ಗುರುಮಠಕಲ್ ಅಲೆಮಾರಿ ಬಾಲಕಿ, ಯುವತಿ ಅನುಮಾನಾಸ್ಪದ ಶವ ಪತ್ತೆ ಪ್ರಕರಣ | ದುಷ್ಟರಿಗೆ ತಕ್ಕ ಶಿಕ್ಷೆಯಾಗಲು ಕುಟುಂಬ ಆಗ್ರಹ
ಚಿಂದಿ ಆಯಲು ಹೋಗಿ ಹೆಣವಾದ ಯುವತಿಯರ ಕುಟುಂಬ ರೋಧನ ಕೇಳುವವರ್ಯಾರು….?
ಯಾದಗಿರಿ: ಜಿಲ್ಲೆಯ ಗಡಿ ತಾಲೂಕು ಗುರುಮಠಕಲ್ ವ್ಯಾಪ್ತಿಯ ನೀಲಹಳ್ಳಿ ಕೆರೆಯಲ್ಲಿ ಇದೇ ಫೆ.12 ರಂದು ಅನುಮಾನಾಸ್ಪದ ರೀತಿಯಲ್ಲಿ ಒಬ್ಬ ಬಾಲಕಿ ಮತ್ತು ಒಬ್ಬ ಯುವತಿಯ ಶವ ಪತ್ತೆಯಾಗಿದ್ದು, ಗಡಿ ಭಾಗದ ಜನರು ದಿಗ್ಭ್ರಮೆಗೊಳ್ಳುವಂತೆ ಮಾಡಿದೆ. ಈ ಬಗ್ಗೆ ಯಾದಗಿರಿ ತಾಲೂಕಿನ ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರ ಗಮನಕ್ಕೂ ಇದೆ. ಅಲೆಮಾರಿ ನಿರ್ಗತಿಕ ಸಮುದಾಯ ಯುವತಿಯರ ಸಾವಿನ ಕುರಿತು ಗಂಭೀರವಾಗಿ ಪರಿಗಣಿಸಿದ್ದು, ಗುರುಮಠಕಲ್ ಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳುವ ಸಾಧ್ಯತೆಗಳಿವೆ ಎನ್ನುವ ಮಾಹಿತಿ ವಿಶ್ವಾಸನೀಯ ಮೂಲಗಳಿಂದ ಲಭ್ಯವಾಗಿದೆ.
ಮಾರ್ಚ್ ಮೊದಲ ವಾರದಲ್ಲೇ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಕಲ್ಯಾಣ ಕರ್ನಾಟಕದ ಅದರಲ್ಲಿ ಮಾ.4 ರಂದು ಶಹಾಪುರ ತಾಲೂಕಿನ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದು, ಗಡಿ ಭಾಗದ ಅಲೆಮಾರಿ ಬುಡ್ಗಜಂಗಮ ಬಾಲಕಿ, ಯುವತಿ ಕುಟುಂಬಗಳಿಗೆ ನ್ಯಾಯ ದೊರಕಿಸುವಲ್ಲಿ ಕಾಳಜಿ ವಹಿಸುವರು ಎನ್ನುವ ವಿಶ್ವಾಸದ ಮಾತುಗಳು ಕೇಳಿ ಬರುತ್ತಿವೆ.
ಇಬ್ಬರ ಸಾವು ಪ್ರಕರಣದ ಬಗ್ಗೆ ದಲಿತ ಪರ ಸಂಘಟನೆಗಳು ಹಲವು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೋರಾಟ ತೀವ್ರಗೊಳ್ಳುತ್ತಿದೆ.
ಸ್ಥಳೀಯ ಶಾಸಕ ಶರಣಗೌಡ ಕಂದಕೂರ ಅವರು ಮೃತರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಪ್ರಗತಿಪರ ಹೋರಾಟಗಾರ್ತಿ ಕೆ. ನೀಲಾ ಅವರು ಇತ್ತೀಚೆಗೆ ಕುಟುಂಬಸ್ಥ ರನ್ನು ಭೇಟಿಯಾಗಿ ಮಾಹಿತಿ ಪಡೆದು, ಸಾಂತ್ವನ ಹೇಳಿದ್ದಾರೆ.
ಅಲ್ಲದೇ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ವಹಿಸಲು ಒತ್ತಾಯಿಸಿ ಸಂಘಟನೆಗಳ ಮನವಿ ಸಲ್ಲಿಕೆ, ಪ್ರತಿಭಟನೆಗಳೂ ಆಗಿದೆ.
ಫೆ.25 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿಯೂ ಅಮಾಯಕ ಬಾಲಕಿ, ಯುವತಿಯ ಸಾವಿಗೆ ನ್ಯಾಯ ಒದಗಿಸಲು ಸರ್ಕಾರದ ಗಮನ ಸೆಳೆಯುವ ಕಾರ್ಯವಾಗಿದೆ.
ಸದಾ ನಿರ್ಗತಿಕರು, ಅನ್ಯಾಯಕ್ಕೊಳಗಾದವರ ಪರ ಕಾಳಜಿ ತೋರುವ ಅಧ್ಯಕ್ಷರು, ಅಮಾಯಕ ಎರಡು ಜೀವಗಳಿಗೆ ನ್ಯಾಯ ದೊರಕಿಸಲು ಕಾಳಜಿವಹಿಸಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ.
