ಪ್ರತಿ ವರ್ಷ ಒಕ್ಕೂಟಗಳಿಗೆ 6 ಲಕ್ಷ ಅನುದಾನ ನೀಡಿ | ಸಖಿಯರಿಗೆ ನೇರ ವೇತನ ಗೌರವ ಧನ ಜಮಾ ಮಾಡಿ | 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿಂದ ಹೋರಾಟ
ಯಾದಗಿರಿ: ಸಂಘಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಗೌರವಧನ ನೀಡುವ ಆದೇಶ ವಾಪಸ್ ಪಡೆದು ಬೈಲಾ ಬದಲಾಯಿಸಿ ಪ್ರತಿ ವರ್ಷ ಒಕ್ಕೂಟಗಳಿಗೆ ಆರು ಲಕ್ಷ ಅನುದಾನ ಬಿಡುಗಡೆಗೂಳಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ, ಗೌರವಧನ, ವೇತನ ಹೆಚ್ಚಿಸಿ ಒಕ್ಕೂಟಗಳಿಗೆ ಆದೇಶ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ಸರಕಾರದ ಗ್ರಾಮ ಪಂಚಾಯಿತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರ (ಎಂಬಿಕೆ) ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ (ಎಲ್‌ಸಿಆರ್‌ಪಿ), ಸಖಿಯರ ಮಹಾ ಒಕ್ಕೂಟ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾ ಒಕ್ಕೂಟದ ರಾಜ್ಯ ಉಪಾಧ್ಯಕ್ಷೆ ಹೇಮಾ.ಬಿ.ದಳವಾಯಿ ವಿಜಯಪುರ, ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದೆ. ಆದರೆ ಗ್ರಾಮೀಣ ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಹಗಲು, ರಾತ್ರಿ ಶ್ರಮಿಸಿ ದುಡಿಯುತ್ತಿರುವ ಮುಖ್ಯ ಪುಸ್ತಕ ಬರಹಗಾರರು, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಸಖಿಯರಿಗೆ ಕಡಿಮೆ ವೇತನ ನೀಡಲಾಗುತ್ತಿದೆ.
ಮೊದಲ ಹಂತದಲ್ಲಿ ಸಮಾನ ವೇತನ ನೀಡಿ ನಂತರ ಮೌಲ್ಯಮಾಪನದ ಮೂಲಕ ಹೆಚ್ಚು ವ್ಯವಹರಿಸುವವರಿಗೆ ಪ್ರೋತ್ಸಾಹ ಧನ ನೀಡಿ ಉತ್ತೇಜಿಸಬೇಕು ಎಂದರು.
ಸರ್ಕಾರದಿಂದ ನಮ್ಮ ಸಖಿಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವೇತನ ಹಾಗೂ ಗೌರವಧನವನ್ನು ಜಮಾ ಮಾಡಬೇಕು ಮತ್ತು ಸೇವಾ ಭದ್ರತೆ ಕಾರ್ಮಿಕ ಇಲಾಖೆಯ ಆದೇಶದಂತೆ ಹದಿನೈದು ಜನಕ್ಕಿಂತ ಹೆಚ್ಚು ದುಡಿಯುವ ವರ್ಗವಕ್ಕೆ ಇಎಸ್ಐ ಸವಲತ್ತುಗಳನ್ನು ಪೂರೈಸಬೇಕು ಎಂದು ಹೇಳಿದರು.
ಮಹಾ ಒಕ್ಕೂಟದ ಯಾದಗಿರಿ ಜಿಲ್ಲಾಧ್ಯಕ್ಷೆ ಸಂಗೀತಾ ರೆಡ್ಡಿ ಮಾತನಾಡಿ, ಮುಖ್ಯ ಪುಸ್ತಕ ಬರಹಗಾರರಿಗೆ ತಿಂಗಳಿಗೆ ಗೌರವಧನ 20 ಸಾವಿರ ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ 15 ಸಾವಿರ ನಿಗದಿಪಡಿಸಬೇಕು, ವಾರ್ಷಿಕವಾಗಿ ಸೇವಾ ಹಿರಿತನದ ಆಧಾರದಲ್ಲಿ ಶೇಕಡ 10ರಷ್ಟು ವೇತನ ಹೆಚ್ಚಳ ಮಾಡಬೇಕು ಹಾಗೂ ಗ್ರಾಮ ಪಂಚಾಯತಯ 80% ಕಾರ್ಯನಿರ್ವಹಿಸುವುದರಿಂದ ನಮ್ಮ ಇಲಾಖೆಯನ್ನು ಗ್ರಾಮ ಪಂಚಾಯತಿ ಇಲಾಖೆಗೆ ಸೇರ್ಪಡಿಸಬೇಕು ಎಂದರು.
ಸರ್ಕಾರ ನೀಡುತ್ತಿರುವ ಗೌರವಧನದಿಂದ ಜೀವನ ನಡೆಸುವುದು ಕಷ್ಟವಾಗಿದೆ. ಕೂಡಲೇ ವೇತನ ಹೆಚ್ಚಳ ಮಾಡಬೇಕು. ಇಲ್ಲವಾದರೆ ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಎಮ್.ಬಿ.ಕೆ ಮತ್ತು ಎಲ್.ಸಿ.ಆರ್.ಪಿ ಮಹಾ ಒಕ್ಕೂಟದ ರಾಜ್ಯ ಅಧ್ಯಕ್ಷೆ ರುದ್ರಮ್ಮ ಎಸ್. ಮಂಕಣಿ, ಭಾಗ್ಯಲಕ್ಷೀ ಗುಂಡಗುರ್ತಿ, ಲಲಿತಾ ದೇವತ್ಕಲ್, ಸುಮಂಗಲಾ ಗೋಗಿ, ಚಂದ್ರಕಲಾ ವನದುರ್ಗಾ, ಭಾರತಿ ಮದ್ದರಕಿ, ಶಿಲ್ಪಾ ಕುರಕುಂದಾ, ವಿಜಯ ಲಕ್ಷ್ಮಿ ಮೂಡಬೂಳ, ಉಮಾದೇವಿ ಯಲ್ಹೇರಿ, ಕವಿತಾ ಕೊಂಕಲ್, ಲಕ್ಷೀದೇವಿ ಸೂಗೂರ, ಸುನಂದಾ ಮದ್ರಿಕಿ, ಸುನೀತಾ, ಗೀತಾ, ವಿಜಯಲಕ್ಷ್ಮಿ ಗೋಗಿ ಹಾಗೂ ಇತರರು ಉಪಸ್ಥಿತರಿದ್ದರು.