ಯಾದಗಿರಿ: ಇದೇ ಜನವರಿ 12 ರಿಂದ 18 ರವರೆಗೆ ಜರಗುವ ಮೈಲಾರಲಿಂಗೇಶ್ವರ ಜಾತ್ರಾ ಉತ್ಸವ ಸಂದರ್ಭದಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಸುರಕ್ಷತಾ ಕ್ರಮಗಳಿಗೆ ವಿಶೇಷ ಆಧ್ಯತೆ ನೀಡುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಮೈಲಾಪುರ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ 2024-25ನೇ ಸಾಲಿನಲ್ಲಿ ಜರುಗುವ ಜಾತ್ರಾ ಉತ್ಸವದ ಮುಂಜಾಗ್ರತಾ ಕ್ರಮಗಳ ಕುರಿತ ಅವಶ್ಯಕ ಸಿದ್ಧತೆ ಕೈಗೊಂಡಿರುವ ಬಗ್ಗೆ ಇಂದು ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಜಾತ್ರಾ ಉತ್ಸವ ಅಂಗವಾಗಿ ಆರೋಗ್ಯ ಹಾಗೂ ಸುರಕ್ಷತಾ ಕ್ರಮಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕು.ವಿಶೇಷವಾಗಿ ದೇವಸ್ಥಾನ ಹಾಗೂ ಮೈಲಾಪುರ ಗ್ರಾಮದಲ್ಲಿ ಸ್ವಚ್ಛತೆ ಜೊತೆಗೆ ಸ್ವಚ್ಛತಾ ಅಭಿಯಾನ ನಿರಂತರವಾಗಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆ ನೀರು ಕುಡಿಯಲು ಹಾಗೂ ಅಡುಗೆಗೆ ಯೋಗ್ಯವಲ್ಲ ಎಂಬುವುದರ ಬಗ್ಗೆ ಜಾಗೃತಿ ಮೂಡಿಸಬೇಕು.ಅಗ್ನಿಶಾಮಕ, ಪೋಲಿಸ್ ಇಲಾಖೆಗಳಿಂದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳ ಬೇಕು. ಚೆಕ್ ಪೋಸ್ಟ್, 26 ಸಿಸಿ ಕ್ಯಾಮೆರಾ ವ್ಯವಸ್ಥಿತವಾಗಿ ನಿರ್ವಹಿಸಬೇಕು.ವಾಹನಗಳ ಪಾರ್ಕಿಂಗ್ , ವಿದ್ಯುತ್ ದೀಪ ಗಳ ವ್ಯವಸ್ಥೆ,ಮೋಬೈಲ್ ಶೌಚಾಲಯಗಳ ವ್ಯವಸ್ಥೆ, ಸೇರಿದಂತೆ ಇನ್ನಿತರ ವ್ಯವಸ್ಥೆ ಗಳನ್ನು ಅಚ್ಚುಕಟ್ಟಾಗಿ ಮಾಡಲು ಅವರು ಸೂಚಿಸಿ ಹರಾಜು ಪ್ರಕ್ರಿಯೆ ಗಳ ಬಗ್ಗೆ ಪರಿಶೀಲಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಧರಣೇಶ್, ಡಿಎಸ್.ಪಿ ಅರುಣಕುಮಾರ್, ಜಿ.ಪಂ.ಉಪ ಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್,ಮುಜರಾಯಿ ತಹಸೀಲದಾರ್ ಬಿ.ಶಾಂತಾ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು ಅವಶ್ಯಕ ಮಾಹಿತಿ ನೀಡಿದರು.