ಪೊಲೀಸ ಧ್ವಜ ದಿನ ಕಾರ್ಯಕ್ರಮ | ನಿವೃತ್ತ ಪಿಎಸ್ಐ ವೆಂಕಣ್ಣ ಶಹಾಪುರಕರ್ ಅಭಿಮತ
ಯಾದಗಿರಿ : ಸಮಾಜದ ನೆಮ್ಮದಿ ಕಾಪಾಡಿ,ಅಪರಾಧ ಮುಕ್ತ ಸಮಾಜ ನಿರ್ಮಿಸುವಲ್ಲಿ ಪೊಲೀಸರ ಪಾತ್ರ ಮುಖ್ಯವಾಗಿದೆ ಎಂದು ನಿವೃತ್ತ ಪಿಎಸ್ ಐ ವೆಂಕಣ್ಣ ಶಹಾಪುರಕರ್ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆ ಬುಧವಾರ ಪೊಲೀಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕವಾಯತು ಪರಿವೀಕ್ಷಣೆ, ಪಥ ಸಂಚಲನ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಇಲಾಖೆಯಲ್ಲಿ ಪ್ರತಿದಿನ ಕರ್ತವ್ಯಗಳಲ್ಲಿ ಸವಾಲುಗಳಿರುತ್ತವೆ. ಇಂದಿನ ದಿನಗಳಲ್ಲಿ ಪ್ರಾಮಾಣಿಕತೆ ಕಾಪಾಡಿಕೊಂಡು ಇಲಾಖೆಯ ಗೌರವವನ್ನು ಕಾಪಾಡಿಕೊಂಡು ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಪ್ರತಿಯೊಂದು ಹಂತದಲ್ಲೂ ಪೊಲೀಸ್ ವ್ಯವಸ್ಥೆ ಅವಶ್ಯಕವಾಗಿದೆ. ಸಮಾಜದ ಅವಿಭಾಜ್ಯ ಅಂಗವಾಗಿದೆ ಎಂದರು. ತಾವು ಸೇವೆಗೆ ಸೇರಿದ ಆ ದಿನಗಳಿಗೆ ಹೊಲಿಸಿದರೆ ಇಲಾಖೆ ಎಲ್ಲ ರೀತಿಯಿಂದ ಲೂ ಸಾಕಷ್ಟು ಸುಧಾರಣೆಯಾಗಿದೆ.
ಸರ್ಕಾರ ಮತ್ತು ಇಲಾಖೆ ಹಾಕಿಕೊಟ್ಟ ನಿಯಮಗಳ ಪ್ರಕಾರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲರೂ ಕೆಲಸ ಮಾಡುವ ಮೂಲಕ ವೃತ್ತಿ ಗೌರವ ಹೆಚ್ಚಿಸಬೇಕೆಂದು ವೆಂಕಣ್ಣ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಥ್ವಿಕ್ ಶಂಕರ್, ರಾಜ್ಯ ಪೊಲೀಸ್ ಕಾಯ್ದೆಯು 1965 ಏ.2 ರಂದು ಜಾರಿಗೆ ಬಂದಿದ್ದು, ಅಲ್ಲಿಂದ ಪ್ರತಿವರ್ಷವೂ ಈ ದಿನ ರಾಜ್ಯದ ಎಲ್ಲಡೆ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾ ಗುತ್ತಿದೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವೆ ಸಂಬಂಧವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ದಿನಾಚರಣೆ ಹಮ್ಮಿಕೊಳ್ಳಲಾಗುತ್ತಿದೆ.
ಇದರಂಗವಾಗಿ ಕ್ಷೇಮ ನಿಧಿ ಸ್ಥಾಪಿಸಲಾಗಿದ್ದು, ಇದಕ್ಕೆ ಸಂಪನ್ಮೂಲ ಸಂಗ್ರಹಿಸಲು ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ, ಬಂದ ಹಣ ಸಂಗ್ರಹಿಸಿ, ನಿವೃತ್ತ ಪೊಲೀಸ ಅಧಿಕಾರಿಗಳ ಕಲ್ಯಾಣ ನಿಧಿಗೆ ಶೇ.50ರಷ್ಟು ಜಮಾ ಮಾಡಿ, ಅವರ ಕಲ್ಯಾಣ ಕಾರ್ಯಕ್ರಮಗಳಿಗೆ ಉಪಯೋಗಿಸಲಾಗುವುದು ಮತ್ತು ಕೇಂದ್ರ ಕಲ್ಯಾಣ ನಿಧಿಗೂ ಸಹ ಶೇ.50ರಷ್ಟು ಜಮಾ ಮಾಡಲಾಗುವು ದೆಂದು ಎಸ್ ಪಿ ಹೇಳಿದರು. ಜಿಲ್ಲೆಯಲ್ಲಿ ಈ ನಿಧಿಯಿಂದ ಕೈಗೊಂಡ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪೊಲೀಸ್ ಅಧಿಕಾರಿಗಳಾದ ಚಂದ್ರಶೇಖರ, ಹಸನ್ ಪಟೇಲ್, ತಿಪ್ಪಣ್ಣ, ಕಲ್ಯಾಣಿ, ನಿಂಗಣ್ಣ ಮತ್ತು ಬಸವರಾಜ ಅವರುಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಅರುಣಕುಮಾರ, ಮಹಿಳಾ ಅಧಿಕಾರಿ ಶ್ರೀದೇವಿ ಬಿರಾದಾರ, ಜಾವೇದ್ ಇನಾಂದಾರ, ಪಿಎಸ್ಐ ಮಂಜೇಗೌಡ, ಭಾವಕ್ಯತೆ ಸಮಿತಿ ಪ್ರಮುಖರಾದ ವಿಶ್ವನಾಥ ಶಿರವಾಳ್, ಮರೆಪ್ಪ ಚಟ್ಟರಕಿ, ಬಸವರಾಜ, ನಿವೃತ್ತ ಪೊಲೀಸ್ ಅಧಿಕಾರಿ ಸಿಬ್ಬಂದಿ ಇದ್ದರು.
ಡಿವೈಎಸ್ಪಿ ಭರತ್ ಕುಮಾರ ಸ್ವಾಗತಿಸಿದರು, ಡಿವೈಎಸ್ ಪಿ ನಾಗರಾಜ ವಂದಿಸಿದರು, ಮುಖ್ಯಪೇದೆ ಸಂತೋಷ ನಿರೂಪಿಸಿದರು. ವಿವಿಧ ಐದು ತಂಡಗಳಿಂದ ಪಥ ಸಂಚಲನ ನಡೆಯಿತು.
