ಡಿ.28 ರಿಂದ 3 ದಿನ ನಡೆಯಲಿರುವ ಕಾರ್ಯಕ್ರಮ | ಶಾಂತವೀರ ಶ್ರೀಗಳಿಗೆ ಅಧಿಕೃತ ಆಹ್ವಾನ ಪತ್ರ | 50ಕ್ಕೂ ಹೆಚ್ಚು ವಿಜ್ಞಾನಿಗಳ ದಂಡು ಭಾಗಿ | ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿಶ್ವಾರಾಧ್ಯ ಸತ್ಯಂಪೇಟ ಆಯ್ಕೆ | ಕಲ್ಯಾಣದ ಜಿಲ್ಲೆಗಳ ವಿದ್ಯಾರ್ಥಿಗಳು ಸದುಪಯೋಗ ಪಡೆಯಲು ಕರೆ
ಗುರುಮಠಕಲ್: ಗಡಿ ಜಿಲ್ಲೆಯ ಯಾದಗಿರಿಯಲ್ಲಿ ರಾಜ್ಯ ಮಟ್ಟದ 5 ನೇ ವೈಜ್ಞಾನಿಕ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಹೇಳಿದರು.
ಪಟ್ಟಣದ ಖಾಸಾಮಠದ ಆವರಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೂಡನಂಬಿಕೆ ತೊರೆದು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಜೀವಿಸಲು ವಿದ್ಯಾರ್ಥಿಗಳನ್ನು ವಿಜ್ಞಾನದತ್ತ ಆಕರ್ಷಿಸುವ ಕಾರ್ಯವಾಗಲಿದೆ ಎಂದರು.
ವಿಜ್ಞಾನ ಸಾಕಷ್ಟು ಮುಂದುವರೆದಿದೆ, ನಮ್ಮ ಮನಸ್ಸು ಬದಲಾಗಬೇಕು. ಈ ಭಾಗದಲ್ಲಿ ಹೆಚ್ಚಾಗಿ ದೆವ್ವ, ಭೂತ ಎನ್ನುವ ನಂಬಿಕೆಯೂ ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಪವಾಡ ಅನಾವರಣ ಮಾಡಿ ಮೂಢನಂಬಿಕೆ ಹೋಗಲಾಡಿಸುವ ಉದ್ದೇಶವಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯ ಮಟ್ಟದ 5 ನೇ ವೈಜ್ಞಾನಿಕ ಸಮ್ಮೇಳನ ತಯಾರಿ ಭರದಿಂದ ನಡೆಯುತ್ತಿದೆ. ವೈಚಾರಿಕತೆ ಮೈಗೂಡಿಸಿಕೊಂಡ ವಿಶ್ವಾರಾಧ್ಯ ಸತ್ಯಂಪೇಟ ಅವರನ್ನು ಸಮ್ಮೇಳನ ದ ಸರ್ವಾಧ್ಯಕ್ಷ ಆಯ್ಕೆ ಮಾಡಲಾಗಿದೆ ಎಂದರು.
ಯಾದಗಿರಿಯಲ್ಲಿ ಡಿ. 28ರಂದು ಮೈಲಾಪೂರ ಅಗಸಿಯಿಂದ ಮೆರವಣಿಗೆ, 29 ರಂದು ಕಾರ್ಯಕ್ರಮ ಉದ್ಘಾಟನೆ ಜರುಗಲಿದ್ದು, 8 ಸಾವಿರ ಜನ, 25 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಜೀವಮಾನದಲ್ಲಿ ವಿಶಿಷ್ಟ ಸಾಧನೆ ಮಾಡಿದವರಿಗೆ ಸನ್ಮಾನ, ಬಳಿಕ ಹಲವು ಗೋಷ್ಠಿಗಳು ನಡೆಯಲಿವೆ.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಮೂಲಕ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಮಾನವ ಬಂಧುತ್ವ ವೇದಿಕೆ, ಯಾದಗಿರಿ ಜಿಲ್ಲೆಯ ಸಂಘಟನೆಗಳು ಹಾಗೂ ಇಸ್ರೋ, ನೆಹರು ತಾರಾಲಯ, ಭಾರತದ ವಾಯುಪಡೆ, ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ಮ್ಯೂಸಿಯಂ, ಮೊಬೈಲ್ ಪ್ಲಾನಿಟೋರಿಯಂ, ಕೆ. ಸ್ಟೆಪ್ಸ್, ನ್ಯಾಶನಲ್ ಏರೋನಾಟಿಕಲ್ಸ್ ಲ್ಯಾಬೋರೋಟರಿ, ಡಿಆರ್ ಡಿಓ, ಸಿ.ಎಫ್ ಟಿ ಆರ್ ಐ ಸಹಕಾರ ನೀಡುತ್ತಿವೆ.
ಶಾಲೆಗಳಿಗಳಿಗೆ ಭೇಟಿ ನೀಡಿ ಮಕ್ಕಳಿಗೆ ಅರಿವು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ವೈಜ್ಞಾನಿಕ ಸಮ್ಮೇಳನದ ಸದುಪಯೋಗ ಪಡೆಯಲು ತಿಳಿಸಿದರು.
ಇಸ್ರೋ, ನೆಹರು ತಾರಾಲಯ ಸೇರಿ ಇತರೆ 50 ಜನ ವಿಜ್ಞಾನಿಗಳು ಆಗಮಿಸುತ್ತಿದ್ದಾರೆ. ಎಐ ದುರ್ಬಳಕೆ ಕುರಿತು ಜಾಗೃತಿ ಮೂಡಿಸಿಲು ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ. ಇದೆ ವೇಳೆ 30 ಜನ ಸಾಧಕ ಮಹಿಳೆಯರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಡಿಡಿಯು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಭೀಮಣ್ಣ ಭೇಟಿ ಮಾತನಾಡಿ, ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಉಪಹಾರ, ಊಟದ ವ್ಯವಸ್ಥೆ ಇರುತ್ತದೆ. ಇಲ್ಲರೂ ತಪ್ಪದೆ ಭಾಗವಹಿಸಿ ಕಾರ್ಯಕ್ರಮದ ಲಾಭ ಪಡೆಯಬೇಕು ಎಂದರು.
ಇದಕ್ಕೂ ಮೊದಲು ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಅವರಿಗೆ ಸಮ್ಮೇಳನದ ಅಧಿಕೃತ ಆಹ್ವಾನ ನೀಡಲಾಯಿತು. ಗೋಷ್ಠಿಯಲ್ಲಿ ಪೂಜ್ಯ ಶಾಂತವೀರ ಶ್ರೀಗಳು, ಸಿದ್ಧಲಿಂಗಮ್ಮ ಹುಲಿಕಲ್, ಸಂಜೀವ ಚಂದಾಪುರ, ಮಲ್ಲೇಶಯ್ಯ ಸ್ವಾಮಿ ಇತರರು ಇದ್ದರು.
