ಜಿಲ್ಲಾ ಘಟಕದ ಕಾರ್ಯವೈಖರಿ ಮಾದರಿ | ಶರಣರ ಜೀವನ ಅನುಸರಿಸಿದರೆ ಬಾಳು ಸುಗಮ | 411 ಸದಸ್ಯರ ನೋಂದಣಿ ಮಾಡಿಸಿದ ಮಹಾದೇವಪ್ಪ ಅಬ್ಬೆತುಮಕೂರುಗೆ ವಿಶೇಷ ಸನ್ಮಾನ
ಯಾದಗಿರಿ: ವಚನ ಸಾಹಿತ್ಯದಲ್ಲಿ ಸ್ಚಚ್ಛಂದ ಬದುಕು ಅಡಗಿದೆ. ಶರಣರ ಜೀವನ ಅನುಸರಿಸಿದರೇ ಬಾಳು ಸುಗಮದ ದಾರಿ ತುಳಿತ್ತದೆ. ಕಾರಣ ಎಲ್ಲರೂ ಈ ದಾರಿಯಲ್ಲಿ ನಡೆಯಬೇಕೆಂದು ಗದುಗಿನ ಜಗದ್ಗುರು ತೊಂಟದಾರ್ಯ ಸಂಸ್ಥಾನ ಮಠದ ಡಾ.ತೊಂಟದ ಸಿದ್ದರಾಮ ಸ್ವಾಮಿಗಳು ಹೇಳಿದರು.
ಇಲ್ಲಿನ ಹಿಂದಿ ಪ್ರಚಾರ ಸಭಾದ ಸಭಾಂಗಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ ಜಿಶಸಾಪ ಪ್ರಕಟಿತ ಕೃತಿಗಳ ಬಿಡುಗಡೆ, ಜಿಲ್ಲಾ ಕದಳಿ ಮಹಿಳಾ ವೇದಿಕೆ ಉದ್ಘಾಟನೆ ಮತ್ತು ಯುವ ವೇದಿಕೆ ಹಾಗೂ ಕದಳಿ ತಾಲೂಕು ಅಧ್ಯಕ್ಷರುಗಳ ಸೇವಾ ದೀಕ್ಷೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಇಲ್ಲಿನ ಜಿಲ್ಲಾ ಘಟಕದ ಕಾರ್ಯವೈಖರಿ ರಾಜ್ಯದ ಎಲ್ಲ ಜಿಲ್ಲಾ ಘಟಕಗಳಿಗೂ ಮಾದರಿ ಎಂದ ಪೂಜ್ಯರು, ಶರಣರು ಹೆಸರು,ಹಣ ಗಳಿಸುವ ಕೆಲಸ ಮಾಡಲಿಲ್ಲ, ಪುಸ್ತಕಗಳು ಬರೆದು ಸಾಹಿತಿಗಳಾಬೇಕೆಂದು ಹಂಬಲಿಸಲಿಲ್ಲ, ಬದಲಿಗೆ ಸಮ ಸಮಾಜದ ನಿರ್ಮಾಣಕ್ಕೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.
ಅಂದು ಅವರು ಮಾಡಿದ್ದು ಇಂದು ಹೆಮ್ಮರವಾಗಿ ಬೆಳೆದು ಮಾನವಿಯತೆ ಹುಟ್ಟು ಹಾಕಿದೆ. ನಾವೆಲ್ಲರೂ ಇದನ್ನು ಪಾಲಿಸುವ ಮೂಲಕ ಶರಣರ ಕಾಯಕ ಮತ್ತು ತತ್ವಗಳನ್ನು ಜೀವಂತವಾಗಿಡಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ ಮಾತನಾಡಿ, ಬಸವಣ್ಣ, ಅಲ್ಲಂಪ್ರಭು, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ ಸೇರಿದಂತೆಯೇ 12 ನೇ ಶತಮಾನದಲ್ಲಿ ಆಗಿಹೊದ ಶರಣರ ಬದುಕು ನಮಗೆ ಲ್ಲರಿಗೂ ಆದರ್ಶಪ್ರಾಯವಾಗಿದೆ. ಅವರ ಪ್ರತಿ ವಚನವೂ ಜೀವನದ ಪಾಠವೆಂದರು.
ಇಂದು ಬಿಡುಗಡೆಗೊಂಡ ಈ ಎರಡು ಕೃತಿಗಳು ಅಮೂಲ್ಯ ಮತ್ತು ಮೌಖಿಕವಾಗಿವೆ. ಪರಿಷತ್ತಿನ ಜಿಲ್ಲಾ ಘಟಕ ಉತ್ತಮ ವಾಗಿ ಕೆಲಸ ಮಾಡುತ್ತಿದೆ. ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ನೇತೃತ್ವದ ತಂಡದ ಕೆಲಸ ಮೆಚ್ಚಲೇಬೇಕೆಂದರು.
ಶರಣ ಶ್ರೇಷ್ಠರು ಕೃತಿ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಶರಣಗೌಡ ಕಂದಕೂರ, ವಚನ ಮತ್ತು ಶರಣ ಸಾಹಿತ್ಯವನ್ನು ಮನನ ಮಾಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದರು. ಪ್ರತಿಯೊಬ್ಬರು ಪುಸ್ತಕಗಳನ್ನು ಓದುವ ಹವ್ಯಾಸ ರೂಡಿ ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಕಾರಣ ಓದು ನಮ್ಮ ಮಸ್ತಕವನ್ನು ವೃದ್ಧಿ ಮಾಡುತ್ತದೆ. ನಾವು ಕೂಡಾ ಈ ದಾರಿಯಲ್ಲಿ ನಡೆದು ಶರಣರ ಬದುಕನ್ನು ಅನುಸರಿಸಬೇಕಾಗಿದೆ ಎಂದರು.
ಶರಣ ಶ್ರೇಷ್ಠರು ಕೃತಿ ಸಂಪಾದಕ ಡಾ.ಪ್ರದೀಪಕುಮಾರ ಹೆಬ್ರಿ ಮಾತನಾಡಿ, ಶರಣರು ಮಾಡಿದ ಕ್ರಾಂತಿ ಅದ್ಬೂತ, ಅವರ ಬದುಕಿನ ಶೈಲಿ ರೂಡಿಸಿಕೊಂಡರೇ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದೆಂದರು.
‘ಸಂತನೆಂದರೆ ಯಾರು, ದಿವ್ಯತೆಯ ಅರಿತವನು’ ಕೃತಿ ಕುರಿತು ವೆಂಕಟರಾವ ಕುಲಕರ್ಣಿ ಹಾಗೂ ಶರಣ ಶ್ರೇಷ್ಠರು ಕೃತಿ ಬಗ್ಗೆ ಮಹಾಂತೇಶ ಮಸ್ಕಿ ಮಾತನಾಡಿದರು.
ಗುರುಮಠಕಲ್ ಖಾಸಾ ಮಠದ ಶಾಂತವೀರ ಗುರು ಮುರುಘ ರಾಜೇಂದ್ರ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು, ಶ್ರೀನಿವಾಸ ಜಾಲವಾದಿ, ರಮೇಶ ಕೋಟ್ಯಾಳ, ಸೋಮಶೇಖರ ಗಾಂಜಿ, ಡಾ.ಭಾಗ್ಯವಂತಿ ಕೆಂಭಾವಿ, ಲಿಂಗಣ್ಣ ಪಡಶೆಟ್ಟಿ, ಶಿವಕುಮಾರ ಬಂಡೋಳಿ ಅತಿಥಿಗಳಾಗಿ ಭಾಗವಹಿಸಿದ್ದರು. ಶರಣು ಸಂಗಡಿ ಗರಿಂದ ಪ್ರಾರ್ಥನೆ ನಡೆಯಿತು, ಜ್ಯೋತಿ ಲತಾ ತಡಿಬಿಡಿಮಠ ನಿರೂಪಿಸಿರು.
ಡಾ. ಭೀಮರಾಯ ಲಿಂಗೇರಿ, ಬಸವರಾಜ ಮೊಟನಳ್ಳಿ, ಚನ್ನಪ್ಪಗೌಡ ಮೊಸಂಬಿ, ಅಯ್ಯಣ್ಣ ಮಾಸ್ಟರ್ ಹುಂಡೆಕಾರ, ದೇವರಾಜ್ ವರ್ಕನಳ್ಳಿ, ಡಾ.ರಮಾದೇವಿ ಮೊಟಾರ, ಅಂಬಿಕಾ ಮಾಲಿ ಪಾಟೀಲ್ ಇತರರು ಇದ್ದರು. ಇದೇ ವೇಳೆ ಪರಿಷತ್ತಿಗೆ 411ಸದಸ್ಯರನ್ನು ಮಾಡಿಸಿದ ಉಪಾಧ್ಯಕ್ಷ ಆರ್ ಮಹಾದೇವಪ್ಪ ಅಬ್ಬೆತುಮಕೂರುರಿಗೆ ವಿಶೇಷ ಸನ್ಮಾನ ನಡೆಯಿತು.
ಡಾ.ಸೋಮಶೇಖರ ಅಧ್ಯಕ್ಷರಾಗಲಿ: ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ಅವಧಿಗೆ ನಿವೃತ ಐಎಎಸ್ ಅಧಿಕಾರಿಗಳಾದ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ ಅಧ್ಯಕ್ಷರಾಗಬೇಕು ಎಂದು ಸಾಹಿತಿ ಮಂಡ್ಯದ ಡಾ.ಪ್ರದೀಪ ಕುಮಾರ ಹೆಬ್ರಿ ಅಭಿಪ್ರಾಯಪಟ್ಟರು. ಇದಕ್ಕಾಗಿ ಈಗಿನಿಂದಲೇ ಮತ್ತು ಗಿರಿ ಜಿಲ್ಲೆಯಿಂದಲೇ ಕಾರ್ಯ ಆರಂಭಿಸಬೇಕು ಎಂದರು.