ದೇಶದ ಸೈನಿಕರ ಪರವಿದ್ದೇವೆ | ಮೇ.17ಕ್ಕೆ ತಿರಂಗಾ ಯಾತ್ರೆ | ಸರ್ವರೂ ಪಾಲ್ಗೊಳ್ಳಲು ಮುಖಂಡರ ಮನವಿ

ಯಾದಗಿರಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಲ್ಲಿ ಭಾರತದ ಸೇನೆ ವೀರೋದಾತ್ತವಾಗಿ ಸೆಣಸಿ ದೇಶದ ಶಕ್ತಿ ಜಗತ್ತಿಗೆ ತೋರಿಸಿದ ಹಿನ್ನೆಲೆಯಲ್ಲಿ ಸೇನೆಯ ಜೊತೆಗೆ ದೇಶ ಇದೆ ಎಂದು ಸಾರಲು ಜಿಲ್ಲೆಯ ಸರ್ವ ಸಂಘಟನೆಗಳು ಸೇರಿದಂತೆ ಜಿಲ್ಲೆಯ ಎಲ್ಲ ಜನತೆಯ ಜೊತೆಗೂಡಿ ಮೇ. 17 ರಂದು ಸಂಜೆ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಪ್ರಕಟಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5 ಗಂಟೆಗೆ ನಗರದ ಮೈಲಾಪುರ ಬೇಸ್ ನಿಂದ ಚಕ್ರಕಟ್ಟೆ ಮಾರ್ಗವಾಗಿ ಗಾಂದಿ ವೃತ್ತದ ವರೆಗೆ ತಿರಂಗಾ ಯಾತ್ರೆ ಮಾಡಿ ನಮ್ಮ ದೇಶದ ಸೈನಿಕರೊಂದಿಗೆ ದೇಶದ ಜನತೆ ಇದ್ದೇವೆ ಎಂದು ಸಾರುವ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳಲು ನಿರ್ಣಯಿಸಿದ್ದು, ಇದಕ್ಕೆ ವಾಣಿಜ್ಯೋದ್ಯಮಿಗಳ ಸಂಘ, ವರ್ತಕರ ಸಂಘ, ವಿವಿಧ ವ್ಯಾಪಾರಿ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳುತ್ತಿದ್ದಾರೆ.

ನಂತರ ಗಾಂದಿವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಆಪರೇಷನ್ ಸಿಂಧೂರ ವೇಳೆ ದೇಶಕ್ಕಾಗಿ ಪ್ರಾಣತೆತ್ತ ವೀರ ಯೋಧರಿಗೆ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಇದೊಂದು ದೇಶದ ಪರವಾದ ಕಾರ್ಯಕ್ರಮ ಆಗಿರುವುದರಿಂದ ಜಿಲ್ಲೆಯ ಪ್ರತಿಯೊಬ್ಬರು ಜಾತಿ- ಮತ ಪಂಥ, ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳಿಗೆ ಸೇರಿದವರು ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿದರು.

ವಾಣಿಜ್ಯೋದ್ಯಮಿಗಳ ಸಂಘದ ಜಿಲ್ಲಾಧ್ಯಕ್ಷ ದಿನೇಶ ಜೈನ್ ದೊಖಾ ಮಾತನಾಡಿ, ದೇಶಕ್ಕಾಗಿ ದೇಶದ ಪ್ರಜೆಗಳಾದ ನಾವುಗಳು ಎಲ್ಲರೂ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕಾದ ಸನ್ನಿವೇಶ ಇದೆ. ಹೀಗಾಗಿ ನಮ್ಮ ಸಂಘಟನೆ ಸರ್ವರೂ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್. ಮಾಲಿಪಾಟೀಲ್ ಮಾತನಾಡಿ ದೇಶವನ್ನು ಕಾಯುವ ಸೈನಿಕರು ನಾವು ನೆಮ್ಮದಿಯಿಂದ ಇಂದು ಬದುಕಲು ಕಾರಣೀಕರ್ತರಾ ಗಿದ್ದಾರೆ. ಯುದ್ಧದ ಸಂದರ್ಭದಲ್ಲಿ ಶತೃಗಳ ದಾಳಿ ಸಂದರ್ಭದಲ್ಲಿ ದೇಶದ ಪ್ರಜೆಗಳಾದವರು ಬೆಂಬಲಕ್ಕೆ ನಿಲ್ಲುವುದು ನಮ್ಮ ನೈತಿಕ ಜವಬ್ದಾರಿಯಾಗಿದೆ. ಹೀಗಾಗಿ ಈ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವುದಾಗಿ ಪ್ರಕಟಿಸಿದರು.

ಸುದ್ದಿಗೋಷ್ಠಿಯಲ್ಲಿ ವರ್ತಕರಾದ ಹನುಮಾನದಾಸ ಮುಂದಡಾ, ರಾಜೇಶ್ ಜೈನ, ನ್ಯಾಯವಾದಿ ರಾಜಕುಮಾರ ದೊಡಮನಿ, ನ್ಯಾಯವಾದಿ ಶರಣಗೌಡ ಅಲ್ಲಿಪುರ, ಚೆನ್ನಮಲ್ಲಿಕಾರ್ಜುನ ಅಕ್ಕಿ ಸೇರಿದಂತೆ ಇನ್ನಿತರ ವರ್ತಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!