ಯಾದಗಿರಿ: ನಕಲಿ ಜಾತಿ-ಪ್ರಮಾಣ ಪತ್ರ ವಿರೋಧಿಸಿ ನಡೆದ ಜನಪರ ಹೋರಾಟದಲ್ಲಿ ಹೋರಾಟಗಾರರ ವಿರುದ್ಧ ದಾಖಲಿಸಿದ ಪ್ರಕರಣವನ್ನು ತಕ್ಷಣವೇ ರದ್ದುಪಡಿಸುವಂತೆ ಯಾದಗಿರಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ ವತಿಯಿಂದ ಮನವಿ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ ಮಾತನಾಡಿದ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ, 2025ರ ಆ.13 ರಂದು ಯಾದಗಿರಿ, ಶಹಾಪುರ, ಶೋರಾಪುರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ನಮ್ಮ ವಾಲ್ಮೀಕಿ ಸಮಾಜದ ಗುರುಗಳು ಹಾಗೂ ಸಮುದಾಯದ ಮಹಿಳೆಯರು, ಪುರುಷರು, ಹಿರಿಯರು, ಯುವಕರು, ವಾಲ್ಮೀಕಿ ಸಂಘಗಳ ನಾಯಕರು ನ್ಯಾಯಕ್ಕಾಗಿ, ಸತ್ಯಕ್ಕಾಗಿ ನಕಲಿ ಜಾತಿ ಪ್ರಮಾಣ ಪತ್ರಗಳು ನೀಡುವ ದುಷ್ಕೃತ್ಯಗಳ ವಿರುದ್ಧ ಒಗ್ಗೂಡಿಕೊಂಡು ಶಾಂತಿಯುತ ಹೋರಾಟ ನಡೆಸಿದ್ದೇವೆ.
ಈ ಹೋರಾಟ ಕೇವಲ ಜಿಲ್ಲೆಯಲ್ಲಿ ಅಲ್ಲ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿಯೂ ಪ್ರತಿಧ್ವನಿಸಿತು. ಎಲ್ಲಾ ಪ್ರಮುಖ ಪತ್ರಿಕೆಗಳು ಮಾಧ್ಯಮಗಳಲ್ಲಿ ಇದನ್ನು ಪ್ರಚಾರಪಡಿಸಲಾಯಿತು. ಆದರೆ ವಿಷಾದ ಸಂಗತಿಯನೆಂದರೆ ಈ ಪ್ರಜಾಪ್ರಭುತ್ವದಲ್ಲಿ ಹಕ್ಕಿಗಾಗಿ ನಡೆದ ಹೋರಾಟವನ್ನು ಸಹಿಸದೇ, ನಮ್ಮ ಸಮುದಾಯದ ಹಕ್ಕನ್ನು ಗೌರವವನ್ನು ಸಹಿಸದೇ ಕೆಲವು ದುರುದೇಶ ಶಕ್ತಿಗಳು ದುರಂತಕ್ಕೆ ಇಳಿದು ರಾಜ್ಯ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಾದ ಉತ್ತರ ಕರ್ನಾಟಕದ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಮರೆಪ್ಪ ನಾಯಕ ಮಗಧಂಪುರ ಮತ್ತು ಶ್ರವಣ ಕುಮಾರ ಡಿ. ನಾಯಕ ಹಾಗೂ ಗುರು ಸುಬೇದಾರ ನರಬೋಳ ಇತರ ಹೋರಾಟಗಾರರ ಮೇಲೆ ಸುಳ್ಳು ಆರೋಪಗಳು ಹೊರೆಸಿ ಯಾದಗಿರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.
ಇದು ಕೇವಲ ಒಬ್ಬರ ಹಾಗೂ ಇನ್ನೀತರರ ಮೇಲಿನ ಪ್ರಕರಣವನ್ನು ಸಮಗ್ರ ಪರಿಶಿಷ್ಟ ಪಂಗಡದ ಸಮುದಾಯದ ಮೇಲಿನ ದೌರ್ಜನ್ಯ ಹಾಗೂ ನಮ್ಮ ಸ್ವಾಭಿಮಾನ ಕುಗ್ಗಿಸುವ ಯತ್ನ ಎಂದು ನಾವು ಭಾವಿಸುತ್ತೇವೆ ಅತ್ಯಂತ ನೋವಿನ ಸಂಗತಿಯೆನೆಂದರೆ ನಮ್ಮ ಸಮುದಾಯದ ಗುರುವಾದ ಮಹರ್ಷಿ ವಾಲ್ಮೀಕಿಯವರ ಕುರಿತಂತೆ ರಾಮಾಯಣದಂತ ಜಗತ್ತ್ವಸಿದ್ದ ಕಾವ್ಯವನ್ನು ಕೊಟ್ಟವರ ಕುರಿತಂತೆ ಶಿವಾಜಿ ಮೆಟೆಗಾರ ಮತ್ತು ಲಚ್ಚಪ್ಪ ಜಮಾದಾರ ಎಂಬುವವರು ಇತಿಹಾಸ ಚರಿತ್ರೆ ತಿರುಚಿ ಅವರು ತಮ್ಮ ಸಮುದಾಯಕ್ಕೆ ಸೇರಿದವರು ಎಂದು ಸುಳ್ಳು ಹೇಳಿಕೆ ಕೊಡುವ ಮುಕಾಂತರ ಲಕ್ಷಾಂತರ ವಾಲ್ಮೀಕಿ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.
ಆದರೂ ನಾವು ವಾಲ್ಮೀಕಿ ಸಮಾಜದ ಮುಖಂಡರು ಸಹಾನುಭೂತಿಗಳಾಗಿದ್ದು ಈ ರೀತಿ ಮಾತು ಆಡಿದವರ ಮೇಲೆ ನಮ್ಮಿಂದ ಯಾವ ಪ್ರಕರಣ ದಾಖಲಿಸಿಲ್ಲ. ಸಹನೆ ಶ್ರೇಷ್ಠ ಗುಣ ಎಂಬ ಮನೋಭಾವದಿಂದ ನಾವು ಸಹಿಸಿಕೊಂಡೆವು ಆದರೆ ನಮ್ಮ ಸಹನೆಯನ್ನು ದೌರ್ಬಲ್ಯ ಎಂದುಕೊಂಡು ಹೋರಾಟಗಾರರ ಮೇಲೆ ಸುಳ್ಳು ಆರೋಪ ಮಾಡಿರುವುದು ಅತ್ಯಂತ ಅನ್ಯಾಯಕರ. ನಮ್ಮ ಸಮಾಜದ ಹೋರಾಟಗಾರರ ಮೇಲೆ ವಿರುದ್ಧ ದಾಖಲಿಸಿದ ಸುಳ್ಳು, ಪ್ರಕರಣವನ್ನು ತಕ್ಷಣವೇ ರದ್ದುಪಡಿಸಬೇಕು.
ಸಮುದಾಯವನ್ನು ಪ್ರಚೋದನೆಗೊಳಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ನಮ್ಮ ಮನವಿಗೆ ಸ್ಪಂದಿಸಿ ಈ ಅನ್ಯಾಯದ ವಿರುದ್ಧ ಮತ್ತೆ ಬೃಹತ್ ಪ್ರಮಾಣ ಹೋರಾಟಕ್ಕೆ ಎಡೆ ಮಾಡಿ ಕೊಡದೇ ಸೂಕ್ತ ನ್ಯಾಯ ನೀಡುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿದ್ದಲಿಂಗಪ್ಪ ನಾಯಕ. ದೊಡ್ಡಯ್ಯ ನಾಯಕ. ಮರೆಪ್ಪ ಪ್ಯಾಟಿ. ಸಾಹೇಬಗೌಡ ಗೌಡಗೇರ. ಭೀಮನಗೌಡ. ಭೀಮರಾಯ ಠಾಣಗುಂದಿ. ಚಂದ್ರಕಾಂತ ಹತ್ತಿಕುಣಿ. ಅಂಬು ನಾಯಕ. ಸಾಬಣ್ಣ ಬಗ್ಲಿ. ಶ್ರೀನಿವಾಸ ಯಕ್ಷಿಂತಿ. ಸಾಯಬಣ್ಣ ಮೂಡಬಳ. ಮೋನಪ್ಪ ಯಾದಗಿರಿ. ಹಣಮಂತ್ರಾಯ ದೊರೆ ಟೋಕಪುರ. ಬಸವರಾಜ ಹತ್ತಿಕುಣಿ. ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಭಾಗವಹಿಸಿದ್ದರು.
