ಅರ್ಥಪೂರ್ಣವಾಗಿ ಭಕ್ತ ಕನಕದಾಸರ ಜಯಂತಿ ಆಚರಣೆ | ಅರಣ್ಯ ಸಂರಕ್ಷಕರಿಗೆ ವಿಶೇಷ ಸನ್ಮಾನ
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಿಂದ ಕನಕ ದಾಸರ ಜ್ಞಾನೋದಯದ ಕೃಷ್ಣ-ಭೀಮಾ ದೋಅಬ್ ಪ್ರದೇಶ ಅಭಿವೃದ್ಧಿ ಪಡಿಸಲು ಒತ್ತಾಯ…
ಯಾದಗಿರಿ: ರಾಯಚೂರ ಹಾಗೂ ಯಾದಗಿರಿ ಪ್ರದೇಶಗಳಲ್ಲಿ ಹಾದು ಹೋಗುವ ಕೃಷ್ಣ ಹಾಗೂ ಭೀಮಾ ನದಿ ತೀರದ “ದೋಅಬ್ ಪ್ರದೇಶ” ದಲ್ಲಿ ಸಂತ ಕವಿ ಕನಕ ದಾಸರಿಗೆ ಜ್ಞಾನೋದಯವಾದ ಹಿನ್ನೆಲೆಯಲ್ಲಿ ,ಈ “ದೋಅಬ್ ಪ್ರದೇಶ” ವನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸುವ ಅವಶ್ಯಕತೆಯಿದೆ ಎಂದು ತಿಂಥಿಣಿ ಕನಕಗುರು ಪೀಠದ ಶ್ರೀ ಸಿದ್ದರಾಮಾನಂದ ತೀರ್ಥರು ಹೇಳಿದರು.
ನಗರದ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಸಂತ ಕವಿ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಕ್ತಿಯ ಪ್ರತೀಕರಾಗಿದ್ದ ಭಕ್ತ ಕನಕದಾಸರು, ತ್ಯಾಗಮಯಿಯಾಗಿದ್ದರು.ತಮ್ಮ ಕುಟುಂಬ, ಅಧಿಕಾರ ಕಳೆದು ಕೊಂಡು ಭಕ್ತಿಕಡೆಗೆ ಒಲಿದು ಸಮಾಜ ಸುಧಾರಣೆ, ಧಾರ್ಮಿಕ ಸಮನ್ವಯತೆಗೆ ಒತ್ತು ನೀಡಿದರು. ಶೈವ- ವೈಷ್ಣವ ಗಿಂತ ದೈವ ಸೇವೆಗೆ ಮಹತ್ವ ನೀಡಿದರು.ಭಕ್ತಿ ಹಾಗೂ ಜ್ಞಾನ ಸಂಪ್ರದಾಯ ಎರಡೂ ಜೀವನದಲ್ಲಿ ಯಶಸ್ವಿಯಾಗಲು ಬೇಕಾಗಿವೆ ಎಂದು ಪ್ರತಿಪಾದಿಸಿದರು ಎಂದು ಹೇಳಿದರು.
ಇಂತಹ ದಾರ್ಶನಿಕರ ಕುರುಹುಗಳು ಗುರುತಿಸಿ ಅಭಿವೃದ್ಧಿಪಡಿಸಬೇಕಾಗಿದೆ.ದೋಅಬ್ ಪ್ರದೇಶ,ಈ ಭಾಗದ ಮೈಲಾರ್ಲಿಂಗೇಶ್ವರ್ ದೇವಸ್ಥಾನ, ಕನಕದಾಸರ ಭವನ ನಿರ್ಮಾಣಕ್ಕೆ ಒತ್ತು ನೀಡುವಂತೆ ಸಲಹೆ ನೀಡಿದರು.
ಪತ್ರಕರ್ತ ಹಾಗೂ ಜನ್ಮಭೂಮಿ ಸೇವಾ ಸಂಸ್ಥೆಯ ಅಧ್ಯಕ್ಷ ಬೀರಲಿಂಗಪ್ಪ ಕಿಲ್ಲನಕೇರಾ ಉಪನ್ಯಾಸ ನೀಡಿ, ಭಕ್ತ ಕನಕದಾಸರು ರಾಷ್ಟ್ರ ಪ್ರಜ್ಞೆ ಬಿತ್ತುವ, ಜಾತಿ, ಮತ, ಪಂಥ, ಭೇದಭಾವ ಹೋಗಲಾಡಿಸುವ ಕಾರ್ಯ ತಮ್ಮ ಕೀರ್ತನೆ,ಕೃತಿಗಳ ಮೂಲಕ ಮಾಡಿದ್ದಾರೆ. ಸಾಮಾಜಿಕ ನ್ಯಾಯ, ಸಮಾನತೆ, ಭಕ್ತಿಗಳ ಮೂಲಕ ಜೀವನ ರೂಪಿಸುವ ಸಂದೇಶಗಳನ್ನು ನೀಡಿದ್ದಾರೆ. ಇಂತಹ ದಾಸರು, ಸಂತಶ್ರೇಷ್ಠರ ತತ್ವ ಆದರ್ಶ ಗಳನ್ನು ಜನರನ್ನು ಮಣಗಾಣಿಸಲು ಜಯಂತಿಗಳನ್ನು ಆಚರಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವೆಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ನಗರ ಶಾಸಕ ಶ್ರೀ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಮಾತನಾಡಿ, ದಾರ್ಶನಿಕ,ಸಂತ ಕವಿ ಕನಕದಾಸರ ಕೀರ್ತನೆಗಳು ದೈವತ್ವದಕಡೆಗೆ ಕೊಂಡೊಯ್ಯುತ್ತವೆ. ಕನ್ನಡ ನಾಡಿನ ಸಮಾಜ ಸುಧಾರಕರಲ್ಲಿ ಒಬ್ಬರಾದ ಭಕ್ತ ಕನಕದಾಸರ ಭವನಕ್ಕೆ ನಗರದಲ್ಲಿ ಅವಶ್ಯಕವಿರುವ ಸ್ಥಳ ಹಾಗೂ ಸರ್ಕಾರದ ಸವಲತ್ತು ಗಳನ್ನು ಶಾಂತಿಪ್ರಿಯ ಹಾಲುಮತ ಸಮಾಜಕ್ಕೆ ಒದಗಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರಣ್ಯ ಸಂರಕ್ಷಕರು, 5 ಲಕ್ಷ ಸಸಿ ನೆಟ್ಟ,ಕಲ್ಲಿನ ಕೋಟೆ, ನೀರಿನ ಹೊಂಡ, ಕಾಲುದಾರಿಗಳೂ ಇತರೆ ಕಾರ್ಯ ಮಾಡಿದ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು.
ಸಂತಕವಿ ಕನಕದಾಸರ ಜಯಂತ್ಯೋತ್ಸವ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಣ್ಣ ಐಕೂರ ಮಾತನಾಡಿದರು.
ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ,ಜಿ.ಪಂ.ಸಿಇಓ ಲವೀಶ ಒರಡಿಯಾ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ವಿನಾಯಕ ಮಾಲಿಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಉಪಸ್ಥಿತರಿದ್ದರು. ಶ್ರೀಶೈಲ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಸರಸ್ವತಿ ಪ್ರಾರ್ಥಿಸಿದರು.