ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಬೇಕಿರುವ ಜವಾಬ್ದಾರಿ ಮರೆತರೇ ಪ್ರಾಂಶುಪಾಲ, ಶಿಕ್ಷಕರು..?
ಎಲ್ಲೋ ಇರುವ ಪಾಲಕರು ಪಾಪ, ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡಿ ಸಾಧನೆ ಮಾಡುತ್ತಾರೆ ಎನ್ನುವ ಭವಿಷ್ಯದ ಕನಸು ಕಾಣುತ್ತಿದ್ದಾರೆ , ಇನ್ನೊಂದೆಡೆ ಮಕ್ಕಳ ಜೀವನ ರೂಪಿಸುವ ಜವಾಬ್ದಾರಿ ಹೊತ್ತ ಶಿಕ್ಷಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಅಮಾಯಕ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರಾ…? ಈ ಬಗ್ಗೆ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ವ್ಯವಸ್ಥೆ ಸರಿಪಡಿಸಲು ಮುಂದಾಗಬೇಕಿದೆ.
ಯಾದಗಿರಿ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳನ್ನು ರೂಪಿಸುವ ಭಾವನೆ. ಆದರೆ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅದರ ವಿರುದ್ಧ ವಾತಾವರಣ ನಿರ್ಮಾಣವಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳನ್ನೂ ಮೀರಿಸುವ ಮಟ್ಟಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶಿಕ್ಷಣ ಸಂಸ್ಥೆಗಳ ಮೂಲಕ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಸ್ಕಾಲರ್ಶಿಪ್ ಹೀಗೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಆದರೇ ಅದರ ಸೌಕರ್ಯ ಪಡೆದು ಉತ್ತಮ ವ್ಯಾಸಾಂಗ ಮಾಡಿ ಸಾಧನೆಗೆ ಪ್ರೇರಣೆಯಾಗಬೇಕಿದ್ದ ಸಂಸ್ಥೆಯಲ್ಲಿ ಏನಾಗುತ್ತಿದೆ ಎನ್ನುವದು ಗಮನಿಸುವುದು ಅತ್ಯವಶ್ಯಕ ಅನಿಸಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕ ಶಿವರಾಜ್ ಬೀರನೂರ, ಮುಬಾರಕ್ ಎನ್ನುವರನ್ನು ಕ್ರೈಸ್ ಕಾರ್ಯನಿರ್ವಾ ಹಕ ನಿರ್ದೇಶಕರು ಅಮಾನತುಗೊಳಿಸಿದ್ದಾರೆ.
ಇದನ್ನು ವಿರೋಧಿಸಿ ವಸತಿ ಶಾಲೆಯ 300 ಕ್ಕೂ ಹೆಚ್ಚು ಮಕ್ಕಳು ಸುಮಾರು 5 ಕಿ.ಮೀ ದೂರ ನಡೆದುಕೊಂಡು ಬಂದು ತಹಸೀಲ್ ಕಾರ್ಯಾಲಯದ ಎದುರು ಡಿ. 4 ರಂದು ಪ್ರತಿಭಟನೆ ನಡೆಸಿ, ಕನ್ನಡ ಮತ್ತು ಹಿಂದಿ ಶಿಕ್ಷಕ ಶಿವರಾಜ್ ಬೀರನೂರ ಹಾಗೂ ಮುಬಾರಕ್ ಅವರು ಮಕ್ಕಳ ಜೊತೆ ಅತ್ಯಂತ ಸೌಜನ್ಯದಿಂದ ವರ್ತಿಸುತ್ತಾರೆ.
ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಪಾಠ ಮಾಡುತ್ತಾರೆ. ವಿದ್ಯಾರ್ಥಿಗಳ ಪ್ರತಿಯೊಂದು ಸಮಸ್ಯೆಗೂ ಇವರೇ ಸ್ಪಂದಿಸುತ್ತಾರೆ. ಇವರ ವಿರುದ್ಧ ಪ್ರಾಂಶುಪಾಲರು ಹಾಗೂ ವಾರ್ಡನ್ ಸುಳ್ಳು ಆರೋಪ ಮಾಡುತ್ತಾ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ಸಂಬಂಧ ಕಲ್ಪಿಸಿ ಮಾನಸಿಕವಾಗಿ ಕುಗ್ಗಿಸುವಂತೆ ಮಾಡುತ್ತಾರೆ.
ಜಾತೀಯತೆ ಮಾಡುತ್ತ ವಿದ್ಯಾರ್ಥಿನಿಯರ ಫೋಟೋ ತೆಗೆದು ಹೆದರಿಸುವುದು ಮಾಡುತ್ತಾರೆ, ಅವಾಚ್ಯ ಪದಗಳಿಂದ ವಾರ್ಡನ ಮಾತನಾಡುತ್ತಾರೆ ಅವರ ದುರವರ್ತನೆ ಮಿತಿಮೀರಿದ ಎಂದು ಮಕ್ಕಳು ಆರೋಪಿಸಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ತಹಸೀಲ್ದಾರರ ಎದುರಲ್ಲಿ ಅಳಲು ತೋಡಿಕೊಂಡಿದ್ದು ವರದಿಯಾಗಿದೆ.
ಅಲ್ಲಿ ಏನಾಗುತ್ತಿದೆ ಎಂದು ದಿನ ನಿತ್ಯ ಹೋಗಿ ನೋಡಲು ಪಾಲಕರಿಗೆ ಸಾಧ್ಯನಾ.. ಒಳ್ಳೆಯ ಶಿಕ್ಷಣ ಸಿಗುವ ನಂಬಿಕೆಯಿಂದ ಮಕ್ಕಳನ್ನು ವಸತಿ ಶಾಲೆಗೆ ಬಿಟ್ಟಿದ್ದೇವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸಬೇಕು ಹೊರತು ಈ ರೀತಿ ಆಗಬಾರದು ಎಂದು ಪಾಲಕರು ನೋವು ತೋಡಿಕೊಂಡಿದ್ದಾರೆ.
ಜನೆವರಿಯಲ್ಲಿಯೇ ಕ್ರೈಸ್ ಗೆ ಪತ್ರ ಬರೆದಿದ್ದ ಪ್ರಾಂಶುಪಾಲರು: ಶಿಕ್ಷಕನನ್ನು ಅಮಾನತು ಮಾಡಲು 2024 ರಲ್ಲಿಯೇ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾಲೇಜು ಪ್ರಾಂಶುಪಾಲರು ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿರುವ ಪ್ರತಿ ಲಭ್ಯವಾಗಿದೆ.
ಅವ್ಯವಸ್ಥೆ ಬಗ್ಗೆ ಅಕ್ಟೋಬರ್ ನಲ್ಲಿಯೇ ದೂರು : ಸರ್. ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದಿಂದ ಅಕ್ಟೋಬರ್ 1 ರಂದು ವಸತಿ ಶಾಲೆಯ ಅವ್ಯವಸ್ಥೆ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಪ್ರಾಧಾನ ಕಾರ್ಯದರ್ಶಿ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಮೂಲಕ ದೂರು ಸಲ್ಲಿಸಲಾಗಿತ್ತು.
ಪತ್ರದ ಪ್ರತಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ, ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯಕ್ಕು ಸಲ್ಲಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಲು ಮುಂದಾಗಬೇಕಿತ್ತು. ಈಗಲಾದರೂ ವ್ಯವಸ್ಥೆ ಸರಿಪಡಿಸಲು ಮುಂದಾಗಬೇಕು ಎಂದು ಪ್ರದೀಪ ಅಣಬಿ ಒತ್ತಾಯಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಂದ ವರದಿ: ಘಟನೆ ಕುರಿತು ಯಾದಗಿರಿಧ್ವನಿ.ಕಾಮ್ ನೊಂದಿಗೆ ಮಾತನಾಡಿರುವ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಅಮಾನತು ಆದ ಶಿಕ್ಷಕರ ಪರ, ಈಗಿನ ಪ್ರಭಾರಿ ಪ್ರಾಂಶುಪಾಲರು, ನಿಲಯ ಪಾಲಕರ ವಿರುದ್ಧ ಕ್ರಮಕ್ಕೆ ಮಕ್ಕಳು ಪ್ರತಿಭಟನೆ ಮಾಡಿದ್ದಾರೆ. ಘಟನೆ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಸಮಸ್ಯೆಯನ್ನು ಆಲಿಸಿದ್ದು ಘಟನೆಯ ಬಗ್ಗೆ ಕ್ರೈಸ್ ಗೆ ವರದಿ ಮಾಡುವುದಾಗಿ ಅವರು ತಿಳಿಸಿದ್ದಾರೆ.