ಇವರು ಗಿರಿ ಜಿಲ್ಲೆಯ ಹೆಮ್ಮೆ….
ನಿನ್ನೆಯಷ್ಟೇ ಜಾನಪದ ವಿವಿಯಿಂದ ಡಾಕ್ಟರೇಟ್ ಪುರಸ್ಕಾರ ಪಡೆದ ಡಾ. ಹೊನ್ಕಲ್ ಗೆ ಅಭಿನಂದನೆಗಳ ಮಹಾಪುರ
ಯಾದಗಿರಿ: ನಾಡಿನ ಅಕ್ಷರ ಲೋಕದ ನಕ್ಷತ್ರದಂತೆ ಹೊಳೆಯುವ ಸಹೃದಯಿ ಹೊನ್ಕಲ್ ಅವರನ್ನು ಈಗ ಡಾ. ಸಿದ್ಧರಾಮ ಹೊನ್ಕಲ್ ಎಂದು ಕರೆಯುವುದು ಜಿಲ್ಲೆಯ ಸಾಹಿತ್ಯ ಲೋಕದ ಖದರ್ ಹೆಚ್ಚಿಸುವಂತೆ ಮಾಡಿದೆ.
ಹೌದು, ನಮ್ಮ ಶಹಾಪುರದವರೇ ಆಗಿರುವ ಸಾಹಿತಿ ಹೊನ್ಕಲ್ ಅವರ ಅಪಾರ ಸಾಹಿತ್ಯ ಸೇವೆಗೆ ಇದೀಗ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ನೀಡಿದ್ದು ಗಿರಿ ಜಿಲ್ಲೆಯ ಹೆಮ್ಮೆಯೇ ಸರಿ. ಡಾ. ಹೊನ್ಕಲ್ ಅವರು ಎಂ.ಎ.ಕನ್ನಡ (ಶಿಷ್ಟ ಸಾಹಿತ್ಯ, ಜನಪದ ಸಾಹಿತ್ಯ, ಧಾರ್ಮಿಕ ಸಾಹಿತ್ಯ ಅಧ್ಯಯನ) ಕರ್ನಾಟಕ ವಿವಿ ಧಾರವಾಡ ಹಾಗೂ ಪತ್ರಿಕೋದ್ಯಮ ಹಾಗೂ ಸಮೂಹ ಮಾಧ್ಯಮ ಪಿಜಿ ಕೋರ್ಸ್ ಮೈಸೂರು, ಆರೋಗ್ಯ ಶಿಕ್ಷಣ ಹಾಗೂ ನ್ಯೂಟ್ರಿಷನ್ ಬಗ್ಗೆ ಡಿಪ್ಲೋಮಾ ಇಂದಿರಾ ಗಾಂಧಿ ವಿಶ್ವವಿದ್ಯಾಲಯ ದೆಹಲಿಯಿಂದ ಪಡೆದಿದ್ದಾರೆ.
ಅಲ್ಲದೆ ಇವರು ಕಾನೂನು ವ್ಯಾಸಂಗವನ್ನು ಸಹ ಮಾಡಿದ್ದಾರೆ. ವಿಭಾಗೀಯ ಆರೋಗ್ಯ ಶಿಕ್ಷಣಾಧಿಕಾರಿ ಆಗಿ ಕಲ್ಯಾಣ ಕರ್ನಾಟಕದ ಕಲಬುರಗಿ ವಿಭಾಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಈಗ ವಿಶ್ರಾಂತರು.
ಇವರು ಕಥೆ,ಕವನ, ಗಜಲ್, ಹೈಕು, ಶಾಯಿರಿ, ಲಲಿತ ಪ್ರಬಂಧ, ಜೀವನ ಕಥನ, ಹಾಗೂ ಕನ್ನಡದಲ್ಲಿ ಅತಿಹೆಚ್ಚು ಪ್ರವಾಸ ಕಥನಗಳನ್ನು ಬರೆದವರು ಎಂಬ ಹೆಗ್ಗಳಿಕೆ ಹೊಂದಿ ವಿವಿಧ ಪ್ರಕಾರದ ಸುಮಾರು 65 ಕಿಂತ ಹೆಚ್ಚು ಮೌಲ್ವಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿ ನಾಡಿನ ಪ್ರಮುಖ ಲೇಖಕರಲ್ಲಿ ಒಬ್ಬರಾಗಿದ್ದಾರೆ.
ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಕಸಾಪ ದತ್ತಿ ಪ್ರಶಸ್ತಿ, ನೋಬೆಲ್ ಮ್ಯಾನ್ ಪ್ರಶಸ್ತಿ ಒಳಗೊಂಡಂತೆ ಮಹಾತಪಸ್ವಿ ಪೂಜ್ಯ ಕುಮಾರಸ್ವಾಮಿಯವರ ಸಾಹಿತ್ಯ ಭೂಷಣ ಪ್ರಶಸ್ತಿ ಹಾಗೂ ಮಹಾಕವಿ ಕುವೆಂಪು ಅವರ ಅನಿಕೇತನ ಪ್ರಶಸ್ತಿ ಒಳಗೊಂಡಂತೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಕಥೆಗಳಿಗೆ ಚಿನ್ನದ ಪದಕ, ಮೂರು ಕೃತಿಗಳಿಗೆ ರಾಜ್ಯೋತ್ಸವ ಪುರಸ್ಕಾರ ಒಳಗೊಂಡಂತೆ 55 ಕಿಂತ ಹೆಚ್ಚು ಪ್ರತಿಷ್ಠಿತ ಪುರಸ್ಕಾರಗಳು ಸಂದಿವೆ.
ಗ್ರಾಮೀಣ ಭಾರತದ ಜಾನಪದ ಹಿನ್ನೆಲೆಯಿಂದ ಬಂದ ಇವರ ಕಥೆ,ಲಲಿತ ಪ್ರಬಂಧಗಳು ಗ್ರಾಮ್ಯ ಬದುಕಿನ ಕಷ್ಟ ಸಹಿಷ್ಣುತೆಗಳನ್ನು ಮಾನವೀಯ ಮೌಲ್ಯಗಳನ್ನು ಕಟ್ಟಿಕೊಟ್ಟಿವೆ.
ಇವರ ಸಾಹಿತ್ಯ ಮತ್ತು ಬದುಕು ಬರಹದ ಮೇಲೆ ಅಧ್ಯಯನ ಮಾಡಿ ಸಂಶೋಧನಾ ವಿದ್ಯಾರ್ಥಿನಿ ಡಾ.ರೇವತಿ ಶಿರನಾಳ 2018 ರಲ್ಲಿ ಗುಲ್ಬರ್ಗಾ ವಿವಿಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ.
ಇವರ ಒಟ್ಟು ಕಥೆಗಳ ಮೇಲೆ ಅಧ್ಯಯನ ಮಾಡಿ ಶ್ರೀ ಮಾನಯ್ಯ ಗೋನಾಲರವರು ಡಾ.ಡಿ.ಬಿ. ನಾಯಕರ ಮಾರ್ಗದರ್ಶನದಲ್ಲಿ ಗುಬವಿವಿಯಿಂದ ಎಂ.ಫಿಲ್ ಪದವಿ 2013 ರಲ್ಲಿ ಪಡೆದಿದ್ದಾರೆ. ಇವರ ಲಲಿತ ಪ್ರಬಂಧ, ಪ್ರವಾಸಕಥನ, ಕಾವ್ಯಗಳ ಮೇಲೆ ಅನೇಕ ವಿವಿಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಕಿರು ಪ್ರಬಂಧಗಳನ್ನು ಮಂಡಿಸಿದ್ದಾರೆ.
ಕರ್ನಾಟಕದ ಗುಲ್ಬರ್ಗ ವಿವಿ, ಕೃಷ್ಣದೇವರಾಯ ವಿವಿ, ಅಕ್ಕಮಹಾದೇವಿ ಮಹಿಳಾ ವಿವಿ,ರಾಯಚೂರು ವಿವಿ ಮತ್ತು ಶ್ರೀ ಶರಣಬಸವೇಶ್ವರ ವಿವಿ ಹಾಗೂ ಹೊರನಾಡಿನ ಕೋಲ್ಲಾಪುರ ವಿವಿ, ಸೋಲಾಪುರ ವಿವಿಗಳಲ್ಲಿ ಮತ್ತು ಸರ್ಕಾರಿ ಸ್ವಾಯತ್ತ ಪದವಿ ಕಾಲೇಜುಗಳಲ್ಲಿ ಹೀಗೆ ಒಟ್ಟಾರೆ ಇವರ 15 ಕಥೆ, ಲಲಿತ ಪ್ರಬಂಧ, ಪ್ರವಾಸ ಕಥನ ಕೃತಿಗಳು ಪಠ್ಯ ರೂಪದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧಿಸಲ್ಪಡುತ್ತಿವೆ.
ಡಾ. ಹೊನ್ಕಲ್ ಅವರ ನಾಡು ನುಡಿಯ ಕಾಳಜಿ, ಅಮೋಘ ಸಾಹಿತ್ಯ ಸೇವೆಗೆ ಗೌರವ ಸಂದಿದೆ.