ಮಕ್ಕಳ ಹಕ್ಕುಗಳ ರಕ್ಷಣೆಯ ಕಾನೂನು ಕುರಿತ ತರಬೇತಿ | ಬಾಲ್ಯ ವಿವಾಹದಿಂದಲೇ ಶಿಶು ಮರಣ ಹೆಚ್ಚಳ, ತಡೆಯುವುದೇ ನಮ್ಮ‌ ಮೊದಲ ಆದ್ಯತೆಯಾಗಲಿ ಶಶಿಧರ ಕೋಸಂಬೆ ಹೇಳಿಕೆ

ಯಾದಗಿರಿ:  ಬಾಲ್ಯ ವಿವಾಹದಿಂದಲೇ ಅಪ್ರಾಪ್ತೆ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿ ಶಿಶು ಮರಣ ಪ್ರಮಾಣ ಹೆಚ್ಚುತ್ತಿದ್ದು, ಬಾಲ್ಯ ವಿವಾಹ ತಡೆಯುವುದೇ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.

ಮಂಗಳವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಯಾದಗಿರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕ ಸೇರಿದಂತೆ ಇನ್ನಿತರ ಇಲಾಖೆಗಳ ಸಹಯೋಗದೊಂದಿಗೆ “ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಚನೆಯಾಗಿರುವ ವಿವಿಧ ಕಾನೂನುಗಳ ಕುರಿತು” ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಳೆದ 3-4 ವರ್ಷದಲ್ಲಿ ಬಾಲ್ಯ ವಿವಾಹದಿಂದ 1.60 ಲಕ್ಷ ಬಾಲ ಗರ್ಭಿಣಿಯರಾಗಿದ್ದಾರೆ. ಕಳೆದ 3 ವರ್ಷದಲ್ಲಿ 2,079 ತಾಯಂದಿರು ಮರಣ ಹೊಂದಿದ್ದಾರೆ. ಅಪ್ರಾಪ್ತೆ ಕಾರಣ ದೈಹಿಕವಾಗಿ ಆರೋಗ್ಯ ಸದೃಢವಾಗಿಲ್ಲದಕ್ಕೆ ಮೂರು ವರ್ಷದೊ ಳಗಿನ 21 ಸಾವಿರ ಮಕ್ಕಳ ನಿರ್ಜೀವ ಜನನ ಜೊತೆ ಆರು ತಿಂಗಳೊಳಗಿನ 17 ಸಾವಿರ ಮಕ್ಕಳು ಅಸುನೀಗಿದ್ದಾರೆ.

ಇದಕ್ಕೆಲ್ಲ ಮೂಲ ಕಾರಣ ಬಾಲ್ಯ ವಿವಾಹ. ಇದನ್ನು ಬೇರು ಸಮೇತ ಕಿತ್ತು ಹಾಕಬೇಕು. ಅರಿವು ಮತ್ತು ಜಾಗೃತಿಯಿಂದ ಇದನ್ನು ಹೋಗಲಾಡಿಸಬೇಕೆಂದು ಶಶಿಧರ ಕೋಸುಂಬೆ ಕರೆ ನೀಡಿದರು.

ಮಕ್ಕಳ ರಕ್ಷಣೆಯಲ್ಲಿ ಜಿಲ್ಲೆ ತುಂಬಾ ಹಿಂದುಳಿದಿದೆ. ಸೋಮವಾರ ಶಹಾಪೂರಿನಲ್ಲಿ ಶಾಲಾ ಮಕ್ಕಳೊಂದಿಗೆ ಸಂವಾದ ಮಾಡಿ ಅವರ ಅಹವಾಲು ಆಲಿಸಿದೆ. ಅವರಿಗೆ ಸರಿಯಾಗಿ ಪೌಷ್ಠಿಕ ಊಟ ಸಿಗುತ್ತಿಲ್ಲ, ಸ್ವಚ್ಛ ನೀರು, ಶೌಚಾಲಯ ಮರೀಚಿಕೆಯಾಗಿದೆ ಎಂದು ತಿಳಿಸಿದರು.

ಪೌಷ್ಠಿಕ ಆಹಾರ ಕೊರತೆಯಿಂದ ಮಕ್ಕಳು ವೀಕ್ ಆಗಿರುವುದನ್ನು ಕಂಡಿದ್ದೇನೆ. ಚಂದ್ರಯಾನದಂತಹ ಸಾಧನೆ ಮಾಡಿರುವ ನಾವು ನಮ್ಮ ಮಕ್ಕಳ ರಕ್ಷಣೆಯಲ್ಲಿ ಹಿಂದುಳಿದಿದ್ದೇವೆ.

ಶಿಕ್ಷಕರಿಂದಲೆ ಮಕ್ಕಳ ಮೇಲೆ‌ ದೈಹಿಕ ಹಲ್ಲೆ ನಡೆಯುತ್ತಿರುವುದು ತುಂಬಾ ನೋವಿನ‌ ಸಂಗತಿಯಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣ ಶತಾಯಗತಾಯ ತಡೆಯಲು ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಎಂದರು.

ದೇಶದಲ್ಲಿ ವಾರ್ಷಿಕ ಸರಾಸರಿ 16 ಲಕ್ಷ ಬಾಲ್ಯ ವಿವಾಹ ಪ್ರಕರಣ ವರದಿಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳುತ್ತಿದೆ. ಕಳೆದ ಒಂದು ವರ್ಷದಲ್ಲಿ 2 ಲಕ್ಷ ಬಾಲ್ಯ ವಿವಾಹ ತಡೆದಿದ್ದೇವೆ ಮತ್ತು ಐವರ ಮಕ್ಕಳಲ್ಲಿ ಒಬ್ಬರು ಬಾಲ್ಯ ವಿವಾಹಕ್ಕೆ ಬಲಿಯಾಗು ತ್ತಿದ್ದಾರೆ ಎಂದು ಕೇಂದ್ರ ಸರ್ಕಾರ‌ ಹೇಳುತ್ತಿದೆ.

ಆಸ್ಸಾಂ ರಾಜ್ಯದಲ್ಲಿ ಈ ವರ್ಷದ ಫೆಬ್ರವರಿ ದಿಂದ ಅಕ್ಟೋಬರ್ ವರೆಗೆ 3,843 ಬಾಲ್ಯ ವಿವಾಹ ಪ್ರಕರಣ ದಾಖಲಿಸಿ 3,843 ಜನರನ್ನು ಬಂಧಿಸಲಾಗಿದೆ. ಡಿಸೆಂಬರ್ 21-22ರ ಅವಧಿಯ ಲ್ಲಿಯೇ ಮಿಷನ್ ಮೋಡ್ ನಲ್ಲಿ 385 ಬಾಲ್ಯ ವಿವಾಹ ಪ್ರಕರಣ ದಾಖಲಿಸಿ 416 ಜನರನ್ನು ಬಂಧನ ಮಾಡಿದ್ದಾರೆ. ಇಂತಹ ಕ್ವಿಕ್ ರೆಸ್ಪಾನ್ಸ್ ನಮ್ಮ ರಾಜ್ಯದಲ್ಲಿಯೂ ಆಗಬೇಕಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಕ್ಕಳ‌ ಮೇಲಿನ ದೈಹಿಕ ದೌರ್ಜನ್ಯ,ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಸ್ಕೊ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಾಗಿದ್ದು 10,234, ಆದರೆ ಶಿಕ್ಷೆಯಾದ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ 179ರಲ್ಲಿ ಮಾತ್ರ. ಕೇಸ್ ದಾಖಲೆ ಮಾಡಿದ ನಂತರ ಆರೋಪಿಗೆ ಶಿಕ್ಷೆಯಾಗುವ ತನಕ ಅಧಿಕಾರಿಗಳು ಬಿಡಬಾರದು. ಶಿಕ್ಷೆ‌ ಪ್ರಮಾಣ‌ ಹೆಚ್ಚಾದಲ್ಲಿ ಮಾತ್ರ ಮಕ್ಕಳ ಮೇಲಿನ ಈ ಕ್ರೂರ ಕೃತ್ಯ ತಡೆಯಬಹುದಾಗಿದೆ ಎಂದರು.

ಗ್ರಾಮ ಸಭೆ ಕರೆದು ಮಕ್ಕಳ ಸಮಸ್ಯೆ ಅಲಿಸಿ: ಮಕ್ಕಳ ಹಕ್ಕುಗಳ ರಕ್ಷಣೆ‌ ನಿಟ್ಟಿನಲ್ಲಿ ಆಯೋಗವು ನಿರಂತರವಾಗಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ ಸಭೆ ನಡೆಸಿ ಮಕ್ಕಳ ಸಮಸ್ಯೆ ಆಲಿಸಬೇಕು.

ತಾಲೂಕು-ಜಿಲ್ಲಾ ಹಂತದಲ್ಲಿ ಮಕ್ಕಳ ರಕ್ಷಣಾ‌ ಸಮಿತಿಗಳು ಕಾಲ ಕಾಲಕ್ಕೆ ಸಭೆ ಕರೆದು ಮಕ್ಕಳ ಹಕ್ಕುಗಳ ರಕ್ಷಣೆ ನಿಟ್ಟಿನಲ್ಲಿ ಪರಿಣಾಮಕಾರಿ ಚರ್ಚೆ ನಡೆಸಿ ಅನುಷ್ಠಾನಕ್ಕೆ ತರಬೇಕೆಂದು ಶಶಿಧರ ಕೋಸಂಬೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಕ್ಕಳ‌ ವಿಷಯದಲ್ಲಿ ಉದಾಸೀನತೆ ಬೇಡ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಸಿ.ಇ.ಓ ಲವೀಶ್ ಒರಡಿಯಾ ಮಾತನಾಡಿ, ಮಕ್ಕಳು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಶಕ್ತರಲ್ಲ. ಹೀಗಾಗಿ ಪಾಲಕ- ಪೋಷಕರು, ಶಿಕ್ಷಕರು ಮಕ್ಕಳ ಅವರ ರಕ್ಷಣೆಗೆ ಧಾವಿಸಬೇಕು. ಇದಕ್ಕಾಗಿ ಅನೇಕ ಕಾಯ್ದೆ, ಕಾನೂನು ಇವೆ.

ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಅಪ್ರಾಪ್ತೆಯರ ಮೇಲಿನ ಅತ್ಯಾಚಾರ, ಮಕ್ಕಳ ಸಾಗಣೆದಂತಹ ಅನಿಷ್ಟ ಪದ್ಧತಿ ಹೋಗಲಾ ಡಿಸಲು‌ ಮತ್ತು ತಡೆಗಟ್ಟಲು ಅಧಿಕಾರಿಗಳು ಬದ್ದತೆ ಪ್ರದರ್ಶಿ ಸಬೇಕು. ಮಕ್ಕಳ ವಿಷಯದಲ್ಲಿ ಉದಾಸೀನತೆ ಬೇಡ. ಇಲಾಖೆ ಗಳು ಪರಸ್ಪರ‌ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಎಸ್.ಪಿ. ಪೃತ್ವಿಕ್ ಶಂಕರ ಮಾತನಾಡಿ, ಜಿಲ್ಲೆಯಾದ್ಯಂತ ಮಕ್ಕಳ ಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತರಲಾಗುವುದು. ಮಕ್ಕಳ ಹಕ್ಕುಗಳ ರಕ್ಷಣೆ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಬೇಕು ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರೆಪ್ಪ ಮಾತನಾಡಿದರು.

ಮಕ್ಕಳ ಅಭಿವೃದ್ಧಿಯಾಗದ ಹೊರತು ಮಾನವ ಸೂಚ್ಯಂಕದಲ್ಲಿ ಉನ್ನತ್ತಕ್ಕೇರಲು ಅಸಾಧ್ಯ: ಮಕ್ಕಳ ಅಭಿವೃದ್ದಿಯಾಗದ ಹೊರತು ಜಿಲ್ಲೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಪ್ರಗತಿ ಕಾಣಲು ಅಸಾಧ್ಯ. ಮಕ್ಕಳು ತಮ್ಮ ಹಕ್ಕುಗಳನ್ನು ಮುಕ್ತವಾಗಿ ಆನಂದಿಸುವ ಮಕ್ಕಳ ಸ್ನೇಹಿ ಅಭಿವೃದ್ಧಿ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದು ಕೊಪ್ಪಳ ಡಿ.ಸಿ. ಕಚೇರಿಯ ಯೂನಿಸೆಪ್ ಕಾರ್ಯಕ್ರಮ ದ‌ ಸಂಯೋಜಕ ರಾಘವೇಂದ್ರ ಭಟ್ ತಮ್ಮ ಉಪನ್ಯಾಸದಲ್ಲಿ ಪ್ರತಿಪಾದಿಸಿದರು.

ಯಾದಗಿರಿ ಜಿಲ್ಲೆಯಲ್ಲಿ ಶೇ.23 ರಷ್ಟು ಬಾಲ್ಯ ವಿವಾಹ ನಡೆಯುತ್ತಿದ್ದರು ಅಧಿಕಾರಿಗಳ ಗಮನಕ್ಕೆ ಇಲ್ವಾ ಎಂದು ಪ್ರಶ್ನಿಸಿದ ಅವರು, ಹಿಂಜರಿಕೆ ಇಲ್ಲದೆ ಬಾಲ್ಯ ವಿವಾಹ ಪ್ರಕರಣ ತಡೆಯಲು ಅನುಷ್ಠಾನಾಧಿಕಾರಿಗಳು ಮುಂದಾಗಬೇಕು.

ಅಧಿಕಾರಿಗಳು ಇಚ್ಚಾಶಕ್ತಿ ಪ್ರದರ್ಶಿಸಿದಲ್ಲಿ ನ್ಯಾಯ,‌ ಕಾನೂನು ಪಾಲನೆ ಹಾಗೂ ಅಭಿವೃದ್ದಿ ವಿಚಾರದಲ್ಲಿ ಯಾವುದೇ ಜಿಲ್ಲೆ ಹಿಂದುಳಿಯಲು ಸಾಧ್ಯವಿಲ್ಲ ಎಂದ ಅವರು, ಮಕ್ಕಳಿಗೆ ಜನ್ಮ‌ ಪ್ರಮಾಣ ಪತ್ರ, 6 ವರ್ಷದ ಮಕ್ಕಳಿಗೆ ಚುಚ್ಚುಮದ್ದು ಕಡ್ಡಾಯವಾಗಿ ನೀಡಬೇಕು. ಶಾಲಾ ಡ್ರಾಪ್ ಔಟ್, ದೈಹಿಕ ಹಲ್ಲೆ, ಬಾಲ್ಯ ವಿವಾಹ, ಅಕ್ರಮ ಮಕ್ಕಳ ಸಾಗಣೆ, ಅವಘಡದಿಂದ ಮಕ್ಕಳು ಬಲಿಯಾಗುವುದನ್ನು ತಡೆಯಬೇಕಿದೆ. ಸಂಪೂರ್ಣ ಅಪೌಷ್ಟಿಕತೆ ನಿವಾರಣೆ ಅಧಿಕಾರಿಗಳ ಗುರಿಯಾಗಬೇಕಿದೆ ಎಂದರು.

ತರಬೇತಿ ಕಾರ್ಯಕ್ರಮದಲ್ಲಿ ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವೀರನಗೌಡ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಪ್ರೇಮಮೂರ್ತಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!