ತರಗತಿ ಬಹಿಷ್ಕರಿಸಿ ರಸ್ತೆಗೆ ಬಂದ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು | ಶಹಾಪುರ ತಾಲೂಕು ಆಡಳಿತ ಕಚೇರಿ ಎದುರು ಧರಣಿ | ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದೌಡು
ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು ಏಕಾಏಕಿ ತರಗತಿ ಬಹಿಷ್ಕರಿಸಿ ಬೀದಿಗಿಳಿದು ತಹಶೀಲ್ದಾರ ಕಚೇರಿ ಎದುರು ಹೋರಾಟ ಆರಂಭಿಸಿದ್ದಾರೆ.
ಈ ಹಿಂದೆ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕ ಶಿವರಾಜ್ ಬೀರನೂರ ಮತ್ತು ಹಿಂದಿ ಶಿಕ್ಷಕ ಮುಬಾರಕ್ ಅವರನ್ನು ಅಮಾನತುಗೊಳಿಸಿ ಡಿ.2 ರಂದಷ್ಟೇ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಅಮಾನತುಗೊಂಡ ಶಿಕ್ಷಕ ಶಿವರಾಜ್, ಪ್ರಾಂಶುಪಾಲರಿಗೆ ಶಾಲಾ ಆಡಳಿತ ಸುಗಮವಾಗಿ ನಡೆಸಲು ಬಿಡದೆ ತಡೆಯೊಡ್ಡುವುದು, ಪ್ರಾಂಶುಪಾಲ ವಿರುದ್ಧ ಮಕ್ಕಳನ್ನು ಎತ್ತಿಕಟ್ಟುವ ಕೆಲಸ, ಮಕ್ಕಳಲ್ಲಿ ಜಾತಿ ಭೇದ ಭಾವ ಮೂಡಿಸಿ ಶಾಲಾ ವಾತಾವರಣ ಹಾಳು ಮಾಡಿದ ಆರೋಪದ ಎದುರಿಸುತ್ತಿದ್ದಾರೆ.
ಇನ್ನು ಮುಬಾರಕ್ ಸರಿಯಾಗಿ ಪಾಠ ಬೋಧಿಸದೇ ಮಕ್ಕಳಿಗೆ ಫೋನ್ ಕೊಡುವ ಆಮಿಷ ತೋರಿಸಿ ಸಿಬ್ಬಂದಿ ಕೋಣೆಗೆ ಕರೆಯಿಸುತ್ತಿದ್ದರು, ಈ ಬಗ್ಗೆ ಸಿಬ್ಬಂದಿಗಳು ತಿಳಿ ಹೇಳಿದ್ದರಿಂದ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳು ಸುಳ್ಳು ಹೇಳುವ ಸಂಚು ಮಾಡಿದ್ದು ಸೇರಿ ಹಲವು ಆರೋಪಗಳಿವೆ. ಈ ಕುರಿತು ಸೂಕ್ತ ಉತ್ತರ ನೀಡಲು ನವೆಂಬರ್ ತಿಂಗಳಲ್ಲಿ ಈರ್ವರು ಶಿಕ್ಷಕರಿಗೆ ನೋಟಿಸ್ ಜಾರಿಯಾಗಿತ್ತು.
ಪ್ರಕರಣ ಇದೀಗ ಇನ್ನೊಂದು ತಿರುವು ಪಡೆದಿದ್ದು, ಪ್ರಾಂಶುಪಾಲ ಸಿದ್ದಭೀರಪ್ಪ ಮತ್ತು ನಿಲಯಪಾಲಕ ರಾವುತಪ್ಪ ಇಬ್ಬರ ಒಳ ಒಪ್ಪಂದದ ಮೇರೆಗೆ ನಿಲಯಪಾಲಕ ಒಂದು ತಿಂಗಳು ಶಾಲಾಗೆ ಬಾರದೇ ಅನಧಿಕೃತವಾಗಿ ಗೈರಾಜರಾಗಿ ಒಂದು ತಿಂಗಳ ರುಜು ಒಂದೇ ಬಾರಿ ಮಾಡಿ (ಆಗಸ್ಟ್ 24) ವೇತನವನ್ನು ಪಡೆದು ಕೊಂಡಿರುತ್ತಾರೆ ಎಂದು ಆರೋಪಗಳು ಕೇಳಿ ಬಂದಿವೆ.
ನಿಲಯಪಾಲಕ ರಾವುತಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದುವುದು ಬಯಲಾಗಿದೆ.
ಗಂಡ – ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಪ್ರಾಂಶುಪಾಲ, ನಿಲಯಪಾಲಕ ಹಾಗೂ ಸಿಬ್ಬಂದಿಗಳ ಒಳಸಂಚಿನಲ್ಲಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ ಎನ್ನುವುದು ಸತ್ಯ.
ಸಮಾಜ ಕಲ್ಯಾಣ ಅಧಿಕಾರಿ ದೌಡು: ವಿದ್ಯಾರ್ಥಿಗಳ ಪ್ರತಿಭಟನೆ ವಿಷಯ ತಿಳಿದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆರಿಸಿದ್ದಾರೆ ಎಂದು ತಿಳಿದು ಬಂದಿದೆ. ಅವರನ್ನು ಸಂಪರ್ಕಿಸಿದಾಗ ಫೋನ್ ಕರೆಯ ಪ್ರತಿಕ್ರಿಯೆಗೆ ಸಿಕ್ಕಿಲ್ಲ.
ವ್ಯವಸ್ಥೆ ಸರಿಯಿಲ್ಲ: ವಸತಿ ಶಾಲೆಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ. ಸ್ಥಳೀಯ ಸಂಘಟನೆ ಪ್ರಮುಖರೊಬ್ಬರು ಮಾತನಾಡಿ ಇಲ್ಲಿನ ವ್ಯವಸ್ಥೆ ಬಗ್ಗೆ ಹಲವು ಬಾರಿ ದೂರು ನೀಡಿದ್ದೇವೆ.
ತಂದೆ ತಾಯಿ ಬಿಟ್ಟು ಅಕ್ಷರ ಕಲಿಯಲು ಬಂದ ಮಕ್ಕಳಿಗೆ ಉತ್ತಮ ಭೋಧನೆ ಮಾಡಬೇಕು. ಈ ರೀತಿ ಮಕ್ಕಳನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.