ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸಂವಿಧಾನ ದಿನ | ಕಾನೂನು ಅರಿವು – ನೆರವು ಕಾರ್ಯಕ್ರಮ
ಯಾದಗಿರಿ: ಭಾರತದ ಸಂವಿಧಾನ ಪೀಠಿಕೆಯ ಬೋಧಿಸುವುದರ ಮೂಲಕ ಪ್ರತಿ ವರ್ಷ ನವೆಂಬರ್ 26 ರಂದು ಭಾರತ ಸಂವಿಧಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ.ಎಸ್.ರೇಖಾ ಅವರು ಹೇಳಿದರು.
ನಗರದ ಜಿಲ್ಲಾ ನ್ಯಾಯಾಲ ಯ ಆವರಣದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯ ದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದ ಪ್ರಜೆಗಳ ಹಿತ ರಕ್ಷಣೆಗಾಗಿ ಹಾಗೂ ಅವರ ಹಕ್ಕುಗಳ ಸಂರಕ್ಷಣೆಗಾಗಿ ಭಾರತ ಸಂವಿಧಾನ ರಚನೆಯಾಗಿದ್ದು, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಹಾಗೂ ಅದನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಮುಖ್ಯ ಅತಿಥಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಮರಿಯಪ್ಪ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ, ಜಿಲ್ಲಾ ಸರ್ಕಾರಿ ವಕೀಲರಾದ ಎಮ್.ಬಿ ಪಾಟೀಲ್ ಮಾತನಾಡಿ, ಭಾರತ ಸಂವಿಧಾನ ದಿನವು ಭಾರತಿಯ ಸಂವಿಧಾನ ಅಂಗೀಕಾರದ ದಿನವಾಗಿದೆ, ನಮ್ಮ ಸಂವಿಧಾನವು ಅಮೂಲ್ಯವಾದ ಮೂಲಭೂತ ಹಕ್ಕುಗಳನ್ನು ನೀಡಿದೆ. ಅಲ್ಲದೆ ಮೂಲಭೂತ ಕರ್ತವ್ಯಗಳನ್ನು ನೀಡಿದ್ದು, ಅವುಗಳನ್ನು ಪಾಲಿಸುವ ಹಾಗೂ ಗೌರವಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ತಿಳಿಸಿದರು.
ಸಂವಿಧಾನವು ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಒತ್ತಿ ಹೇಳುತ್ತದೆ. ಡಾ.ಬಿ.ಆರ್ ಅಂಬೇಡ್ಕರ್ ಅವರ ಕೊಡುಗೆಗಳನ್ನು ಗುರುತಿಸುವುದಲ್ಲದೆ, ಪ್ರಜಾಸತ್ತಾತ್ಮಕ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸುವಲ್ಲಿ ನಾಗರಿಕರ ತೊಡಗಿಸಿಕೊಳ್ಳುವಿಕೆಯನ್ನು ಪ್ರತಿಪಾದಿಸುವ ಆಚರಣೆಯಾಗಿದೆ.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ವಕೀಲ ಆನಂದರಾವ್ ನೀರಟಿ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ರವರ ಜೀವನದ ಕುರಿತು ವಿವರಿಸಿದರು. ಅದರಲ್ಲೂ ಮುಖ್ಯವಾಗಿ ಡಾ.ಬಿ.ಆರ್ ಅಂಬೇಡ್ಕರ್‌ರವರು ತಮ್ಮ ಬಾಲ್ಯದಿಂದ ಇಡೀ ಜೀವನಾದ್ಯಂತ ಅನುಭವಿಸಿದ ಕಷ್ಟಕಾರ್ಪಣ್ಯಗಳ ಕುರಿತು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀ ಸಿ.ಎಸ್. ಮಾಲಿ ಪಾಟೀಲ್ ಮಾತನಾಡಿ, ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವಂತೆ ಎಲ್ಲರೂ ಭ್ರಾತೃತ್ವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
ಇದೇ ವೇಳೆ 25 ವರ್ಷಗಳ ವಕೀಲರ ವೃತ್ತಿ ಯಶಸ್ವಿಯಾಗಿ ಪೂರ್ಣಗೊಳಿಸಿದ ದೇವಿಡ್ ಧನರಾಜ, ಈರಣ್ಣ ಮಗ್ಗ, ಸಾಬಣ್ಣ ಗಣಪೂರ, ಶಾಂತರೆಡ್ಡಿ ಮಾಲಿಪಾಟೀಲ್, ಎಸ್.ಪಿ ನಾಡೆಕರ್, ಮಹಿಪಾಲರೆಡ್ಡಿ ಇಟಗಿ, ವಕೀಲರ ಮಹ್ಮದ್ ಗೌಸ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಯಾದಗಿರಿ ಜೆ.ಎಮ್.ಎಫ್.ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀ ಅರುಣ ಚೌಗುಲೆ, ಜೆ.ಎಮ್.ಎಫ್.ಸಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀ ರಾಹುಲ್ ಚಾಂಬಾರ, ಜಿಲ್ಲಾ ವಕೀಲರ ಸಂಘದ ಹಿರಿಯ ಹಾಗೂ ಕಿರಿಯ ವಕೀಲರು ಉಪಸ್ಥಿತರಿದ್ದರು.
ವಕೀಲ ಮಾರುತಿ ಇಟೆ, ಕಾರ್ಯಕ್ರಮವನ್ನು ನಿರೂಪಿಸಿದರು. ಹಾಗೂ ಜಿಲ್ಲಾ ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ರಾಜು ದೊಡ್ಡಮನಿ ವಂದಿಸಿದರು.