ಶಹಾಪುರದಲ್ಲಿ ಪ್ರತಿಭಟನೆ ರ್ಯಾಲಿ | ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ
ಯಾದಗಿರಿ: ಭಾರತೀಯ ಜನತಾ ಪಾರ್ಟಿಯಿಂದ ರಾಜ್ಯಾಧ್ಯಕ್ಷ ಬಿ.ವಚ.ವಿಜಯೇಂದ್ರ ನೇತೃತ್ವದಲ್ಲಿ ವಕ್ಫ್ ಅಕ್ರಮದ ವಿರುದ್ಧ ಬೃಹತ್ ಪ್ರತಿಭಟನ ರ್ಯಾಲಿ ನಡೆಯಿತು.
ಜಿಲ್ಲೆಯ ಶಹಾಪುರ ನಗರದ ಚರಬಸವೇಶ್ವರ ಕಮಾನ ದಿಂದ ಬಸವೇಶ್ವರ ವೃತ್ತದವರೆಗೆ ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆ ಯೊಂದಿಗೆ ರೈತರ ಭೂಮಿ, ಮಠಮಾನ್ಯಗಳ ಹಾಗೂ ಜನ ಸಾಮಾನ್ಯರ ಆಸ್ತಿಗಳನ್ನು ಕಬಳಿಸುತ್ತಿರುವ ಕಾಂಗ್ರೆಸ್ ಪ್ರಾಯೋ ಜಿತ ವಕ್ಫ್ ಅಕ್ರಮದ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ, ಬಿಜೆಪಿ ಅಧಿಕಾರಕ್ಕಾಗಿ ಪ್ರತಿಭಟನೆ ಮಾಡುತ್ತಿಲ್ಲ. ಕಾಂಗ್ರೆಸ್ ಕುಮ್ಮಕ್ಕಿನಿಂದ ವಕ್ಫ್ ಕಾಯ್ದೆಯು ರಾಜ್ಯದ ರೈತರು, ಮಠ ಮಾನ್ಯಗಳ ಜಮೀನನ್ನು ಕಿತ್ತುಕೊಳ್ಳಲು ಷಡ್ಯಂತ್ರ ರೂಪಿಸಿದೆ ಎಂದು ಕಿಡಿಕಾರಿದರು.
ವಕ್ಫ ಮೂಲಕ ತುತ್ತು ಅನ್ನ ನೀಡುವ ರೈತರ ಜಮೀನು ಮೇಲೆ ಕಣ್ಣು ಹಾಕಿರುವುದು ದುಸ್ಸಾಹಸ ಎಂದರು. ರಾಜ್ಯ ವಕ್ಫ್ ಕಾಯ್ದೆ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಾದ್ಯಂತ ಬಿಜೆಪಿ ಹೋರಾಟ ಮಾಡುತ್ತಿದೆ. ಸದಾ ರೈತರ ಜೊತೆಗಿದೆ ಎಂದರು. ಮಾಜಿ ಸಚಿವ ಎಂ.ಪಿ. ರೇಣುಕಾ ಚಾರ್ಯ, ಭೈರತಿ ಬಸವರಾಜ, ರಾಜುಗೌಡ, ಬಿ.ಶ್ರೀರಾಮುಲು, ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ ಮಾತನಾಡಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಡಾ. ಶರಣಭೂಪಾಲ ರೆಡ್ಡಿ ನಾಯ್ಕಲ್, ಚಂದ್ರಶೇಖರ ಮಾಗನೂರ, ಚಂದ್ರಶೇಖರ ಸುಬೇದಾರ, ಗುರು ಕಾಮಾ, ದೇವೇಂದ್ರನಾಥ ನಾದ, ಲಲಿತಾ ಅನಪೂರ, ಮಹೇಶರೆಡ್ಡಿ ಮುದ್ನಾಳ ಇದ್ದರು.
ರೈತರು ಸೇರಿದಂತೆ ಪಕ್ಷದ ಜನಪ್ರತಿನಿಧಿಗಳು, ಜಿಲ್ಲಾ, ಮಂಡಲ, ವಿವಿಧ ಮೋರ್ಚಾ, ಮಹಾಶಕ್ತಿ, ಶಕ್ತಿ ಕೇಂದ್ರ, ಬೂತ್ ಪದಾಧಿಕಾರಿಗಳು, ನಗರಸಭೆ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಹಿರಿಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.