ಈ ಭಾಗದ ಬಡರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಹಲವು ರೀತಿಯಲ್ಲಿ ಅನುಕೂಲ – ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ
ಯಾದಗಿರಿ: ನಗರದ ನೂತನ ಜಿಲ್ಲಾ ಆಸ್ಪತ್ರೆಯಲ್ಲಿ ಹೊಸದಾದ ರಕ್ತ ನಿಧಿ ಕೇಂದ್ರ ಸ್ಥಾಪನೆಯಾಗಿರುವದರಿಂದ, ಈ ಭಾಗದ ಬಡ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಹಲವು ರೀತಿಯಲ್ಲಿ ನೆರವಾಗಲಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.
ನಗರದ ಯಿಮ್ಸ ದಲ್ಲಿಂದು 2024-25ನೇ ಸಾಲಿನ ಶುಶ್ರೂಷಾ ಮಹಾವಿದ್ಯಾಲಯದ ದೀಪಧಾರೆ, ಪ್ರತಿಜ್ಞಾ ವಿಧಿ, ನೂತನ ರಕ್ತ ನಿಧಿ ಕೇಂದ್ರ , ಲಾಂಡ್ರಿ ಬ್ಲಾಕ್ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತ ನಿಧಿ ಕೇಂದ್ರ ಸ್ಥಾಪಿಸ ಬೇಕೆಂಬುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ನಿರಂತರ ಈ ಭಾಗದ ಜನಪ್ರತಿನಿಧಿಗಳು, ಮತ್ತು ಆರೋಗ್ಯ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಪ್ರಯತ್ನದ ಫಲವಾಗಿ ನೂತನ ರಕ್ತ ನಿಧಿ ಕೇಂದ್ರ ಸ್ಥಾಪನೆ ಯಾಗಿದ್ದು ,ಇದರಿಂದ ಈ ಭಾಗದ ಬಡಜನರ ಬಹು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಹೇಳಿದರು.
ಅದರಂತೆ ಈ ಭಾಗದಲ್ಲಿ ಅತ್ಯಂತ ಕಡುಬಡ ಜನರು ಇರುವುದರಿಂದ, ಅನೇಕ ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಾಣಿಸಿ ನೂತನ ರಕ್ತ ನಿಧಿ ಕೇಂದ್ರವನ್ನು ಇಲ್ಲಿ ಸ್ಥಾಪಿಸಲಾಗಿದ್ದು, ಹೆಚ್ಚುವರಿ ಯಂತ್ರಗಳಿಗೆ ಬೇಕಾಗುವ ಹೆಚ್ಚುವರಿ ಅನುದಾನವನ್ನು ಸಹ ಒದಗಿಸಲು ಪ್ರಯತ್ನಿಸಲಾಗುವುದೆಂದು ಸಚಿವರು ಹೇಳಿದರು.
ರಕ್ತ ನಿಧಿ ಕೇಂದ್ರ ಸ್ಥಾಪನೆಗಾಗಿ ನೆರವಾದ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಹಾಗೂ ಸರ್ಕಾರವನ್ನು ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಸಚಿವರು, ಇಲ್ಲಿ ಬರುವಂತಹ ಬಡ ರೋಗಿಗಳಿಗೆ ಇನ್ನು ಮುಂದೆ ಪರಿಣಾಮ ಕಾರಿಯಾದ ಚಿಕಿತ್ಸೆ ದೊರಕಿಸಲು ಪ್ರಯತ್ನಿಸಬೇಕು. ಬಡಜನರ ಸಮಸ್ಯೆಯನ್ನು ಅರಿತು ಅವರಿಗೆ ಸಕಾಲಕ್ಕೆ ಸ್ಪಂದಿಸುವಂತೆ ಅವರು ಸಲಹೆ ನೀಡಿದರು.
ನೂತನ ಪ್ರಥಮ ವರ್ಷದ ಬಿಎಸ್ ಸಿ ನರ್ಸಿಂಗ್ ವಿದ್ಯಾರ್ಥಿಗಳ ಪ್ರಾರಂಭೋತ್ಸವಕ್ಕೂ ಕೂಡ ಇಂದು ಚಾಲನೆ ದೊರೆತಿದೆ. ಹೊಸ ಜಿಲ್ಲೆಯಾಗಿ ಹಲವು ವರ್ಷಗಳ ನಂತರ ವೈದ್ಯಕೀಯ ಕಾಲೇಜ್ ಜೊತೆಗೆ ನರ್ಸಿಂಗ್ ಬಿಎಸ್ಸಿ ಕಾಲೇಜ್ ಕೂಡ ಆರಂಭವಾಗಿದ್ದು, ಎಲ್ಲರೂ ಕೈ ಜೋಡಿಸಿದ ಹಿನ್ನೆಲೆಯಲ್ಲಿ ಉತ್ತಮ ಫಲಿತಾಂಶ ದೊರೆತಿದೆ. ಇಲ್ಲಿಯ ವಿದ್ಯಾರ್ಥಿಗಳು ಬಹುತೇಕ ಗ್ರಾಮೀಣ ಪ್ರದೇಶದಿಂದ ಬಂದಿರುವುದರಿಂದ ಪಾಲಕರು ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು, ನಿರೀಕ್ಷೆಗೆ ಮೀರಿ ಅಧ್ಯಯನ ನಡೆಸಿ ಫಲಿತಾಂಶ ತರುವಂತೆ ಅವರು ಸಲಹೆ ನೀಡಿದರು.
ವೈದ್ಯಕೀಯ ಕಾಲೇಜ್ ಹಾಗೂ ಜಿಲ್ಲಾ ಆಸ್ಪತ್ರೆಯ ಅನುಕೂಲ ಕ್ಕಾಗಿ 10 ಕೋ.ರೂ ವೆಚ್ಚ ದ ಎಂ.ಆರ್.ಐ ಒದಗಿಸಲಾಗುವು ದು, ರಕ್ತ ನಿಧಿ ಕೇಂದ್ರಕ್ಕೆ ಹೆಚ್ಚುವರಿ ಯಂತ್ರಗಳಿಗಾಗಿ ಹೆಚ್ಚುವರಿ ಅನುದಾನ, ಆಸ್ಪತ್ರೆ ಕಂಪೌಂಡ್ ಗೆ 25 ಲ.ರೂ ಒದಗಿಸಲಾ ಗುವುದು. ಅದರಂತೆ ಹಂತ ಹಂತವಾಗಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಗೆ ಅನುದಾನ ಒದಗಿಸಲಾಗುವುದು ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಸರ್ಕಾರ ಹಾಗೂ ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಸುಸಜ್ಜಿತ ಆಸ್ಪತ್ರೆ ಹಾಗೂ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡ ನಿರ್ಮಾಣ ವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಜಿಲ್ಲೆಗೆ ಗೌರವ ತರುವಂತೆ ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಡೀನ್ ಸಂದೀಪ್ ಅವರು ಇಲ್ಲಿ ಸ್ಥಾಪಿಸಲಾದ ರಕ್ತ ನಿಧಿ ಕೇಂದ್ರ 300ಪಾಕೇಟ್ ರಕ್ತ ಸಂಗ್ರಹ ಸಾಮರ್ಥ್ಯ ಹೊಂದಿದೆ.ರೋಗಿಗಳಿಗೆ ತಂದೆ ತಾಯಿ ಯಂತೆ ಚಿಕಿತ್ಸೆ ಒದಗಿಸಲು ನಾವೆಲ್ಲರೂ ಬದ್ದರಾಗೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಡಾ ಡಿ.ಸಿ.ಸುಶೀಲಾ. ಬಿ, ಜಿ.ಪಂ ಸಿಇಓ ಲವೀಶ ಒರಡಿಯಾ, ಎಸ್.ಪಿ ಪೃಥ್ವಿಕ್ ಶಂಕರ್,ಡಿಹೆಚ್ಓ ಮಹೇಶ್ ಬಿರಾದಾರ್, ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ರಿಜ್ವಾನಾ ಆಫ್ರೀನ್, ಮುದ್ನಾಳ ಗ್ರಾಂ.ಪಂ ಅಧ್ಯಕ್ಷ ವಿನೋದ್ ರಾಠೋಡ ಉಪಸ್ಥಿತರಿದ್ದರು.