ತ್ರೈಮಾಸಿಕ ಕೆಡಿಪಿ ಸಭೆ | ವಿವಿಧ ವಸತಿ ನಿಲಯ ಗಳಿಗೆ ಮೂಲ ಸೌಕರ್ಯ ಕ್ಕೆ ಸೂಚನೆ

ಯಾದಗಿರಿ: ಜಿಲ್ಲೆಯಲ್ಲಿನ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಸೌಕರ್ಯದ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶ್ರೀ ಶರಣಬಸಪ್ಪ ದರ್ಶನಾಪುರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಶುಕ್ರವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ವಿವಿಧ ವಸತಿನಿಲಯಗಳಲ್ಲಿರುವ ವಿದ್ಯಾರ್ಥಿಗಳು ಬಡ ಕುಟುಂಬಗಳಿಂದ ಬಂದಿರುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ನೀರು,ಊಟೋಪಹಾರದ ಕೊರತೆಯಾಗಬಾರದು.ಅದರಂತೆ ಎಲ್ಲ ವಸತಿ ನಿಲಯಗಳಲ್ಲಿ ಮೂಲಸೌಕರ್ಯ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಲು ಸೂಚಿಸಿದರು.

ಜಿಲ್ಲೆಯಲ್ಲಿ ಜಲಧಾರೆ,ಜಲಜೀವನ ಮಿಷನ್ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು.ಈವರೆಗೆ ಜೆಜೆಎಮ್ ದಲ್ಲಿ ಪೂರ್ಣಗೊಂಡ ಕಾಮಗಾರಿ, ಟ್ರಯಲ್ ರನ್ ಆಗಿರುವ ಕಾಮಗಾರಿ, ಖರ್ಚು ವೆಚ್ಚಗಳವರದಿ ಸಲ್ಲಿಸಬೇಕು.ಜಲಧಾರೆ ಯೋಜನೆಯಡಿ ಅಳವಡಿಸಿದ ಪೈಪ್ಲೈನ್ ಆಧಾರದಲ್ಲಿ ಬಿಲ್ ಪಾವತಿಸಬೇಕು. ಓವರ್ ಹೆಡ್ ಟ್ಯಾಂಕಗಳಿಗೆ ಹೆಚ್ಚುವರಿ ಅನುದಾನ ಬಳಕೆ , ನುರಿತ ಅಭಿಯಂತರರಿಂದ ಕೆಲಸ ಪಡೆಯಬೇಕು. ಈಯೋಜನೆಗಳ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ನೂತನವಾಗಿ ನೇಮಕಗೊಳ್ಳುವ ವೈದ್ಯಾಧಿಕಾರಿಗಳಿಗೆ ಸಕಾಲಕ್ಕೆ ವೇತನ ಪಾವತಿಸಬೇಕು.ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು ಪ್ರಾಥಮಿಕ,ಆರೋಗ್ಯ ಕೇಂದ್ರ ಗಳಿಗೆ ಡಯಾಲಿಸಿಸ್ ಯಂತ್ರಗಳ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣ ಪತ್ತೆ ಹಚ್ಚಬೇಕು.ಅನ್ನಭಾಗ್ಯ ಯೋಜನೆ ಲಾಭ ಅರ್ಹರಿಗೆ ದೊರೆಯಬೇಕು.ಅರ್ಹರು ಈ ಯೋಜನೆಯಿಂದ ವಂಚಿತರಾಗದಂತೆ ನಿಗಾವಹಿಸಲು ಅವರು ಸೂಚನೆ ನೀಡಿದರು.

ಯಾದಗಿರಿ ವೈದ್ಯಕೀಯ ಕಾಲೇಜ್ ಗೆ ಅಮೃತ್-2 ಯೋಜನೆಯಡಿ ನೀರು ಪೂರೈಕೆ ಗೆ ಸಂಬಂಧಿಸಿದಂತೆ ಖರ್ಚು ವೆಚ್ಚದ ವರದಿಯನ್ನು ಸಂಬಂಧಿಸಿದ ಅಧಿಕಾರಿಗಳು ಸಲ್ಲಿಸಬೇಕು . ಕಂಪೌಂಡ್ ಗೋಡೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಜಿಲ್ಲೆಯಲ್ಲಿ ಶಾಲಾ ಕೊಠಡಿಗಳ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಅಕ್ಷರ ಅವಿಷ್ಕಾರ ಯೋಜನೆಯಡಿ ಅನುದಾನ ಬಳಸಬೇಕು. ಅಲ್ಪಾವಧಿ ಟೆಂಡರ್ ಕರೆದು ಕಾಮಗಾರಿ ಶೀಘ್ರ ಆರಂಭಿಸಬೇಕು ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಅಕ್ರಮ ಗಣಿಗಾರಿಕೆ, ಮರಳು ಸಾಗಾಣಿಕೆ ಬಗ್ಗೆ ನಿಗಾವಹಿಸಬೇಕು.ಗ್ರಾಮ ಗಳಲ್ಲಿ ವಿದ್ಯುತ್ ಸೌಲಭ್ಯ ಸಮರ್ಪಕವಾಗಿ ದೊರೆಯುವಂತೆ ನೋಡಿಕೊಳ್ಳಬೇಕು.

ಸಣ್ಣ ನೀರಾವರಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಪಿಎಮ್ ಜಿಎಸ್ ವಾಯ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚೆಲುವಾದಿ ನಾರಾಯಣಸ್ವಾಮಿ, ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ, ರಾಜಾ ವೇಣುಗೋಪಾಲ್ ನಾಯಕ್,ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಡಿ.ಸಿ ಡಾ.ಸುಶೀಲಾ.ಬಿ,ಜಿ.ಪಂ ಸಿಇಓ ಲವೀಶ ಒರಡಿಯಾ,ಎಸ್.ಪಿ ಪೃಥ್ವಿಕ್ ಶಂಕರ್,ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್ ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!