಮಿ ವಾಹನಗಳನ್ನು ಜಪ್ತಿ ಮಾಡಿದಾಗ ಒಬ್ಬರು ಮಾತ್ರ ಒಂದು ವಾಹನದ ತೆರಿಗೆ 2.50ಲಕ್ಷ ರೂ. ಕಟ್ಟಿ ವಾಹನ ಬಿಡಿಸಿಕೊಂಡು ಹೋಗಿದ್ದರೇ ಇನ್ನೂ ಮೂರು ವಾಹನಗಳ ಜಪ್ತಿ ಆರ್ ಟಿಓ ಕಚೇರಿ ಅಂಗಳ ಸೇರಿವೆ.
ಪ್ರಾದೇಶಿಕ ಸಾರಿಗೆ ಅಧಿಕಾರಿ ಮಿಲಿಂದಕುಮಾರ ನೇತೃತ್ವದಲ್ಲಿ ಅಧಿಕಾರಿಗಳಾದ ಹಯ್ಯಾಳಪ್ಪ, ಚಂದ್ರಕಾಂತ ಮತ್ತು ಪ್ರಭಾಕರ ಅವರು ವಾಹನಗಳ ತಿರುಗಾಟದ ಪತ್ತೆ ಹಚ್ಚಿ ಜಪ್ತಿ ಮಾಡಿದ್ದಾರೆ.
ಕಡಿಮೆ ತೆರಿಗೆ ಇರುವ ಪಾಂಡಿಚೇರಿ ರಾಜ್ಯದಿಂದ ಇನ್ನೂ ಅನೇಕ ವಾಹನಗಳನ್ನು ಖರೀದಿಸಿ ತಂದು ನಗರ ಮತ್ತು ಜಿಲ್ಲೆಯ ವಿವಿಧಡೆ ತಿರುಗಾಡುವವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಅಂತಹವುಗಳನ್ನು ಸಹ ಜಾಲ ಬೀಸಿ ಜಪ್ತಿ ಮಾಡಲಾಗುವುದೆಂದು ಆರ್ ಟಿಒ ಮಿಲಿಂದಕುಮಾರ ತಿಳಿಸಿದ್ದಾರೆ.
