ಶಿವಪುರ ರೈತರ ಸಮಸ್ಯೆ ಇತ್ಯರ್ಥ | ಗೋನಾಳ ರೈತರ ಸಮಸ್ಯೆಯೂ ಶೀಘ್ರ ಪರಿಹಾರಕ್ಕೆ ಸಚಿವ ದರ್ಶನಾಪೂರ ಭರವಸೆ
ಶಹಾಪುರ: ವಡಗೇರಾ ತಾಲ್ಲೂಕಿನ ಶಿವಪುರ ಮತ್ತು ಗೋನಾಳ ಗ್ರಾಮದ ರೈತರ ಪಹಣಿ ತಿದ್ದುಪಡಿ ಸಮಸ್ಯೆಯಿಂದಾಗಿ ಸುಮಾರು ವರ್ಷಗಳಿಂದ ರೈತರು ಪರಿತಪಿ ಸುವಂತಾಗಿತ್ತು.
ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ಈಗಾಗಲೇ ಶಿವಪುರ ರೈತರ ಸಮಸ್ಯೆ ಬಗೆಹರಿರಿದ್ದು, ಗೋನಾಳ ರೈತರ ಸಮಸ್ಯೆ ಬಗೆಹರಿಸಲು ಶಹಾಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲಣ್ಣ ಗೌಡ ಹಗರಟಗಿ ನೇತೃತ್ವದಲ್ಲಿ ರೈತರು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪೂರ ಅವರನ್ನು ಭೇಟಿಯಾದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಶೀಘ್ರವೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದರ ಕುರಿತು ರೈತ ಸಂಘದಿಂದ ಹಲವು ಬಾರಿ ಅಧಿಕಾರಿಗಳಿಗೆ ಮನವಿಯೂ ಸಲ್ಲಿಸಲಾಗಿತ್ತು. ಭೇಟಿ ವೇಳೆ ಗೋನಾಳ ರೈತರ ಮುಖಂಡರು, ರೈತರು ಇದ್ದರು.
ಯಾದಗಿರಿ ಧ್ವನಿ.ಕಾಮ್ ನೊಂದಿಗೆ ಮಾತನಾಡಿದ ಮಲ್ಲಣ್ಣ ಗೌಡ , ಈ ಬಗ್ಗೆ ಜಿಲ್ಲಾಡಳಿತ ಕಚೇರಿ ಎದುರು ಧರಣಿ ಮಾಡಲಾಗಿತ್ತು. ಪಹಣಿ, ಆಕಾರ ಬಂದ್ ಸರಿಯಿರಲಿಲ್ಲ. 4 – 5 ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ಭರವಸೆ ಇದೆ. ಉಸ್ತುವಾರಿ ಸಚಿವ ಸಹ ರೈತರ ನಿಯೋಗ ಭೇಟಿಗೆ ಸಮಯ ನೀಡಿದ್ದಾರೆ ಎಂದು ತಿಳಿಸಿದ್ದಾರೆ.