ಮಾರ್ಚ್ 13ರ ಒಳಗೆ ವಿವಾಹ ನೋಂದಣಿ ಮಾಡಿಸಲು ಅವಕಾಶ
ಶಹಾಪೂರ: ಮಾರ್ಚ 23 ರಂದು ಸುಕ್ಷೇತ್ರ ಮಹಲರೋಜಾದ ರಾಜಾಭಾಗ್ ಸವಾರ ಮಠದಲ್ಲಿ ಯಮನೂರಪ್ಪ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಪರಶುರಾಮ ಮುತ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಮಲ್ಲಿಕಾರ್ಜುನ ಮುತ್ಯಾ ಅವರ ನೇತೃತ್ವದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಲಿಂಗೈಕ್ಯ ಶ್ರೀ ಹಣಮಂತರಾಯ ಮುತ್ಯಾ ಅವರ ಆಶಯದಂತೆ ಅನಿಯಮಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ.
ಹಣಮಂತರಾಯ ಮುತ್ಯಾ ಅವರು ಇದ್ದಾಗಲೂ ಸಹ ಬಡ ಮತ್ತು ಮಧ್ಯಮ ವರ್ಗದವರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ಪ್ರತಿವರ್ಷ ಸಾಮೂಹಿಕ ವಿವಾಹ ಜರುಗುತ್ತಿದ್ದವು. ಈಗಲೂ ಸಹ ಪರಶುರಾಮ ಮುತ್ಯಾ, ಮಲ್ಲಿಕಾರ್ಜುನ ಮುತ್ಯಾ, ಬಸವರಾಜ ಮುತ್ಯಾ ಅವರು ಆ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದ್ದು, ಅಂದು ಮಧ್ಯಾಹ್ನ 12.15 ಕ್ಕೆ ಸಾಮೂಹಿಕ ವಿವಾಹ ಜರುಗಲಿದೆ. ಮಧ್ಯಾಹ್ನ 3 ಗಂಟೆಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಹಾಗೂ ಅನ್ನದಾಸೋಹ ನೆರವೇರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ವೇಳೆ ತೆಲಂಗಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದ ನಾನಾ ಭಾಗಗಳಿಂದ ಸಚಿವರು, ಶಾಸಕರು, ಮಠಾಧೀಶರು ಪಾಲ್ಗೊಳ್ಳ ಲಿದ್ದು, ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವವರು ಮಾರ್ಚ 13 ರ ಒಳಗಾಗಿ ನೊಂದಣಿ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
