ವಿಶೇಷಚೇತನರಿಗೆ ಉತ್ತಮ ಶಿಕ್ಷಣ ನೀಡಿ | ಸಮಾಜದ ಪ್ರತಿ ಕ್ಷೇತ್ರ ದಲ್ಲಿ ಅವಕಾಶ ಕಲ್ಪಿಸಿ
ಯಾದಗಿರಿ: ವಿಕಲಚೇತನರು, ಸಾಮಾನ್ಯ ಮಕ್ಕಳಿಗೂ ಪ್ರೇರಣೆಯಾದ ಉದಾಹರಣೆಗಳಿವೆ. ಅವರು ದೇಹದಿಂದ ಮಾತ್ರ ವಿಕಲಚೇತನರಾಗಿದ್ದರೂ ಶಿಕ್ಷಣ, ಕ್ರೀಡೆ, ಸಂಗೀತ ಮತ್ತು ಪ್ರತಿಯೊಂದರಲ್ಲಿ ಸಾಧನೆ ಮಾಡಿದ್ದಾರೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಿಶೇಷ ಚೇತನರನ್ನು ಪ್ರೋತ್ಸಾಹ ನೀಡಿ, ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಸಹ ಸರ್ಕಾರದ ಪ್ರತಿಯೊಂದು ಸೌಲಭ್ಯಗಳನ್ನು ತಲುಪಿಸಬೇಕು ಎಂದರು.
ವಿಕಲಚೇತನರು ಕೂಡ ಮನುಷ್ಯರೇ. ಅವರಿಗೂ ಭಾವನೆಗಳಿವೆ, ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸುವ ಪರಿಪಾಠವೂ ಕೆಲವೆಡೆ ಕಾಣಿಸುತ್ತಿದೆ. ಅಥವಾ ಕೆಲವೆಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದು ಇದೆ. ಇದು ತಪ್ಪು. ಅಂಗವಿಕಲರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಗಳಲ್ಲಿ ಗುರುತಿಸಿಕೊಳ್ಳಬಲ್ಲರು.
ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷ ಣಿಕ, ಮಾಹಿತಿ ತಂತ್ರಜ್ಞಾನ, ಮನೊರಂಜನೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಬಲ್ಲರು. ವಿಶೇಷವಾದ ಸಾಧನೆಯನ್ನು ಮಾಡಬಲ್ಲರು. ಸಮಾಜದಲ್ಲಿ ಅವರ ಮಹತ್ವ ಜನರಿಗೆ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ವರ್ಷದ ಒಂದು ದಿನವನ್ನು ಅವರಿಗಾಗಿ ಮೀಸಲಿರಿಸಲಾಗಿದೆ. ಅದುವೇ ಡಿಸೆಂಬರ್ 3. ಇದು ಜಗತ್ತಿನೆಲ್ಲೆಡೆ ವಿಶ್ವ ಅಂಗವಿಕಲ ದಿನವನ್ನಾಗಿ ಆಚರಿಸಲಾಗುತ್ತದೆ.
ಮೂಲತಃ ಈ ದಿನವನ್ನು ಆರಂಭಿಸಿದ್ದು ವಿಶ್ವಸಂಸ್ಥೆ. 1992 ರಲ್ಲಿ. ಈ ದಿನದಂದು ಜಗತ್ತಿನಲ್ಲಿರುವ ಅನೇಕ ವಿಕಲಚೇತನರ ಯಶೋಗಾಥೆಗಳನ್ನು ಸ್ಮರಿಸಲಾಗುತ್ತದೆ. ಜೊತೆಗೆ ಅವರ ಸ್ವಾವಲಂಬನೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಅವರನ್ನು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮುಖ್ಯವಾಹಿನಿಗಳಿಗೆ ಸೇರಿಸುವ ಕುರಿತಂತೆ ಜನಜಾಗೃತಿಯನ್ನು ಮೂಡಿಸಲಾಗುತ್ತದೆ. ಪ್ರತಿ ವರ್ಷ ಈ ದಿನವನ್ನು ವಿವಿಧ ಥೀಮ್‌ಗಳಡಿಯಲ್ಲಿ ಆಚರಿಸಲಾಗುತ್ತದೆ. ಅಂಗವಿಕಲರಿಗೂ ಸಮಾಜದ ಇತರ ವ್ಯಕ್ತಿಗಳಂತೆ ಸಮಾನವಾದ ಅವಕಾಶಗಳು ಸಿಗಬೇಕು, ಅವರಿಗೆ ಯೋಗ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಸುಶೀಲಾ.ಬಿ ಅವರು ಮಾತನಾಡಿ, ವಿಕಲಚೇತನರು ಒಂದು ವಿಶೇಷವಾದ ಶಕ್ತಿಯನ್ನು ಹೊಂದಿರುತ್ತಾರೆ. ಸಾಮಾನ್ಯ ವ್ಯಕ್ತಿಗಿಂತ ಅವರಲ್ಲಿ ನೆನಪಿನ ಶಕ್ತಿ ಹೆಚ್ಚಾಗಿ ಇರುತ್ತದೆ. ಅವರಿಗೆ ಅದು ದೇವರು ಕೊಟ್ಟ ವರ. ಇಂದು ನಾವು ವಿಕಲಾಂಗ ವ್ಯಕ್ತಿಗಳ ಅಂತರಾಷ್ಟ್ರೀಯ ದಿನ (ಡಿಸೆಂಬರ್ 3) 1992 ರಿಂದ ವಿಶ್ವಸಂಸ್ಥೆಯಿಂದ ಉತ್ತೇಜಿಸಲ್ಪಟ್ಟ ಅಂತರರಾಷ್ಟ್ರೀಯ ಆಚರಣೆಯಾಗಿದೆ . ಇದನ್ನು ವಿಶ್ವ ದಲ್ಲಿ ವಿವಿಧ ಹಂತದ ಯಶಸ್ಸಿನೊಂದಿಗೆ ಆಚರಿಸಲಾಗುತ್ತದೆ ಎಂದು ಹೇಳಿದರು.
ಈ ದಿನದ ಆಚರಣೆಯು ಅಂಗವೈಕಲ್ಯ ಸಮಸ್ಯೆಗಳಿಗೆ ಸ್ಪಂದಿಸಲು ತಿಳುವಳಿಕೆಯನ್ನು ಉತ್ತೇಜಿಸಲು ಮತ್ತು ವಿಕಲಾಂಗ ವ್ಯಕ್ತಿಗಳ ಘನತೆ , ಹಕ್ಕುಗಳು ಮತ್ತು ಯೋಗಕ್ಷೇಮಕ್ಕಾಗಿ ಬೆಂಬಲವನ್ನು ಸೂಚಿಸುವ ಹಾಗೂ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.
ಅದರಂತೆ ರಾಜಕೀಯ , ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನದ ಪ್ರತಿಯೊಂದು ಅಂಶಗಳಲ್ಲಿ ವಿಕಲಾಂಗ ವ್ಯಕ್ತಿಗಳ ಏಕೀಕರಣದಿಂದ ಪಡೆಯಬಹುದಾದ ಲಾಭಗಳ ಕುರಿತು ಅರಿವನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ . ಇದನ್ನು ಮೂಲತಃ 2007 ರವರೆಗೆ ” ಅಂಗವಿಕಲ ವ್ಯಕ್ತಿಗಳ ಅಂತರಾಷ್ಟ್ರೀಯ ದಿನ ” ಎಂದು ಕರೆಯಲಾಗುತ್ತಿತ್ತು. ಪ್ರತಿ ವರ್ಷವೂ ಈ ದಿನವು ವಿಭಿನ್ನ ವಿಷಯದ ಮೇಲೆ ಕೇಂದ್ರೀಕರಿಸುತ್ತದೆ ಎಂದು ಅವರು ಹೇಳಿದರು.
2024- 25 ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಕಲಚೇತನರನ್ನು ಸನ್ಮಾನಿಸಲಾಗಿದೆ. ಕ್ರೀಡೆಯಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳಿಗೆ ಪ್ರಥಮ ಹಾಗೂ ದ್ವಿತೀಯ, ತೃತೀಯ ಬಹುಮಾನವನ್ನು ಇಂದು ಗಂಡು, ಹೆಣ್ಣು ಮಕ್ಕಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾ ರ, ಮರಿಯಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿ ರ್ದೇಶಕ ವೀರಣ್ಣಗೌಡ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಶರಣಬಸಪ್ಪ ಪಾಟೀಲ್, ಪ್ರಾಂಶುಪಾಲ ಸುಭಾಷ್ ಚಂದ್ರ ಕೌಲಗಿ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ರಾಜು ಬಾವಿಹಳ್ಳಿ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.