ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಭಾರತ ವಿಕಾಸ ಸಂಗಮ ಮತ್ತು ವಿಕಾಸ ಅಕಾಡೆಮಿ ಯಿಂದ ವಿಶೇಷ ಉಪನ್ಯಾಸ
ಯಾದಗಿರಿ: ಮಾನವ ಬುದ್ಧಿ ಜೀವಿ. ನಿಮ್ಮೆಲ್ಲರಲ್ಲಿ ಅಗಾಧ ಶಕ್ತಿಯಿದೆ. ಅದನ್ನು ಅರಿತು ಶ್ರಮಪಟ್ಟರೆ ಸಾಧನೆ ಸುಲಭ ಎಂದು ಉಪನ್ಯಾಸಕ ಧಾರವಾಡದ ಹುಮನ್ ಮೈಂಡೆಸ್ಟ್ ಎಕ್ಸ್ ಪರ್ಟ ಟ್ರೈನರ್ ಮಹೇಶ್ ಮಾಶಾಳ ಹೇಳಿದರು.
ತಾಲೂಕಿನ ಸೈದಾಪುರ ವಿದ್ಯಾ ವರ್ಧಕ ಸಂಸ್ಥೆ ಆವರಣದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ, ಭಾರತ ವಿಕಾಸ ಸಂಗಮ ಮತ್ತು ವಿಕಾಸ ಅಕಾಡೆಮಿ ವತಿಯಿಂದ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿ ವ್ಯಕ್ತಿ ವೈವಿದ್ಯತೆಯಿಂದ ಕೂಡಿರುತ್ತಾರೆ. ನಮ್ಮ ಮಹತ್ವ ಹೆಚ್ಚಾಗುವಂತೆ ಮಾಡುವಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಇದಕ್ಕಾಗಿ ನಮ್ಮ ಪರಿಚಯ ನಾವೇ ಮಾಡಿಕೊಳ್ಳಬೇಕು. ದೃಢ ಸಂಕಲ್ಪದೊಂದಿಗೆ ಸ್ವ ಸಾಮಾರ್ಥ್ಯ ತಿಳಿದುಕೊಂಡು ಪ್ರಯತ್ನ ಮಾಡಬೇಕು.
ಮಹಾನ ವ್ಯಕ್ತಿಗಳ ಜೀವನ ಸಾಧನೆಯಲ್ಲಿ ಇದನ್ನು ಕಾಣುತ್ತೇವೆ. ಅದು ನಿಮ್ಮದಾಗಬೇಕು. ಪ್ರತಿ ಸಸ್ಯ ಹಾಗೂ ಪ್ರಾಣಿಗಳು ತಮ್ಮ ಕಾರ್ಯವನ್ನು ತೆಗಳಿಕೆ ಹಾಗೂ ಹೊಗಳಿಕೆಗೆ ಬೆಲೆ ಕೊಡದೆ ಕಾರ್ಯನಿರ್ವಹಿಸುತ್ತವೆ. ಅದರಂತೆ ನಾವುಗಳು ಯಾವುದಕ್ಕೆ ಮಹತ್ವ ಕೊಡದೆ ಭಗವಂತ ನೀಡಿದ ನಮ್ಮ ಸಾಮಾರ್ಥ್ಯವನ್ನು ಬಳಸಿಕೊಂಡು ಬದುಕು ಸುಂದರವಾಗಿಸಿಕೊಳ್ಳಬೇಕು ಎಂದರು.
ಪುಸ್ತಕ, ಪರೀಕ್ಷೆ ಪ್ರಮಾಣ ಪತ್ರದ ಶಿಕ್ಷಣದ ಹಿಂದೆ ಹೋದರೆ ಸಾಧನೆ ಮಾಡಲು ಸಾಧ್ಯವಿಲ್ಲಾ. ಶಕ್ತಿಯ ಪರೀಕ್ಷೆಯಾಗಬೇಕು. ಪೋಷಕರು ತಮ್ಮ ಮಕ್ಕಳನ್ನು ಇತರರಿಗೆ ಹೊಲಿಕೆ ಮಾಡಬಾರದು. ಮಕ್ಕಳಲ್ಲಿನ ವೈಯಕ್ತಿಕ ಭಿನ್ನತೆಗೆ ಮಹತ್ವ ನೀಡಿ ಪ್ರೋತ್ಸಾಹ ನೀಡಿದಾಗ ಮಾತ್ರ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಕಿವಿ ಮಾತುಗಳನ್ನು ಹೇಳಿದರು.
ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ, ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಸಿದ್ರಾಮಪ್ಪಗೌಡ ಗೊಂದಡಿಗಿ, ಸುರೇಶ ಆನಂಪಲ್ಲಿ, ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ, ವಿಕಾಸ ಅಕಾಡೆಮಿಯ ಭೀಮಣ್ಣ ವಟವಟ್ ಸೇರಿದಂತೆ ಇತರರಿದ್ದರು. ಜಿ.ಎಂ.ಗುರುಪ್ರಸಾದ ಪ್ರಾಸ್ತಾವಿಕ ಮಾತಾನಾಡಿದರು. ಕರಬಸಯ್ಯ ದಂಡಿಗಿಮಠ ಸ್ವಾಗತಿಸಿದರು. ಸಂಗಾರೆಡ್ಡಿ ನಿರೂಪಿಸಿದರು. ಕಾಶಿನಾಥ ವಂದಿಸಿದರು.
ದೇಶದ ಅತಿ ದೊಡ್ಡ ಜ್ಞಾನ ಜಾತ್ರೆಯು ಸೇಡಂ-ಕಲಬುರಗಿ ಮಾರ್ಗ ಮಧ್ಯದಲ್ಲಿ ಬೀರನಹಳ್ಳಿ ಸಮೀಪ ಪ್ರಕೃತಿ ನಗರದಲ್ಲಿ ಮುಂದಿನ ವರ್ಷದ ಜನೆವರಿ-29 ರಿಂದ ಫೆಬ್ರವರಿ-6 ವರೆಗೆ ಭಾರತೀಯ ಸಂಸ್ಕೃತಿ ಉತ್ಸವ -7ರ ವಿರಾಟ ದರ್ಶನವಾಗಲಿದೆ. ಈ ಜ್ಞಾನ ಯಜ್ಞದಲ್ಲಿ ನಮ್ಮ ಜಿಲ್ಲೆಯಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಸದುಪಯೋಗ ಮಾಡಿಕೊಳ್ಳಬೇಕು- ಭೀಮಣ್ಣ ಬಿ ವಡವಟ್, ಜಿಲ್ಲಾ ಸಹ ಸಂಚಾಲಕ, ವಿಕಾಸ ಅಕಾಡೆಮಿ ಯಾದಗಿರಿ.