ಬಳಿಚಕ್ರ ಗ್ರಾಮಕ್ಕೆ ಕೇಂದ್ರ ಸಚಿವರ ಭೇಟಿ, ಮಕ್ಕಳೊಂದಿಗೆ ಸಂವಾದ | ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರಿಂದ ಸನ್ಮಾನ
ಶಾಲೆಗೆ ಆರ್.ಓ ಪ್ಲ್ಯಾಂಟ್, ಸಾಂಸ್ಕೃತಿಕ ವೇದಿಕೆ ವಿಸ್ತರಣೆ, ಶಾಲಾ ಕೊಠಡಿ ದುರಸ್ತಿ ಮತ್ತು ಹೊಸದಾಗಿ ನಿರ್ಮಾಣಕ್ಕೆ ಕೂಡಲೇ ಅಂದಾಜು ಪಟ್ಟಿ ನೀಡಲು ಡಿಡಿಪಿಐ ಗೆ ಶಾಸಕ ಶರಣಗೌಡ ಕಂದಕೂರ ಸೂಚನೆ
ಯಾದಗಿರಿ: ದೇಶದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ ಮತ್ತು ಬ್ಲಾಕ್‌ಗಳಲ್ಲಿ ಸುಸ್ಥಿರ ಅಭಿವೃದ್ದಿಪಡಿಸಿ ಹಿಂದುಳಿವಿಕೆ ಹೋಗಲಾಡಿಸುವುದೇ ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದು ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ ಕುಮಾರ ಹೇಳಿದರು.
ಗುರುವಾರ ಯಾದಗಿರಿ ತಾಲೂಕಿನ ಗುರುಮಠಕಲ್ ಮತಕ್ಷೇತ್ರದ ಬಳಿಚಿಕ್ರ ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿ, ಮೂಲಸೌಕರ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೌಶಲ್ಯ ಕ್ಷೇತ್ರದಲ್ಲಿ ತೀರಾ ಹಿಂದುಳಿದ ದೇಶದ 112 ಜಿಲ್ಲೆ ಮಹತ್ವಾಕಾಂಕ್ಷೆ ಜಿಲ್ಲೆ ಮತ್ತು 500 ತಾಲೂಕುಗಳನ್ನು ಬ್ಲಾಕ್ ಎಂದು ವಿಂಗಡಿಸಿ ಇಲ್ಲಿ ರಾಜ್ಯ-ಕೇಂದ್ರ ಸರ್ಕಾರದ ಯೋಜನೆಗಳು ಪರಿಣಾಮಕಾರಿ ಅನುಷ್ಠಾನ ತರುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.
ಇದಕ್ಕು ಮುನ್ನ ನೆರೆದ ಮಕ್ಕಳನ್ನು ಭವಿಷ್ಯದಲ್ಲಿ ಏನಾಗುತ್ತಿರಿ ಎನ್ನುತ್ತಲೆ, ಸಚಿವ ಬಂಡಿ ಸಂಜಯ ಕುಮಾರ ಸಂವಾದ ಆರಂಭಿಸಿದರು. ಕೆಲವರು ಐ.ಎ.ಎಸ್., ಐ.ಪಿ.ಎಸ್. ಎನ್ನುತ್ತಾ ಕೈ ಎತ್ತಿದರು. 9ನೇ ತರಗತಿಯ ಮಲ್ಲಿಕಾರ್ಜುನ ತಾನು ಮುಂದೆ ಎಂ.ಎಲ್.ಎ. ಆಗಬೇಕೆಂದಾಗ ಪಕ್ಕದಲ್ಲಿ ಕೂತಿದ್ದ ಶಾಸಕ ಶರಣಗೌಡ ಕಂದಕೂರ ಅವರಿಗೆ ಇವರೇ ನಿಮ್ಮ ಮುಂದಿನ ಎದುರಾಳಿ ಎಂದು ಸಚಿವರು ಹಾಸ್ಯ ಚಟಾಕಿ ಹಾರಿಸಿದರು.
ಮಧ್ಯಾಹ್ನ ಬಿಸಿಯೂಟ ಸರಿಯಾಗಿ ನೀಡಲಾಗುತ್ತಿದಿಯೇ? ಎಂದು ಮಕ್ಕಳನ್ನು ಪ್ರಶ್ನಿಸಿದಾಗ ಊಟ ಸರಿಯಾಗಿ ಕೊಡತ್ತಾರೆ, ಮೊಟ್ಟೆ ಸಹ ನೀಡಲಾಗುತ್ತದೆ ಎಂದು ಮಕ್ಕಳು ಉತ್ತರಿಸಿದರು.
ನಂತರ ಶಾಲಾ ಮಕ್ಕಳು ತಮ್ಮ ಶಾಲೆಗೆ ಆರ್.ಓ.ಪ್ಲ್ಯಾಂಟ್ ಬೇಕು, ಖಾಯಂ ಶಿಕ್ಷಕರ ಕೊರತೆ ಇದೆ, ಸಂಸ್ಕೃತಿಕ ವೇದಿಕೆ ದೊಡ್ಡದು ಮಾಡಬೇಕು, ನಾಲ್ಕು ಕೊಠಡಿಗಳು ಮಳೆಗೆ ಸೋರುತ್ತಿ ದ್ದು, ದುರಸ್ತಿ ಮಾಡಬೇಕು, ಕಂಪ್ಯೂಟರ್ ಬೇಕು, ಎಸ್.ಎಸ್. ಎಲ್.ಸಿ. ಸೆಂಟರ್ ಇರುವುದರಿಂದ 2 – 3 ಕೊಠಡಿ ಹೊಸದಾಗಿ ನಿರ್ಮಿಸಬೇಕು ಎಂಬಿತ್ಯಾದಿ ಬೇಡಿಕೆ ಮುಂದಿಟ್ಟರು. ನಂತರ ಸಾರ್ವಜನಿಕರು ಸಹ ಶಾಲೆಗೆ ಕಂಪೌಂಡ್, ಗ್ರಾಮದಲ್ಲಿ ರಸ್ತೆ, ಚರಂಡಿ, ಆಸ್ಪತ್ರೆ ಸಿಬ್ಬಂದಿ ಸಮಸ್ಯೆ ಬಗ್ಗೆ ಸಚಿವರ ಬಳಿ ಹೇಳಿಕೊಂಡರು.
ನಂತರ ಸಚಿವ ಬಂಡಿ ಸಂಜಯ್ ಕುಮಾರ್ ಮಾತನಾಡಿ, ಕೂಡಲೇ ಶಾಲಾ ಕೊಠಡಿ ದುರಸ್ತಿ ಕಾರ್ಯ ಮಾಡಿಸಬೇಕು. ಮುಂದಿನ ಮಾರ್ಚ್ ನಲ್ಲಿ ಮತ್ತೆ ಬರುವೆ ಅಷ್ಟರೊಳಗೆ ಕೆಲಸ ಮುಗಿಸಬೇಕೆಂದ ಅವರು, ಶಾಲೆಯ ಇನ್ನಿತರ ಸಮಸ್ಯೆಗಳನ್ಬು ಬಗೆಹರಿಸಲಾಗುವುದೆಂದು ಭರವಸೆ ನೀಡಿದರು.
ಮಕ್ಕಳು ಹೇಳಿಕೊಂಡ ಸಮಸ್ಯೆಗಳಿಗೆ ಶಾಸಕ ಶರಣಗೌಡ ಕಂದಕೂರ ಅವರು ಉತ್ತರಿಸುತ್ತಾ, ಅಕ್ಷರ ಆವಿಷ್ಕಾರ ಯೋಜನೆಯಡಿ ಪ್ರಸಕ್ತ ವರ್ಷ 50 ಶಾಲೆಗಳಲ್ಲಿ ಮೂಲಸೌಕರ್ಯ ಅವೃದ್ಧಿಪಡಿಸಲಾಗುತ್ತಿದ್ದು, ಅದರಲ್ಲಿ ಬಲಿಚಕ್ರ ಶಾಲೆ ಸಹ ಸೇರಿದೆ. ಮುಂದಿನ ಮಾರ್ಚ್-ಏಪ್ರಿಲ್ ವರೆಗೆ ಖಾಯಂ ಶಿಕ್ಷಕರು ಬರಲಿದ್ದಾರೆ. ಶಾಲೆಗೆ ಆರ್.ಓ ಪ್ಲ್ಯಾಂಟ್, ಸಾಂಸ್ಕೃತಿಕ ವೇದಿಕೆ ವಿಸ್ತರಣೆ, ಶಾಲಾ ಕೊಠಡಿ ದುರಸ್ತಿ ಮತ್ತು ಹೊಸದಾಗಿ ನಿರ್ಮಾಣಕ್ಕೆ ಕೂಡಲೆ ಅಂದಾಜು ಪಟ್ಟಿ ನೀಡುವಂತೆ ಡಿ.ಡಿ.ಪಿ.ಐ ಅವರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಪ್ರಸ್ತಾವಿಕವಾಗಿ ಮಾತನಾಡಿ, ನೀತಿ ಆಯೋಗದ ಮಹತ್ವಾಕಾಂಕ್ಷೆಯ ಯಾದಗಿರಿ ಜಿಲ್ಲೆಯಲ್ಲಿ 5-6 ಅಂಶಗಳಲ್ಲಿ ರಾಜ್ಯ ಕೇಂದ್ರ ಸರ್ಕಾರದ ಯೊಜನೆ ಶೇ.100 ರಷ್ಟು ಅನುಷ್ಟಾನಕ್ಕೆ ತರಲಾಗಿದೆ.
ವಡಗೇರ ಬ್ಲಾಕ್ ನಲ್ಲಿ 6 ರಲ್ಕಿ 5 ಅಂಶಗಳಲ್ಲಿ ಪ್ರಗತಿ ಸಾಧಿಸಿದ ಪರಿಣಾಮ ಕೇಂದ್ರ ಸರ್ಕಾರದಿಂದ 9 ಕೋಟಿ ರೂ. ಅನುದಾನ ಜಿಲ್ಲೆಗೆ ಬಂದಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಜಿಲ್ಲೆಯ 94 ಶಾಲೆಗೆ ವಿಜ್ಞಾನ ಮತ್ತು ಗಣಿತ ಪ್ರಯೋಗ ಶಾಲೆ ಆರಂಭಿಸಿದೆ.
ಜಿಲ್ಲೆಯ ಸಾಕ್ಷರತೆ ಶೇ.52 ಇರುವ ಕಾರಣ ಹೆಚ್ಚು ಮಕ್ಕಳಿರುವ ಪ್ರೌಢ ಶಾಲೆಯಲ್ಲಿ ಗ್ರಂಥಾಲಯ ಸ್ಥಾಪಿಸಿ ಮಕ್ಕಳಿಗೆ ಉಚಿತ ಶೈಕ್ಷಣಿಕ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ಒದಗಿಸುವ ಮೂಲಕ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಗ್ರಂಥಾಲಯ ವೀಕ್ಷಣೆ: ಇದಕ್ಕು ಮುನ್ಮ ಶಾಲೆಯ ಗ್ರಂಥಾಲಯ ವನ್ನು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರೊಂದಿಗೆ ಸಚಿವ ಬಂಡಿ ಸಂಜಯ ಕುಮಾರ ಅವರು ವೀಕ್ಷಿಸಿ ಅಲ್ಲಿ ಲಭ್ಯವಿರುವ ಪುಸ್ತಕಗಳ ಕುರಿತು ಶಾಲಾ ಮಕ್ಕಳಿಂದಲೆ ಮಾಹಿತಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿ ವಂಶಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಲವೀಶ್ ಓರಡಿಯಾ, ಎಸ್.ಪಿ.ಪೃತ್ವಿಕ್ ಶಂಕರ್, ಸಹಾಯಕ ಅಯುಕ್ತ ಹಂಪಣ್ಣ ಸಜ್ಜನ್, ಡಿ.ಎಚ್.ಓ ಡಾ.ಮಹೇಶ ಬಿರಾದಾರ, ಡಿ.ಡಿ.ಪಿ.ಐ ಚನ್ನಬಸಪ್ಪ ಮುಧೋಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ವೀರನಗೌಡ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ರಾಜು ದೇಶಮುಖ, ಯಾದಗಿರಿ ತಹಶೀಲ್ದಾರ ಸುರೇಶ ಅಂಕಲಗಿ, ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ, ತಾಲೂಕಾ ಆರೋಗ್ಯಾಧಿಕಾರಿ ಡಾ.ಹಣಮಂತ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ಪಾಟೀಲ, ಸಿ.ಡಿ.ಪಿ.ಓ ವನಜಾಕ್ಷಿ, ತಾಲೂಕಾ ಪಂಚಾಯತ್ ಮಾಜಿ ಸದಸ್ಯ ಸಣ್ಣ ಹಣಮಂತ ಬೋಯಿನ್, ಎಸ್.ಡಿ.ಎಂ.ಸಿ ಅಧ್ಯಕ್ಷ ಸಿದ್ರಾಮಪ್ಪ ಬೋಯಿನ್, ಪ್ರೌಢ ಶಾಲೆಯ ಮುಖ್ಯಗುರು ಅನ್ನಪೂರ್ಣ ಬಂಡಾರಕರ್, ಸಹ ಶಿಕ್ಷಕರಾದ ಬನ್ನಪ್ಪ ಮೈಲಾಪುರ, ಚಂದ್ರಶೇಖರ, ರಂಗಮ್ಮ, ಅನುಸೂಯಾದೇವಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಕ್ಕಳಿದ್ದರು. ಶಿಕ್ಷಕ ವಿನೋದ ಕುಮಾರ ಸ್ವಾಗತಿಸಿದರು.